ಕೋಟೆನಾಡಿನಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳು ನಾಪತ್ತೆ!
ಚಿತ್ರದುರ್ಗ: ಕಳೆದ ಎರಡು ದಿನಗಳಿಂದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳು ಇಂದು ಬೆಳಗ್ಗೆಯಿಂದ ನಾಪತ್ತೆಯಾಗಿವೆ. ನಿನ್ನೆ ಚಳ್ಳಕೆರೆ ತಾಲೂಕಿನ ಕೆರೆಯಾಗಳಹಳ್ಳಿಯ ಕೆರೆಯಲ್ಲಿ ಬೀಡು ಬಿಟ್ಟಿದ್ದ ಆನೆಗಳು ಓರ್ವ ವ್ಯಕ್ತಿಗೆ ತಿವಿದು ಗಾಯಗೊಳಿಸಿದ್ದವು. ಕಾಡಿನ ಕಾರಿಡಾರ್ ನಲ್ಲಿ ತೆರಳಬೇಕಿದ್ದ ಆನೆಗಳು ದಾರಿತಪ್ಪಿ ನೀರು, ಆಹಾರ ಸಿಗದ ಬಯಲುಸೀಮೆಗೆ ಬಂದಿದ್ದವು. ಅಣ್ತಮ್ಮ ಎಂದೇ ಜನರಿಂದ ಕರೆಸಿಕೊಳ್ಳುತ್ತಿರುವ ಮದಗಜಗಳು ಕೆರೆಯಾಗಳಹಳ್ಳಿ ಸಮೀಪದ ಕೆರೆಯಲ್ಲಿ ಬೀಡುಬಿಟ್ಟಿದ್ದವು. ಆಹಾರ ಕೊರತೆ ಮತ್ತು ಜನಗಳ ದಾಂಧಲೆಯಿಂದಾಗಿ ಆನೆಗಳು ಊರಿಗೆ ನುಗ್ಗಿ ಅವಾಂತರ ಸೃಷ್ಟಿಸಿದರೇನು ಗತಿ ಎಂಬ ಆತಂಕ ಸೃಷ್ಟಿಯಾಗಿತ್ತು.
ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಡ್ರೋಣ್ ಕ್ಯಾಮರಾ ಮೂಲಕ ಆನೆಗಳ ಚಲನವಲನದ ಮೇಲೆ ದೃಷ್ಟಿನೆಟ್ಟಿದ್ದರು. ಆನೆ ನೋಡಲು ಸೇರಿದ್ದ ಭಾರೀ ಜನಸ್ತೋಮವನ್ನು ಚದುರಿಸಲು ಹರಸಾಹಸಪಟ್ಟಿದ್ದರು. ಆದರೆ, ರಾತ್ರೋರಾತ್ರಿ ಆನೆಗಳು ಕೆರೆಯಾಗಳಹಳ್ಳಿಯ ಕೆರೆಯನ್ನು ಬಿಟ್ಟು ಮುಂದೆ ಸಾಗಿವೆ. ಬೆಳಗ್ಗೆ ನೋಡಿದರೆ ಆನೆಗಳು ನಾಪತ್ತೆಯಾಗಿವೆ. ರಾತ್ರಿ ವೇಳೆ ಆನೆಗಳು ಕನಿಷ್ಟ 20ಕಿ.ಮೀಟರ್ ನಷ್ಟು ದೂರ ಕ್ರಮಿಸುತ್ತವೆ ಎನ್ನಲಾಗುತ್ತದೆ. ಆದರೂ, ಈ ಕಾಡಾನೆಗಳು ಎಲ್ಲಿಗೆ ಹೋದವು ಎಂಬುದು ಮಾತ್ರ ಈವರೆಗೆ ಪತ್ತೆಯಾಗಿಲ್ಲ.
ಆನೆಗಳು ನಾಪತ್ತೆಯಾಗಿದ್ದು ಕೋಟೆನಾಡಿನ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಆನೆಯ ಹೆಜ್ಜೆ ಜಾಡು ಹಿಡಿದು ಹೊರಟಿದ್ದಾರೆ. ಅಲ್ಲದೆ ಬಂಡೀಪುರದಿಂದ ಪರಿಣಿತ ಅರಣ್ಯ ಅಧಿಕಾರಿಗಳು ಹಾಗೂ ಮೈಸೂರಿನಿಂದ ಸಾಕಾನೆಗಳನ್ನು ಕರೆಸಿ ಆನೆ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.




