ಪ್ರಮುಖ ಸುದ್ದಿ

ಸಂವಿಧಾನ ರಚನೆಯ ಸವಿವರ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ

ಯಾದಗಿರಿ: ಭಾರತ ದೇಶ ಸಮಗ್ರ ಅಭಿವೃದ್ಧಿ ಹೊಂದಬೇಕೆಂಬ ಚಿಂತನೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜನಾಂಗದವರಿಗೆ ಸಮಾನದ ಹಕ್ಕುಳನ್ನು ಕಲ್ಪಿಸಿದ್ದಾರೆ. ನಾವೆಲ್ಲ ಸಂವಿಧಾನಾತ್ಮಕವಾಗಿ ನಡೆದುಕೊಂಡಾಗ ಮಾತ್ರ ನಮ್ಮ ದೇಶ ಅಭಿವೃದ್ಧಿ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್.ಎಂ.ಖರ್ಗೆ ಹೇಳಿದರು.

ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 69 ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

1947 ಅಗಸ್ಟ್ 15 ರಂದು ಭಾರತ ದೇಶವು ಸ್ವಾತಂತ್ರ್ಯ ಪಡೆದ ಬಳಿಕ ಸಂಪೂರ್ಣ ಕಾರ್ಯೋನ್ಮುಖವಾದ ಸಂವಿಧಾನ ರಚನಾ ಸಮಿತಿಯು 2 ವರ್ಷ 11 ತಿಂಗಳು 17 ದಿನಗಳ ಕಾಲ ನಿರಂತರ ಶ್ರಮವಹಿಸಿ ಸಂವಿಧಾನದ ಪ್ರಾಥಮಿಕ ಕರಡು ಪ್ರತಿಯನ್ನು ಸಿದ್ಧಪಡಿಸಿತು. ಡಾ.ಬಿಆರ್.ಅಂಬೇಡ್ಕರ್ ಅವರು ವಿವಿಧ ದೇಶಗಳ ಸಂವಿಧಾನದ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸಂವಿಧಾನವನ್ನು ರಚಿಸಿದ ನಂತರ ಕರಡು ಪ್ರತಿಯ ಬಗ್ಗೆ ಚರ್ಚಿಸಿ ನವೆಂಬರ್ 26, 1949 ರಂದು ಸಂವಿಧಾನವನ್ನು ಅಂಗೀಕರಿಸಿದ ನಂತರ ಜನವರಿ 26, 1950 ರಂದು ಸಂವಿಧಾನ ಜಾರಿಗೆ ತರಲಾಯಿತು ಎಂದು ಸಂವಿಧಾನ ರಚನೆ ಇತಿಹಾಸವನ್ನು ಸವಿವರವಾಗಿ ಬಿಚ್ಚಿಟ್ಟರು.

ಶಾಂತಿ, ಅಹಿಂಸೆ, ಸಮಾನತೆ, ಸಹಬಾಳ್ವೆ ಮತ್ತು ಸರ್ವಧರ್ಮ ಸಹಿಷ್ಣುತೆಯು ಗಣತಂತ್ರ ವ್ಯವಸ್ಥೆಯ ಮೂಲ ಆಶಯವಾಗಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಸರ್ಕಾರ ನಡೆಸುವ ಮೂಲತತ್ವ ಸಂವಿಧಾನದಲ್ಲಿ ಅಡಗಿವೆ. ವಿಭಿನ್ನ ಧರ್ಮ, ಭಾಷೆ, ಆಚಾರ-ವಿಚಾರಗಳ ವೈವಿಧ್ಯತೆಯ ನಡುವೆಯೂ ದೇಶದ ಐಕ್ಯತೆಯನ್ನು ಕಾಪಾಡಿಕೊಂಡು ಬರುತ್ತಿರುವುದು ಸಂವಿಧಾನದ ಹೆಗ್ಗಳಿಕೆಯಾಗಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button