ಮಾನಸಿಕ ಆರೋಗ್ಯದಿಂದ ಸದೃಢ ಜೀವನ ಸಾಧ್ಯ ನ್ಯಾ. ತಯ್ಯಬಾ ಸುಲ್ತಾನಾ

ಮಾನಸಿಕ ಆರೋಗ್ಯ, ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ
ಯಾದಗಿರಿ, ಸುರಪುರ: ಮನುಷ್ಯ ಮಾನಸಿಕವಾಗಿ ಸದೃಢರಾಗಿರಬೇಕು. ಆಗ ಮಾತ್ರ ಜೀವನದಲ್ಲಿ ಯಾವುದೇ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ. ಒತ್ತಡ ಮತ್ತು ಖಿನ್ನತೆ ಉಂಟಾದಾಗ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಜೆಎಂಎಫ್ ಕೋರ್ಟ್‍ನ ಹಿರಿಯ ದಿವಾಣಿ ನ್ಯಾಯಾಧೀಶೆ ತಯ್ಯಬಾ ಸುಲ್ತಾನಾ ಹೇಳಿದರು.
ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಭಾನುವಾರ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ನಡೆದ ಮಾನಸಿಕ ಆರೋಗ್ಯ ಮತ್ತು ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನಸಿಕ ಅಸ್ವಸ್ಥರಿಗೆ ಕಾನೂನಿನ ನೆರವಿದ್ದು ಸದುಪಯೋಗ ಪಡೆಯಬೇಕು. ಮಾನಸಿಕವಾಗಿ ಅಸ್ವಸ್ಥರಾದಾಗ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಅಗತ್ಯವಿದೆ. ಮನುಷ್ಯನ ದೇಹ ಮತ್ತು ಮನಸ್ಸು ಆರೋಗ್ಯವಾಗಿದ್ದಾಗ ಮಾತ್ರ ಜೀವನ ಅರ್ಥಪೂರ್ಣವಾಗಿ ಸಾಗಲು ಸಾಧ್ಯ. ಭಾರತದಲ್ಲಿ ಮಾನಸಿಕ ಅಸ್ವಸ್ಥ ರೋಗಿಗಳಿಗೆ ಕಾನೂನು ಪ್ರಕಾರ ಸೂಕ್ತ ನೆರವು ನೀಡಲಾಗುತ್ತದೆ. ಅವರ ಹಕ್ಕುಗಳನ್ನು ಕಾಪಾಡಲು ಹಲವು ಕಾಯ್ದೆಗಳು ಜಾರಿಯಲ್ಲಿವೆ ಎಂದರು.
ದಿವಾಣಿ ನ್ಯಾಯಾಧೀಶ ಚಿದಾನಂದ ಬಡಿಗೇರ್ ಮಾತನಾಡಿ, ಪ್ರಸ್ತುತ ಮಾನವ ಜೀವನ ಒತ್ತಡಗಳಿಂದ ಕೂಡಿದೆ. ಒತ್ತಡದ ಜೀವನ ಶೈಲಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಮಾನಸಿಕವಾಗಿ ಬಾಧಿಸಲ್ಪಡುವ ವ್ಯಕ್ತಿಗೆ ಕಾನೂನಿನಲ್ಲಿ ಸೌಲಭ್ಯ ಮತ್ತು ರಕ್ಷಣೆಯಿದೆ.
ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ. ಭಗವತ್ ಅನವಾರ ಮಾತನಾಡಿ, ಜಿಲ್ಲೆಯಲ್ಲಿ ಮಾನಸಿಕ ತಜ್ಞರ ಕೊರತೆ ಇದೆ. ಈ ಮೊದಲಿಬ್ಬರು ವೈದ್ಯರು ಬಂದಿದ್ದರೂ ಅವರು ವರ್ಗಾವಣೆಯಾಗಿ ಹೋಗಿದ್ದಾರೆ. ಆದರೂ ಪಿಎಚ್‍ಸಿಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಸಣ್ಣ ಸಣ್ಣ ಮಾನಸಿಕ ಪ್ರಕರಣಗಳಿಗೆ ಮಾತ್ರೆಗಳು ಲಭ್ಯವಿವೆ. ಕೂಡಲೇ ಮಾನಸಿಕ ಆರೋಗ್ಯ ತಜ್ಞ ವೈದ್ಯರನ್ನಯು ನೇಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದು ಎಂದರು.
ಈಗಿನ ಜೀವನ ಒತ್ತಡ ಶೈಲಿ, ಆಹಾರ ಪದ್ಧತಿ, ಯೋಜನಾ ರಹಿತ ಜೀವನ ಮತ್ತು ಋಣಾತ್ಮಕ ವಿಚಾರಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕ ಅಸ್ವಸ್ಥತೆಗೂ ಕಾರಣವಾಗಲಿದೆ. ಮಾನಸಿಕ ಅಸ್ವಸ್ಥತೆಯನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಅವರು ಸಹಿತ ಸಮಾಜದಲ್ಲಿ ಎಲ್ಲರಂತೆ ಜೀವನ ನಡೆಸುವರು. ಕ್ರೀಡೆ, ಸಂಗೀತ, ಯೋಗ, ಪ್ರಾಣಾಯಾಮಗಳಿಂದ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ಮಾತನಾಡಿದರು. ಇದೇ ವೇಳೆ ಕೊರೋನಾ ವಾರಿಯರ್ಸ್‍ಗಳಾದ ಟಿಎಚ್‍ಒ ಡಾ. ಆರ್.ವಿ. ನಾಯಕ, ಡಾ. ಭಗವತ್ ಅನವಾರ, ವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರನ್ನು ನ್ಯಾಯಾಧೀಶರು ಸನ್ಮಾನಿಸಿದರು. ನ್ಯಾಯವಾದಿ ಆದಪ್ಪ ಹೊಸಮನಿ ಮಾನಸಿಕ ಆರೋಗ್ಯ ಕುರಿತಾದ ಕಾನೂನುಗಳ ಬಗ್ಗೆ ಮಾತನಾಡಿದರು. ಎಪಿಪಿ ರಾಘವೇಂದ್ರ, ದಿವ್ಯಾರಾಣಿ, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ, ಕಾರ್ಯದರ್ಶಿ ಗೋಪಾಲ ತಳವಾರ, ನ್ಯಾಯವಾದಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು ಇದ್ದರು. ವಕೀಲರಾದ ಯಲ್ಲಪ್ಪ ಹುಲಕಲ್ ಪ್ರಾರ್ಥಿಸಿದರು. ಮಲ್ಲಣ್ಣ ಭೋವಿ ನಿರೂಪಿಸಿದರು. ಸಂತೋಷ ಗಾರಂಪಳ್ಳಿ ವಂದಿಸಿದರು.
ವರದಿ. ಎನ್.ಎನ್.ಸುರಪುರ.