ಭರವಸೆಯ ಕ್ರೀಡಾಪಟು ಬಾಲಕಿ ಅರ್ಷಿಯಾ- ಹಾರಣಗೇರಾ
ಭರವಸೆಯ ಕ್ರೀಡಾಪಟು – ಕುಮಾರಿ ಅರ್ಷಿಯಾ
-ರಾಘವೇಂದ್ರ ಹಾರಣಗೇರಾ
ಪ್ರತಿಯೊಬ್ಬ ವ್ಯಕ್ತಿಯಲ್ಲಿ ವಿಶಿಷ್ಠವಾದ ಶಕ್ತಿ, ಸಾಮರ್ಥ್ಯ, ಪ್ರತಿಭೆ ಇರುತ್ತದೆ. ಇವುಗಳು ಅನಾವರಣವಾಗಬೇಕಾದರೆ ಆ ವ್ಯಕ್ತಿಯಲ್ಲಿ ತನ್ನ ಸಾಮರ್ಥ್ಯ, ಪ್ರತಿಭೆಯಲ್ಲಿ ಆತ್ಮವಿಶ್ವಾಸ, ಸಾಧಿಸುವ ಉತ್ಕಟತೆ, ತುಡಿತ, ಆಸಕ್ತಿ, ಛಲ ಇಟ್ಟುಕೊಂಡು ಕ್ರಿಯಾಶೀಲವಾಗಬೇಕು.
ಜೊತೆಗೆ ತಂದೆ ತಾಯಿ, ಗುರುಗಳ ಪ್ರೋತ್ಸಾಹ, ಒಳ್ಳೆಯ ಮಾರ್ಗದರ್ಶನ ಮತ್ತು ಪ್ರೇರಣೆ ತುಂಬಾ ಮುಖ್ಯವಾಗಿರುತ್ತದೆ. ಇಂತಹ ಹಿನ್ನೆಲೆಯಲ್ಲಿ ಕು. ಅರ್ಷಿಯಾ ತನ್ನ ಪಠ್ಯದ ಓದಿನ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ತನ್ನ ಕ್ರೀಡಾ ಪ್ರತಿಭೆಗೆ ಸಾಕ್ಷಿ ಒದಗಿಸಿದ್ದಾಳೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೊರನಹಳ್ಳಿ ಗ್ರಾಮದ ಗುಲಾಮ ರಸೂಲ್ ಮತ್ತು ಅನವರ ಬೇಗಂ ಸುಸಂಸ್ಕೃತ ದಂಪತಿಗಳ ಪ್ರೀತಿಯ ಮಗಳು. ತಂದೆ ಗುಲಾಮ ರಸೂಲ್ ಬಳೆಯ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ.
ಶಹಾಪುರ ನಗರದ ಭೋರುಕಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡುವಾಗ ಕ್ರೀಡೆಯಲ್ಲಿ ಆಸಕ್ತಿ ತೋರಿದ ಅರ್ಷಿಯಾ ದೈಹಿಕ ಶಿಕ್ಷಕ ರಂಗಪ್ಪ ಜಿರ್ಲೆ ಅವರ ಮಾರ್ಗದರ್ಶನ, ತರಬೇತಿ ಮತ್ತು ತಂದೆ ತಾಯಿ ಹಾಗೂ ಅಣ್ಣ ಅಕೀಫ್ ಅವರ ಪ್ರೋತ್ಸಾಹದೊಂದಿಗೆ ವಿವಿಧ ಕ್ರೀಡಾ ಪಂದ್ಯಾವಳಿಯಲ್ಲಿ ಭಾಗವಹಿಸತೊಡಗಿದರು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ 2015 ರಲ್ಲಿ ನಡೆದ ವಿವಿಧ ಕ್ರೀಡಾ ಪಂದ್ಯಾವಳಿಯಲ್ಲಿ 200 ಮೀಟರ್ ಓಟದ ಸ್ಪರ್ಧೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡರು.
2016 ರಲ್ಲಿ 200 ಮಿಟರ್ ಲಾಂಗ್ಜಂಪ್ ಕ್ರೀಡಾ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡು ತನ್ನ ಕ್ರೀಡಾ ಪ್ರತಿಭೆ ಸಾಕ್ಷಿ ಒದಗಿಸತೊಡಗಿದಳು. ಪ್ರೌಢಶಾಲಾ ವಿಭಾಗದಲ್ಲಿ 2017 ರಲ್ಲಿ ನಡೆದ ಕ್ರೀಡಾ ಪಂದ್ಯಾವಳಿಯಲ್ಲಿ 200 ಮಿಟರ್ ಲಾಂಗ್ ಜಂಪ್, ಟ್ರಿಪಲ್ ಜಂಪ್ ನಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಳು.
ಬೆಳಗಾವಿ, ಮಂಡ್ಯದ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅರ್ಷಿಯಾಗೆ 2016 ರಲ್ಲಿ ಯಾದಗಿರಿ ಜಿಲ್ಲಾ ಆಡಳಿತ “ಉತ್ತಮ ಕ್ರೀಡಾಪಟು” ಎಂಬ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ.
ಲಾಂಗ್ ಜಂಪ್, ಟ್ರಿಪಲ್ ಜಂಪ್, ಓಟ ಮುಂತಾದ ಕ್ರೀಡೆಗಳಲ್ಲಿ ತುಂಬಾ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳುವ ಅರ್ಷಿಯಾ ಪಠ್ಯದ ಓದಿನಲ್ಲಿಯೂ ಪ್ರತಿಭಾವಂತೆ. ಎಸ್ ಎಸ್.ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 82.56 ಅಂಕಗಳಿಸಿ ಪ್ರಥಮ ಸ್ಥಾನ ಪಡೆದು ಪ್ರಸ್ತುತ ಬಳ್ಳಾರಿಯ ಇಂಡಿಪೆಂಡೆಂಟ್ ಪಿ.ಯು. ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾಳೆ.
ಓದಿನಲ್ಲಿ ಮತ್ತು ಕ್ರೀಡೆಯಲ್ಲಿ ವಿಶಿಷ್ಟವಾದದ್ದನ್ನು ಸಾಧಿಸುವ ಹಂಬಲ ಹೊಂದಿರುವ. ಕು. ಅರ್ಷಿಯಾ, ಗುರು – ಹಿರಿಯರನ್ನು ಪ್ರೀತಿ, ಗೌರವದಿಂದ ಕಾಣುವ ವಿನಯವಂತೆ, ಸೌಜನ್ಯಮೂರ್ತಿ. ನಗು ಮುಖದ ಸ್ನೇಹಶೀಲೆ.
ಹೆಣ್ಣುಮಕ್ಕಳೆಂದರೆ ದ್ವೀತಿಯ ದರ್ಜೆಯಲ್ಲಿ ನೋಡುವ, ವಿವಿಧ ದರ್ಮ, ಜಾತಿ, ಜನಾಂಗ, ಪಂಥದ ಹಲವಾರು ಕಟ್ಟುಪಾಡುಗಳಲ್ಲಿ ಕಾಣುವ ಸಾಮಾಜಿಕ ಪರಿಸರದಲ್ಲಿ ನನ್ನ ತಂದೆ-ತಾಯಿ ಹಾಗೂ ಅಣ್ಣ ನನ್ನ ಓದಿಗೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಿ ಬೆಳೆಸುತ್ತಿದ್ದಾರೆ.
ಇಂತಹ ಕುಟುಂಬದ ಮಗಳಾಗಿದ್ದಕ್ಕೆ ತುಂಬಾ ಹೆಮ್ಮೆಪಡುತ್ತೇನೆ ಹಾಗೂ ನನ್ನಲ್ಲಿನ ಕ್ರೀಡಾ ಪ್ರತಿಭೆ ಗುರುತಿಸಿ ತರಬೇತಿ ನೀಡಿ ಬೆಳೆಸಿದ ದೈಹಿಕ ಶಿಕ್ಷಕ ರಂಗಪ್ಪ ಜಿರ್ಲೆ, ಶಾಲೆಯ ಮುಖ್ಯ ಗುರುಗಳನ್ನು ಮತ್ತು ಎಲ್ಲಾ ಶಿಕ್ಷಕರನ್ನು ಹಾಗೂ ಶಹಾಪುರದ ಹಿರಿಯ ದೈಹಿಕ ಶಿಕ್ಷಕರಾದ ಸುಧಾಕರ ಗುಡಿ, ಸೋಮಶೇಖರಯ್ಯ ಹಿರೇಮಠ, ಚಂದ್ರಶೇಖರ ವೈದ್ಯ ಮುಂತಾದವರು ನೀಡಿದ ಸ್ಪೂರ್ತಿ, ಪ್ರೇರಣೆಗೆ ತುಂಬು ಹೃದಯದಿಂದ ಕೃತಜ್ಞತೆಗಳನ್ನು ಅರ್ಪಿಸುತ್ತಾಳೆ. –
ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಹಾರ್ಡವರ್ಕ್ ತುಂಬಾ ಮುಖ್ಯ. ಶ್ರದ್ಧೆಯ ಓದು, ಪ್ರಮಾಣಿಕವಾದ ನಿರಂತರ ಪ್ರಯತ್ನ, ಕಠಿಣ ಪರಿಶ್ರಮ ಇದ್ದರೆ ಗುರಿ ಸಾಧಿಸಿ ಉಜ್ವಲ ಭವಿಷ್ಯ ತಮ್ಮದಾಗಿಸಿಕೊಳ್ಳಬಹುದು.
ಈ ಹಿನ್ನೆಲೆಯಲ್ಲಿ ಅರ್ಷಿಯಾ ತನ್ನ ಪಠ್ಯದ ಓದಿನ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಾಧನೆಯ ಮೂಲಕ ನಾಡಿನ ಹೆಮ್ಮೆಯ ಸುಪುತ್ರಿಯಾಗಿ ಮಾದರಿಯಾಗಲಿ ಎಂದು ಹಾರೈಸೋಣ.