ಫೆಬ್ರವರಿ 12ಕ್ಕೆ ಕಲಬುರಗಿ, ಜೇವರಗಿ, ಶಹಾಪುರಕ್ಕೆ ರಾಹುಲ್ ಗಾಂಧಿ ಆಗಮನ
ಬೆಂಗಳೂರು: ಫೆಬ್ರವರಿ 10ರಿಂದ ನಾಲ್ಕು ದಿನಗಳ ಕಾಲ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಫೆಬ್ರವರಿ 10ರಂದು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಫೆಬ್ರವರಿ 11ರಂದು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ವಿವಿದೆಡೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 12ರಂದು ರಾಯಚೂರು, ಯಾದಗಿರಿ ಮತ್ತು ಕಲಬುರಗಿಗೆ ಭೇಟಿ ನೀಡಲಿದ್ದಾರೆ. ಇನ್ನು ಫೆಬ್ರವರಿ 13ರಂದು ಕಲಬುರಗಿ ಮತ್ತು ಬೀದರ ಜಿಲ್ಲೆಯ ವಿವಿದೆಡೆ ಭೇಟಿ ನೀಡಲಿದ್ದಾರೆ. ಪಕ್ಷದ ವಿವಿಧ ಸಭೆ, ಸಮಾವೇಶಗಳಲ್ಲಿ ಪಾಲ್ಗೊಳ್ಳಲಿರುವ ರಾಹುಲ್ ಗಾಂಧಿ ಮಠ-ಮಾನ್ಯಗಳಿಗೂ ತೆರಳಿ ದರ್ಶನ ಪಡೆಯಲಿದ್ದಾರೆ ಎಂದು ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಫೆಬ್ರವರಿ 10ರಂದು ಕೊಪ್ಪಳದ ಹುಲಿಗೆಮ್ಮ ದೇಗುಲ ಹಾಗೂ ಗವಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 12ರಂದು ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ, ಫೆಬ್ರವರಿ 13ರಂದು ಮಾಜಿ ಸಚಿವ ದಿ.ಖಮರುಲ್ಲಾ ಇಸ್ಲಾಂ ಅವರ ನಿವಾಸಕ್ಕೆ ಭೇಟಿ ನೀಡಿ ಕುಟಂಬದವರಿಗೆ ಸಾಂತ್ವನ ಹೇಳಲಿದ್ದಾರೆ. ಬಳಿಕ ಬೀದರಿನ ಬಸವ ಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ.
ಫೆಬ್ರವರಿ 12ರಂದು ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಜೇವರಿಯ ಕ್ರೀಡಾ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ನವ ಚೈತನ್ಯ ಮೂಡಿದ್ದು ನೆಚ್ಚಿನ ಯುವ ನಾಯಕನ ಸ್ವಾಗತಕ್ಕೆ ಕಾಂಗ್ರೆಸ್ ಮುಖಂಡರು ಸಜ್ಜಾಗಿದ್ದಾರೆ.