ರಾಹುಲ್ ಗಾಂಧಿ ರೋಡ್-ಶೋ ಹೊಸ ಉತ್ಸಾಹ – ದರ್ಶನಾಪುರ
ಫೆ.12 ರಂದು ಶಹಾಪುರದಲ್ಲಿ ರಾಹುಲ್ ಗಾಂಧಿ ರೋಡ್-ಶೋ
ಯಾದಗಿರಿಃ ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆಬ್ರುವರಿ 12 ರಂದು ಮದ್ಯಾಹ್ನ 2 ಗಂಟೆಗೆ ನಗರಕ್ಕೆ ಆಗಮಿಸಲಿದ್ದು, ಹತ್ತಿಗೂಡೂರ ಕ್ರಾಸ್‍ನಿಂದ ಅವರನ್ನು ಸ್ವಾಗತಿಸಲಾಗುವುದು. ಆ ನಂತರ ನಗರ ಪ್ರವೇಶಿಸುತ್ತಿದ್ದಂತೆ ರೋಡ್-ಶೋ ನಡೆಯಲಿದ್ದು, ಇದು ಯುವಕರಲ್ಲಿ ಉತ್ಸಾಹ ತುಂಬಿದೆ ಎಂದು ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮನ ಹಿನ್ನೆಲೆಯಲ್ಲಿ, ರೋಡ್ ಶೋ ನಡೆಸುವ ಕಾರ್ಯಕ್ರಮ ನಿಮಿತ್ತ ಜಿಲ್ಲೆಯ ಶಹಾಪುರ ಸಮೀಪದ ಭೀಮರಾಯನ ಗುಡಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ರಾಹುಲ್ ಗಾಂಧಿಯವರ ಅಧ್ಯಕ್ಷತೆಯಲ್ಲಿ ಯಾದಗಿರಿ ಜಿಲ್ಲಾ ಮಟ್ಟದ ಬೃಹತ್ ಸಮಾವೇಶವನ್ನು ಶಹಾಪುರದಲ್ಲಿ ಆಯೋಜಿಸುವ ಕುರಿತು ಅನುಮತಿ ಕೇಳಲಾಗಿತ್ತು. ಆದರೆ ಸಮಯದ ಅಭಾವ ಮತ್ತು ಈ ಮೊದಲೇ ಜೇವರ್ಗಿ ಮತ್ತು ದೇವದುರ್ಗದಲ್ಲಿ ಸಮಾರಂಭಗಳು ನಡೆಸಲು ಪೂರ್ವ ನಿರ್ಧರಿತವಾಗಿದ್ದರಿಂದ, ನಗರದಲ್ಲಿ ಬರಿ ರೋಡ್-ಶೋ ನಡೆಸಲು ಅನುಮತಿ ಪಡೆಯಲಾಯಿತು.
ತೆರೆದ ವಾಹನದಲ್ಲಿ ರೋಡ್ ಶೋ ನಡೆಯಲಿದ್ದು, ರಾಹುಲ್ ಗಾಂಧಿಯವರ ಜೊತೆ ಸಿಎಂ ಸಿದ್ರಾಮಯ್ಯ, ವಿರೋಧ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ, ರಾಜ್ಯ ಉಸ್ತುವಾರಿ ವೇಣುಗೋಪಾಲ ಸೇರಿದಂತೆ ಪ್ರಮುಖ ನಾಯಕರು, ಸಚಿವರು ಭಾಗವಹಿಸಲಿದ್ದಾರೆ.
ಹೈದ್ರಾಬಾದ ಕನಾಟಕ ಭಾಗದಲ್ಲಿ ರಾಹುಲ್ ಗಾಂಧಿ ಯವರ ಪ್ರವಾಸದಿಂದ ಕಾಂಗ್ರೆಸ್‍ಮಯ ವಾತಾವರಣ ಸೃಷ್ಟಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್ ಇದ್ದರು.