ಸೋಮನಾಥನಲ್ಲಿ ಗೆಲುವಿನ ಮಂತ್ರ ಕಂಡಕೊಂಡರಾ ರಾಹುಲ್ ಗಾಂಧಿ!
ಗುಜರಾತ್: ಕಳೆದ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರು ಗುಜರಾತಿನ ಪ್ರಸಿದ್ಧ ಸೋಮನಾಥ ದೇಗುಲ ಸೇರಿದಂತೆ ವಿವಿಧ ದೇಗುಲಗಳ ಪ್ರದಕ್ಷಿಣೆ ಹಾಕಿದ್ದರು. ರಾಹುಲ್ ಗಾಂಧಿ ದೇಗುಲಗಳಿಗೆ ಸರಣಿ ಭೇಟಿ ನೀಡಿದ್ದು ಭಾರೀ ಸುದ್ದಿಯಾಗಿತ್ತು. ಆ ಮೂಲಕ ಪ್ರಧಾನಿ ಮೋದಿ ತವರಲ್ಲಿ ರಾಹುಲ್ ಗಾಂಧಿ ಬಿಜೆಪಿಗೆ ಟಾಂಗ್ ನೀಡಿದ್ದರು. ಪರಿಣಾಮ ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷ ಚೇತರಿಸಿಕೊಳ್ಳಲು ರಾಹುಲ್ ಅವರ ದೇಗುಲ ಭೇಟಿ ಸಹ ಸಹಕಾರಿ ಆಗಿದೆ ಎಂಬುದು ರಾಜಕೀಯ ವಿಶ್ಲೇಷಕರ ವಾದವಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಬಹುತೇಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗುತ್ತ ಸಾಗಿತ್ತು. ಆದರೆ, ರಾಹುಲ್ ಗಾಂಧಿ ಅವರ ರಾಜಕೀಯ ಜಾಣ್ಮೆಯೋ, ದೇಗುಲ ಪ್ರದಕ್ಷಿಣೆಯ ಮಹಿಮೆಯೋ ಗೊತ್ತಿಲ್ಲ. ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷ ಭಾರೀ ಚೇತರಿಕೆ ಕಂಡಿದೆ. ಬಿಜೆಪಿ 99 ಸ್ಥಾನ ಪಡಿದಿದ್ರೆ, ಕಾಂಗ್ರೆಸ್ 80 ಸ್ಥಾನಗಳನ್ನು ಪಡೆದು ಸಮಬಲದ ಸನಿಹ ಸಾಗಿದೆ.
ಹೀಗಾಗಿ, ಗುಜರಾತ್ ಚುನಾವಣಾ ಫಲಿತಾಂಶದಿಂದ ಸಂತುಷ್ಟರಾಗಿರುವ ರಾಹುಲ್ ಗಾಂಧಿ ಅಧಿಕಾರ ಸಿಗದಿದ್ದರೂ ಪರವಾಗಿಲ್ಲ. ಗುಜರಾತಿನ ಜನ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಗುಜರಾತಿನ ಜನರಿಗೆ ಥ್ಯಾಂಕ್ಸ್ ಎಂದಿರುವ ರಾಹುಲ್ ಮೂರು ದಿನ ಗುಜರಾತ್ ಪ್ರವಾಸ ಆರಂಭಿಸಿದ್ದಾರೆ. ಇಂದು ಸೋಮನಾಥ ದೇಗುಲಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗುಜರಾತ್ ಪ್ರವಾಸ ಆರಂಭಿಸುವ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ.