ಫೈನಾನ್ಸ್ ಸಾಲ ಕಟ್ಟಿ ಸುಸ್ತಾದ ಯುವ ರೈತ, ಪತ್ರ ಬರೆದಿಟ್ಟು ಆತ್ಮಹತ್ಯೆ
ಸಾಲಕ್ಕೆದರಿ ಯುವ ರೈತ ಆತ್ಮಹತ್ಯೆ
ಫೈನಾನ್ಸ್ ಸಾಲ ಕಟ್ಟಿ ಸುಸ್ತಾದ ಯುವಕ ಪತ್ರ ಬರೆದಿಟ್ಟು ಆತ್ಮಹತ್ಯೆ
ಯಾದಗಿರಿಃ ಸಾಲಕ್ಕೆದರಿದ್ದರೂ ಹಾಗೂ ಹೀಗೂ ಮಾಡಿ ಫೈನಾನ್ಸ್ ನಲ್ಲಿ ತೆಗೆದುಕೊಂಡ ಸಾಲ ಕಟ್ಟಿದ್ದರೂ ಇನ್ನೂ ಬಡ್ಡಿ ಕಟ್ಟಬೇಕು ಇಲ್ಲವಾದಲ್ಲಿ ಬ್ಲ್ಯಾಂಕ್ ಚಕ್ ಕೊಟ್ಟಿದಿಯಲ್ಲ ಕೇಸ್ ಹಾಕ್ತಾವೇ ಎಂದು ಧಮಕಿ ಹಾಕಿದ ಬ್ಯಾಂಕ್ ನವರ ವಸೂಲಾತಿಗೆ ಅಂಜಿ ಪತ್ರ ಬರೆದು ವಿಷ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಹಾಪುರ ನಗರದ ಹಳಿಸಗರ ಭಾಗದಲ್ಲಿ ನಡೆದಿದೆ.

ನಿಂಗಪ್ಪ ಹಳಿಮನಿ (32) ಎಂಬ ಯುವ ರೈತನೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. ನಿನ್ನೆ ರಾತ್ರಿ 2 ಗಂಟೆ ನಂತರ ಸಾಲದ ವಿಷಯ ಬರೆದು ಇಹಲೋಕ ತ್ಯೇಜಿಸುವ ಕುರಿತು ಬರೆದು ತನ್ನ ಮೊಬೈಲ್ ನಲ್ಲಿ ಸ್ಟೇಟಸ್ ಇಟ್ಟು ಇನ್ನೂ ಒಂದು ವರ್ಷ ತುಂಬದ ತನ್ನ ಮಗಳಿಗೆ ಹಾಗೂ ಸ್ನೇಹಿತರಿಗೆ ಕ್ಷಮೆ ಕೇಳಿ ವಿಷ ಸೇವಿಸಿ ಮನೆಯಲ್ಲಿ ಆತ್ಮಹತ್ಯೆ ಮಾಡುಕೊಂಡಿದ್ದಾನೆ.

ಸಮಗ್ರವಾಗಿ ಬಿಳೆ ಹಾಳೆಯಲ್ಲಿ ಫೈನಾನ್ಸ್ ದವರ ಹೆಸರು ಅವರು ನೀಡಿದ ಕಿರುಕುಳ ತೆಗೆದುಕೊಂಡಿದ್ದ ಸಾಲ ಮತ್ತು ಕಟ್ಟಿದ ಬಡ್ಡಿ ರಿಸಿಪ್ಟ್ ಗಳು ಸೇರಿದಂತೆ ಬಡ್ಡಿಗೆ ಚಕ್ರ ಬಡ್ಡಿ ಅವರು ಹಾಕಿರುವ ಕುರಿತು ಬರೆದಿಟ್ಟು, ಸಾಲದ ಸುಳಿಯಲ್ಲಿ ಬದುಕಲಾಗುತ್ತಿಲ್ಲವೆಂದು ಅಸಹಾಯಕತೆ ಹೊರ ಹಾಕಿದ್ದಾನೆ.
ಕಳೆದ ನಾಲ್ಕು ವರ್ಷದಿಂದ ಸಾಲಕ್ಕೆ ಬಡ್ಡಿ ಕಟ್ಟುತ್ತಲೇ ಬಂದಿದ್ದು, ಸದ್ಯ ಕೈಮೀರಿದೆ. ಅಷ್ಟೊಂದು ಬಡ್ಡಿ ಅದ್ಹೇಗೆ ಎಂದು ವಿಚಾರಿಸಿದರೆ. ಬ್ಲ್ಯಾಂಕ್ ಚಕ್ ಇದೆಯಲ್ಲ ಚಕ್ ಬೌನ್ಸ್ ಕೇಸ್ ಹಾಕ್ತೇವೆ ಎಂದು ಬೆದರಿಕೆವೊಡ್ಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಕಿಸಿರುವ ನಿಂಗಪ್ಪ ತೀವ್ರ ನೊಂದು ಪ್ರಾಣ ಕಳೆದುಕೊಂಡಿದ್ದಾನೆ.
ಅಲ್ಲದೆ ಸರಕಾರದವರು ಸರ್ಕಾರಿ ನೌಕರರಿಗೆ ವೇತನ ಜಾಸ್ತಿ ಮಾಡ್ತಾ ಹೋಗ್ತಾರೆ. ರೈತರಿಗೆಲ್ಲಿ ಅವಕಾಶ. ಬೆಳೆದ ಫಸಲು ಬೆಲೆ ದೊರೆಯದ ಕಾರಣ ಮಾಡಿದ ಸಾಲವು ತೀರಿಸಲಾಗದೆ ಸಂಸಾರವು ನಡೆಸಲಾಗದ ಸ್ಥಿತಿಯಲ್ಲಿ ದಿಕ್ಕು ದೋಚದೆ ಹೆಂಡತಿ ಮಕ್ಕಳನ್ನು ಬೀದಿಗೆ ಬಿಟ್ಟು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈಗ ಅದೇ ಸಾಲಿನಲ್ಲಿ ನಾನು ಸೇರುತ್ತಿದ್ದೇನೆ ಎಂದು ನಿಂಗಪ್ಪ ಬರೆದ ಪತ್ರದಲ್ಲಿ ವಿವರಿಸಿದ್ದಾನೆ.
ಅಲ್ಲದೆ ತೀವ್ರ ನೊಂದುಕೊಂಡಿದ್ದ ಆತ ಪತ್ನಿಗೆ ಸರ್ಕಾರಿ ನೌಕರಿ ಕೊಡಿ ದಯವಿಟ್ಟು ನನ್ನ ಮಗಳು ಆಕೆಗೆ ಬದುಕಲು ದಾರಿ ಮಾಡಿಕೊಡಿ ನಾನಿನ್ನು ಭೂಲೋಕ ತೊರೆಯುವೆ ಕ್ಷಮಿಸು ಮಗಳೇ ಎಂದು ಬರೆದಿರುವ ಆ ಪತ್ರ…ನೋಡಿದರೆ ಕಣ್ಣಾಲೆಗಳು ಒದ್ದೆಯಾಗುತ್ತವೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ ನಿಂಗಪ್ಪನ ದೇಹವನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ದಾಖಲಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ. ಈ ಪ್ರಕರಣ ಸಮಗ್ರ ಪರಿಶೀಲಿಸಿ ಆತ್ಮಹತ್ಯೆ ಗೆ ಕಾರಣೀಭೂತರಾದ ಆ ಫೈನಾನ್ಸರಿಗಳಿಗೆ ಕಾನೂನಿನಡಿ ಶಿಕ್ಷೆಗೊಳಪಡಿಸಬೇಕೆಂಬುದೇ ಮೃತ ನಿಂಗಪ್ಪ ಸ್ನೇಹಿತರ ಹಾಗೂ ಬಂಧುಗಳ ಒತ್ತಾಯವಾಗಿದೆ.
ಸರ್ಕಾರಿ ಆಸ್ಪತ್ರೆ ಮುಂದೆ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಕೈಗೊಂಡಿದ್ದು ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.