ಪ್ರಮುಖ ಸುದ್ದಿ

ತಾಂಡಾಗಳು ಕಂದಾಯ ಗ್ರಾಮಗಳಾಗಲಿಃ ಶಾಸಕ ಶಿರವಾಳ

ಯಾದಗಿರಿಃ ಸ್ವಾತಂತ್ರ್ಯ ದೊರೆತು ಎಪ್ಪತ್ತು ವರ್ಷ ಕಳೆದರೂ ತಾಂಡಾಗಳಿಗೆ ಮೂಲ ಸೌಲಭ್ಯ ಒದಗಿಸಲು ಆಗಿಲ್ಲ.  ಶಹಾಪುರ ಕ್ಷೇತ್ರ ಮಾತ್ರವಲ್ಲ ದೇಶದ ಎಲ್ಲಾ ತಾಂಡಗಳನ್ನು ಕೂಡಲೇ ಕಂದಾಯ ಗ್ರಾಮಗಳನ್ನಾಗಿಸಿ  ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಬೇಕು. ಇದು ಸರ್ಕಾರದ ಕರ್ತವ್ಯ ಎಂದು ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದರು.

ಜಿಲ್ಲೆಯ ಶಹಾಪುರ ನಗರದ ತಹಸೀಲ್ ಕಚೇರಿ ಎದುರು ತಾಲೂಕು ಆಡಳಿತವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸರ್ಕಾರ ಪ್ರಥಮ ಬಾರಿಗೆ ಸಂತ ಸೇವಾಲಾಲ್‍ರ ಜಯಂತಿ ಆಚರಣೆಗೆ ನಿರ್ಧರಿಸಿರುವುದು ಸಂತಸ ತಂದಿದೆ. ತಾಂಡಾಗಳಲ್ಲಿ ವಾಸಿಸುವ ಜನರು ನಂಬಿರುವ ಆರಾಧ್ಯ ದೇವರು ಸಂತ ಸೇವಾಲಲ್, ಅವರ ಜಯಂತಿ ಆಚರಣೆ ಮೂಲಕ ಬಂಜಾರ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಇದಾಗಿದೆ. ಸಮುದಾಯದ ಜನರು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕಿದೆ. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತಲ್ಲಿ, ರಾಜಕೀಯ, ಆರ್ಥಿಕ ಶಕ್ತಿ ತಾನಾಗಿಯೇ ಬರುತ್ತದೆ. ಸೇವಾಲಾಲರ ಜೀವನ ಚರಿತ್ರೆ ಅದ್ಭುತವಾಗಿದೆ. ಅವರ ಕೃಪಾಕಟಾಕ್ಷ ಬಂಜಾರ ಸಮುದಾಯದ ಮೇಲೆ ಸದಾ ಇರುವದರಿಂದಲೇ ಇಂದಿಗೂ ಸಮುದಾಯದ ಜನ ಸಮೃದ್ಧ ಸಂಪದ್ಭರಿತ ಹೈನುಗಾರಿಕೆ, ಕೃಷಿ ಚಟುವಟಿಕೆ ಮೂಲಕ ಪ್ರಾಮಾಣಿಕವಾಗಿ ದುಡಿದು ತಿನ್ನುತ್ತಿರುವದನ್ನು ಕಾಣುತ್ತಿದ್ದೇವೆ.

ಸಾಕಷ್ಟು ರೈತಾಪಿ ವರ್ಗದಲ್ಲಿ ಸಾವು ನೋವುಗಳನ್ನು ಕಂಡಿದ್ದೇವೆ. ಬಂಜಾರ ಸಮುದಾಯದ ರೈತಾಪಿ ಜನರಲ್ಲಿ ಅಂತಹ ಸಾವು ಘಟನೆಗಳು ವಿರಳ. ಅದಕ್ಕೆ ಸಾಕ್ಷಿ ಸಂತ ಸೇವಾಲಾಲ್ ಅವರ ಕೃಪಾಶೀರ್ವಾದ ಎಂದರೆ ತಪ್ಪಾಗಲಾರದು. ಪ್ರಸ್ತುತ ದಿನಮಾನಗಳಲ್ಲಿ ಸಮಗ್ರ ಕೃಷಿ ಅಳವಡಿಕೆಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ, ಸಮಗ್ರ ಕೃಷಿ ಅಳವಡಿಸಿಕೊಳ್ಳಿ ಎಂದು ಸಲಹೆ, ಜಾಗೃತಿ ಮೂಡಿಸುತ್ತಿದಎ.

ಆದರೆ ಬಂಜಾರ ಸಮಾಜ ಸಂಪ್ರಾದಾಯಿಕವಾಗಿ ಮೊದಲಿನಿಂದಲೂ, ಹಸು, ಎತ್ತು, ಎಮ್ಮೆ ಕುರಿ ಕೋಳಿ, ತರಕಾರಿ, ಸೇರಿದಂತೆ ಮಕ್ಕೆ ಜೋಳ, ಇತರೆ ದವಸ ಧಾನ್ಯಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಪದ್ಧತಿಯನ್ನು ಮೊದಲಿನಿಂದಲೇ ಅಳವಡಿಸಿಕೊಂಡು ಬಂದಿದೆ. ಅದು ಅವರ ಸಮುದಾಯದ ಪದ್ಧತಿಯಂತೆ ಬಂದಿದೆ. ಆ ಕಾರಣಕ್ಕೆ ಬಂಜಾರ ಸಮುದಾಯ ಇಂದಿಗೂ ಆರೋಗ್ಯಯುತವಾಗಿ ಸಮೃದ್ಧ ಸಂಪದ್ಭರಿತ ತಾಣವಾಗಿವೆ.  ಆದರೆ ಕೆಲವಡೆ ಕುಡಿಯುವ ನೀರಿನ ಸಮಸ್ಯೆ ಇದೆ. ತಾಂಡಗಳು ಶೈಕ್ಷಣಿವಾಗಿ ಶಕ್ತಿಯುತವಾಗಬೇಕಿದೆ ಆ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಶ್ರಮಿಸಬೇಕು. ಅಲ್ಲದೆ ಸರ್ಕಾರ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ನನ್ನ ಶಕ್ತಿ ಮೀರಿ ಶ್ರಮಿಸುವೆ ಎಂದರು.

ನಿವೃತ್ತ ಶಿಕ್ಷಕ ರೇಖು ಚವ್ಹಾಣ ಸಂತ ಸೇವಾಲಾಲ್ ಕುರಿತು ಉಪನ್ಯಾಸ ನೀಡಿದರು. ಜಿಪಂ ಸದಸ್ಯ ಕಿಶನರಾವ್ ರಾಠೋಡ, ಮಾಜಿ ಜಿಪಂ ಸದಸ್ಯ ಮಾನಸಿಂಗ್ ಚವ್ಹಾಣ, ದೇವರಾಜ ಉಳ್ಳೆಸೂಗೂರ, ತಹಸೀಲ್ದಾರ ಸೋಮಶೇಖರ ಅರಳುಗುಂಡಗಿ, ರವಿ ಚವ್ಹಾಣ ಇತರರು ಉಪಸ್ಥಿತರಿದ್ದರು. ಮುಂಚಿತವಾಗಿ ಸಿಬಿ ಕಮಾನದಿಂದ ಬಸವೇಶ್ವರ ವೃತ್ತದ ಮೂಲಕ ತಹಸೀಲ್ ಕಚೇರಿವರೆಗೆ ಸಂತ ಸೇವಾಲಾಲ್‍ರ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

Related Articles

Leave a Reply

Your email address will not be published. Required fields are marked *

Back to top button