ವೀರಶೈವ ಧರ್ಮ ವಿಶ್ವಕ್ಕೆ ಸಾಮರಸ್ಯದ ಸಂದೇಶ ಸಾರಿದೆ : ರಂಭಾಪುರಿ ಶ್ರೀ
ಎಲ್ಹೇರಿ ವಾರಣಾಸಿ ಹಿರೇಮಠದಲ್ಲಿ ಗಂಗಾದರ ಶಿವಾಚಾರ್ಯರ 92 ನೇ ಜನ್ಮದಿನ, ಧರ್ಮ ಸಭೆ
ಯಾದಗಿರಿ: ವೀರಶೈವ ಧರ್ಮ ಸ್ಥಾಪನೆ ಮಾಡಿದ ಶ್ರೀ ರೇಣುಕಾಚಾರ್ಯರು ವ್ಯಕ್ತಿತ್ವ ವಿಕಸನಕ್ಕೆ 10 ಸೂತ್ರಗಳನ್ನು ನೀಡಿದ್ದಾರೆ. ಅವುಗಳ ಪಾಲನೆ ಮಾನವ ಧರ್ಮದ ಕರ್ತವ್ಯವಾಗಿದೆ. ಈ ಭಾಗದಲ್ಲಿ ಧಾರ್ಮಿಕ ಸಂಸ್ಕಾರವನ್ನು ಉಳಿಸುವ ಕೆಲಸ ಶ್ರೀಗಂಗಾಧರ ಸ್ವಾಮಿಗಳು ಮಾಡಿದ್ದಾರೆ. ಅವರ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಶರಣಗೌಡ ಕಂದಕೂರ ಹಾಗೂ ಗೆಳೆಯರ ಬಳಗ ಏರ್ಪಡಿಸಿದ್ದು ಅಭಿನಂದನಾರ್ಹ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಗುರುಮಠಕಲ್ ತಾಲೂಕಿನ ಯಲ್ಹೇರಿ ಗ್ರಾಮದಲ್ಲಿ ವಾರಣಾಸಿ ಹಿರೇಮಠದ ಹಿರಿಯ ಸ್ವಾಮಿಗಳಾದ ಶ್ರೀ ಗಂಗಾಧರ ಶಿವಾಚಾರ್ಯರ 92ನೇ ಜನ್ಮದಿನದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಸಭೆ ಹಾಗೂ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವ ವ್ಯಕ್ತಿ ಧರ್ಮ ಪರಿಪಾಲನೆ ಮಾಡುವುದುಲ್ಲವೊ ಆತ ಪಶುವಿಗಿಂತಲೂ ಕಡೆ. ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿತಗೊಂಡ ವೀರಶೈವ ಧರ್ಮ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಕಾಲದಲ್ಲೂ ಮತ್ತಷ್ಟು ಪ್ರವರ್ಧಮಾನಕ್ಕೆ ಬಂದಿತು ಎಂದು ಹೇಳಿದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಹೇಳಿದ ಪೂರ್ವಾಚಾರ್ಯರ ವಿಶಾಲ ಮನೋಭಾವದಲ್ಲಿ ವೀರಶೈವ ಧರ್ಮ ಸರ್ವರಿಗೂ ಸಾಮರಸ್ಯದ ಸಂದೇಶ ಸಾರುತ್ತಿದೆ ಎಂದು ಹೇಳಿದರು.
ಹೆಡಗಿಮದ್ರಾ ಗ್ರಾಮದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಭಕ್ತಿ ಹೆಚ್ಚಾದಲ್ಲಿ ಭಗವಂತನೂ ಸಣ್ಣವನಾಗುತ್ತಾನೆ ಎಂಬುದಕ್ಕೆ ಯಲ್ಹೇರಿ ಗ್ರಾಮದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮ ಸಾಕ್ಷಿಯಾಗಿದೆ. ಸಂತರು ದೇಶದೊಳಗೆ ಧರ್ಮ ಕಾಪಾಡಿದರೆ, ಸೈನಿಕರು ಗಡಿಯಲ್ಲಿ ದೇಶವನ್ನು ಕಾಪಾಡುತ್ತಿದ್ದಾರೆ ಎಂದು ತಿಳಿಸಿದರು.
ದೇವಾಪುರದ ಶ್ರೀ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ಪ್ರಸ್ತುತ ಇಂದಿನ ಕಾಲಘಟ್ಟದಲ್ಲಿ ಮಠಗಳು ಜಾತಿಗಳಿಗೆ ಸೀಮಿತವಾಗುತ್ತಿದ್ದರೂ, ಜಾತಿ, ಮತ, ಪಂಥವನ್ನು ಮೀರಿ ಗಂಗಾಧರ ಸ್ವಾಮಿಗಳು, ತಪೋನಿಷ್ಠರಾಗಿ ನಮ್ಮಂಥ ಕಿರಿಯ ಸ್ವಾಮಿಗಳಿಗೆ ಆಶಿರ್ವಾದ ಮಾಡಿ ಬೆಳೆಸಿದ್ದಾರೆ. ಅವರನ್ನು ಪಡೆದ ಯಲ್ಹೇರಿ ಗ್ರಾಮದ ಭಕ್ತರು ಧನ್ಯರು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ, ಶ್ರೀಗಂಗಾಧರ ಸ್ವಾಮಿಗಳ ಜನ್ಮದಿನ ಕಾರ್ಯಕ್ರಮದ ಸರ್ವಸೇವೆ ನಮ್ಮ ಮನೆತನದಿಂದ ನಡೆಯಲು ಅವಕಾಶ ಸಿಕ್ಕಿರುವುದು ನಮ್ಮ ಪೂರ್ವಜನ್ಮದ ಪುಣ್ಯ. ಗಡಿ ಭಾಗದ ಗುರುಮಠಕಲ್ ಕ್ಷೇತ್ರಕ್ಕಿಂದು ಜಗದ್ಗುರುಗಳು ಆಗಮಿಸಿ ಕ್ಷೇತ್ರದ ಜನತೆಗೆ ಆಶಿರ್ವಾದ ಮಾಡಿದ್ದು ಎಲ್ಲಿಲ್ಲದ ಸಂತಸ ತಂದಿದೆ ಎಂದರು.
ಜ್ಞಾನ ವೃದ್ಧರು ವಯೋವೃದ್ಧರು ಆದ ಶ್ರೀ ಷ. ಬ್ರ. ಗಂಗಾಧರ ಶಿವಾಚಾರ್ಯರಿಗೆ ರಂಭಾಪೂರಿ ಶ್ರೀಗಳು ಬೃಹತ್ ರುದ್ರಾಕ್ಷಿ ಮಾಲೆಯನ್ನು ಹಾಕಿ ಜನ್ಮದಿನಕ್ಕೆ ಶುಭಾಶೀರ್ವಾದ ಮಾಡಿದರು. ಎಲ್ಹೇರಿ ಮಳಖೇಡ ಉಭಯ ಮಠಗಳ ಕೊಟ್ಟೂರೇಶ್ವರ ಸ್ವಾಮಿಗಳು, ತಂಗೆಡಪಲ್ಲಿ ಮಠದ ಶಿವಯೋಗಿ ಶಿವಾಚಾರ್ಯರು, ಗದಗನ ಅಭಿನವ ಕೊಟ್ಟೂರೇಶ್ವರ ಸ್ವಾಮಿಗಳು, ದಿಗ್ಗಾಂವ್‍ನ ಸಿದ್ದವೀರ ಶಿವಾಚಾರ್ಯರು, ಕೆಂಭಾವಿಯ ಚನ್ನಬಸವ ಶ್ರೀಗಳು, ದೋರನಹಳ್ಳಿ ಚಿಕ್ಕಮಠದ ಶಿವಲಿಂಗ ದೇಶಿಕೇಂದ್ರ ಸಾಮೀಜಿಗಳು, ಸೇಡಂ ಶಿವಶಂಕೇಶಸ್ರ ಸ್ವಾಮೀಜಿಗಳು, ಶಹಾಪೂರ ಗದ್ದುಗೆಯ ಬಸಯ್ಯ ಶರಣರು, ಜೆಡಿಎಸ್ ಮುಖಂಡ ಅಜಯರೆಡ್ಡಿ, ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪಗೌಡ ಮಲ್ಹಾರ್, ಶಂಭುಲಿಂಗಪ್ಪ ಅರುಣಿ, ಡಾ. ವೀರಭದ್ರಪ್ಪ ಮತ್ತಿತರರು ಇದ್ದರು. ವಿಕಾಸ ಆಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಪ್ರಾಸ್ತಾವಿಕ ಮಾತನಾಡಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.
ರಂಭಾಪುರಿ ಶ್ರೀಗಳ ಆಗಮನದಿಂದ ಈ ಭಾಗ ಪುನೀತವಾಗಿದೆ : ಶರಣಗೌಡ ಕಂದಕೂರ
ಎಲ್ಹೇರಿ ಗಂಗಾಧರ ಶ್ರೀಗಳು ನೂರನೇ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ, ಶ್ರೀಗಂಗಾಧರ ಸ್ವಾಮಿಗಳ ಜನ್ಮದಿನ ಕಾರ್ಯಕ್ರಮದ ಸರ್ವಸೇವೆ ನಮ್ಮ ಮನೆತನದಿಂದ ನಡೆಯಲು ಅವಕಾಶ ಸಿಕ್ಕಿರುವುದು ನಮ್ಮ ಪೂರ್ವಜನ್ಮದ ಪುಣ್ಯ. ಗಡಿ ಭಾಗದ ಗುರುಮಠಕಲ್ ಕ್ಷೇತ್ರಕ್ಕಿಂದು ಜಗದ್ಗುರುಗಳು ಆಗಮಿಸಿ ಕ್ಷೇತ್ರದ ಜನತೆಗೆ ಆಶಿರ್ವಾದ ಮಾಡಿದ್ದು ಎಲ್ಲಿಲ್ಲದ ಸಂತಸ ತಂದಿದೆ ಎಂದರು.
ಎಲ್ಹೇರಿ ಗಂಗಾಧರ ಶಿವಾಚಾರ್ಯರು ನಮ್ಮ ತಂದೆ ತಾಯಿವರ ಮತ್ತು ನಮ್ಮ ಕುಟುಂಬದ ಆರಾಧ್ಯ ಗುರುಗಳಾಗಿದ್ದಾರೆ. ಪೂಜ್ಯರ ಧರ್ಮಾಚರಣೆ ಕಟ್ಟುನಿಟ್ಟಿನ ಆಚರಣೆಗಳನ್ನು ನಾನು ಚಿಕ್ಕನಿದ್ದಾಗಿನಿಂದ ನೋಡುತ್ತಾ ಬಂದಿದ್ದೇನೆ. ಈ ಭಾಗದಲ್ಲಿ ಅಲ್ಲದೇ ಆಂದ್ರ, ತೆಲಂಗಾಣದಲ್ಲಿ ಧರ್ಮ ಪ್ರಚಾರ ಮಾಡಿದ ಅವರ ಧಾರ್ಮಿಕ ಸೇವೆ ಬಹುದೊಡ್ಡದಾಗಿದೆ. ನಡೆದಾಡುವ ದೇವರಾದ ಎಲ್ಹೇರಿ ಗಂಗಾಧರ ಶ್ರೀಗಳು ನೂರು ವರ್ಷ ತುಂಬುವ ರೆಗೂ ಆರೋಗ್ಯದಿಂದ ಇರಲಿ. ನೂರನೇ ಜನ್ಮದಿನದ ವರೆಗೂ ನಮ್ಮ ಕುಟುಂಬದಿಂದಲೇ ಪೂಜ್ಯರ ಜನ್ಮದಿನ ಕಾರ್ಯಕ್ರಮದ ಸೇವೆಯನ್ನು ಮಾಡಲು ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ ಎಂದರು.