ಪ್ರಮುಖ ಸುದ್ದಿ

ರಸ್ತೆ ನಿಯಮ ಪಾಲಿಸಿ ಜೀವ ಉಳಿಸಿ – RTO ದಾಮೋದರ

ರಸ್ತೆ ನಿಯಮ ಪಾಲಿಸಿ ಜೀವ ಉಳಿಸಿ – ಆರ್‍ಟಿಓ ದಾಮೋದರ

ಶಹಾಪುರಃ ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಪ್ರತಿಯೊಬ್ಬರು ಸಮರ್ಪಕವಾಗಿ ಪಾಲನೆ ಮಾಡಿದರೆ ಅಪಘಾತ ಇನ್ನಿತರ ಅವಘಡ ತಡೆಗಟ್ಟಲು ಸಾಧ್ಯವಿದೆ ಈ ಕುರಿತು ಮೊದಲು ವಿದ್ಯಾರ್ಥಿಗಳು ಜಾಗೃತರಾಗಿ ರಸ್ತೆ ನಿಯಮಗಳನ್ನು ಪಾಲನೆ ಮಾಡಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ಕರೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಯಾದಗಿರಿ ಮತ್ತು ಪೊಲೀಸ್ ಇಲಾಖೆ ಹಾಗೂ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಕಾರ್ಯಕ್ರಮ ಉದ್ಘಾಟಿಸಿ ನಂತರ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಪ್ರಸಕ್ತ ರಸ್ತೆ ಅಪಘಾತದಲ್ಲಿ ಒಂದು ವರ್ಷಕ್ಕೆ ಅಂದಾಜು 1.5 ಲಕ್ಷ ಜನರು ಮೃತಪಡುತ್ತಿದ್ದಾರೆ. ರಸ್ತೆ ಮೇಲೆ ವಾಹನಗಳ ತೀವ್ರತೆಯಿಂದ ಅಪಘಾತಗಳ ಸಂಖ್ಯೆಯು ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಎಲ್ಲರೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಹಂತದಲ್ಲಿ ಯುವ ಸಮೂಹಕ್ಕೆ ರಸ್ತೆ ಸುರಕ್ಷತೆ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಈ ಕುರಿತು ಯುವ ಸಮೂಹ ವಿದ್ಯಾವಂತರಾಗಿದ್ದರು, ಕಾನೂನು ಪರಿಪಾಲನೆ ಮಾಡದಿರುವದು ಅನಕ್ಷರತೆ ತೋರಿದಂತಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಸಂಚಾರಿ ನಿಯಮಗಳನ್ನು ತಾವು ಸಮರ್ಪಕವಾಗಿ ಪಾಲಿಸುವದಲ್ಲದೆ, ಅನಕ್ಷರತೆ ಇರುವವರಿಗೆ ಈ ಕುರಿತು ತಿಳುವಳೆಕೆ ಮೂಡಿಸಬೇಕಿದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಪಾಲಕರು ಸೇರಿದಂತೆ ಅಕ್ಕಪಕ್ಕದವರಿಗೆ ಸಂಚಾರಿ ನಿಯಮ ಪಾಲನೆ ಕುರಿತು ಮಾಹಿತಿ ನೀಡಬೇಕು. ಅಲ್ಲದೆ ಇದರಿಂದ ಅಪಘಾತ ತಡೆಗಟ್ಟಲು ಸಹಕಾರಿಯಾಗಲಿದೆ ಎಂದರು.

ತಹಸೀಲ್ದಾರ ಜಗನ್ನಾಥರಡ್ಡಿ ಮಾತನಾಡಿ, ಯಾರೇ ಆಗಲಿ ವಾಹನ ಓಡಿಸುವ ಮೊದಲು ವಾಹನದ ಆರ್.ಸಿ.ಬುಕ್, ವಿಮೆ ಮತ್ತು ಚಾಲನಾ ಪರವಾನಿಗೆ ಅಗತ್ಯವಾಗಿ ಹೊಂದಿರಬೇಕು. ಅಲ್ಲದೆ ಬೈಕ್ ಸವಾರರು ಹೆಲ್ಮೆಟ್ ಹೊಂದಿರಬೇಕು. ಸಂಚಾರಿ ನಿಯಮಗಳನ್ನು ಸರ್ವರು ತಿಳಿದುಕೊಂಡು ಸಮರ್ಪಕವಾಗಿ ಪಾಲನೆ ಮಾಡಬೇಕು. ವಿಶೇಷವಾಗಿ ಯುವಕರು ಮೋಜು ಮಸ್ತಿ ಹೆಸರಲ್ಲಿ ಅಡ್ಡದಿಡ್ಡಿ ಬೈಕ್ ಸವಾರಿ ಮಾಡುವ ಮೂಲಕ ತಮ್ಮ ಪ್ರಾಣ ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ.
ಅವರ ಮನೆಯಲ್ಲಿ ಪಾಲಕರು ಅದೆಷ್ಟು ನೋವು ಅನುಭವಿಸುತ್ತಿರಬೇಡ.?

ದಯವಿಟ್ಟು ಯುವ ಸಮೂಹ ನಿಮ್ಮ ಪಾಲಕರು, ಸಹೋದರರು, ಸಹೋದರಿಯರು ನಿಮ್ಮನ್ನೆ ನಂಬಿದ್ದ ಸ್ನೇಹಿತರು, ಆತ್ಮೀಯರು ಇದ್ದಾರೆ ಎಂಬುದನ್ನು ಮರೆಯಬೇಡ. ಹುಚ್ಚು ಸಾಹಸಕ್ಕೆ ಕೈ ಹಾಕಬಾರದು ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳಲ್ಲಿ ಶಿಸ್ತು ಬಹುಮುಖ್ಯ ಅದರಂತೆ ಕಾನೂನು ಪಾಲನೆಯಲ್ಲೂ ವಿದ್ಯಾರ್ಥಿ ಜೀವನದಿಂದಲೇ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಲ್ಲದೆ ಇಂದೇ ಎಲ್ಲರೂ ಅಡ್ಡಾದಿಡ್ಡಿಯಾಗಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಚಲಿಸುವದಿಲ್ಲ ಎಂದು ಪ್ರತಿಜ್ಞೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಮಾಡಿಸಿದರು.

ಕಾಲೇಜಿನ ಪ್ರಾಚಾರ್ಯ ಚನ್ನಾರಡ್ಡಿ ತಂಗಡಿಗಿ ಮಾತನಾಡಿ ಸಂಚಾರಿ ನಿಯಮ ಪಾಲನೆಯಿಂದ ಅಪಘಾತ ತಡೆಗೆ ಸಹಕಾರಿಯಾಗಲಿದೆ. ಪ್ರತಿಯೊಬ್ಬರು ಇದನ್ನು ಪಾಲನೆ ಮಾಡಲೇಬೇಕು ಎಂದು ಕರೆ ನೀಡಿದರು.

ಪಿಎಸ್‍ಐ ಚಂದ್ರಕಾಂತ ಮೆಕಾಲೆ, ಸಾರಿಗೆ ಇಲಾಖೆ ಹಿರಿಯ ಇನ್ಸ್‍ಪೆಕ್ಟರ್ ವೆಂಕಟಪ್ಪ, ಉಪನ್ಯಾಸಕ ಆನಂದಕುಮಾರ ಜೋಶಿ, ಸಾರಿಗೆ ಇಲಾಖೆಯ ಅಧಿಕಾರಿ ಶಿವಕುಮಾರ ನವಲಿ, ರಾಮಕೃಷ್ಣ, ಮಿರ್ಜಿ ರಾಮು ಉಪಸ್ಥಿತರಿದ್ದರು.

ಆಕಾಶವಾಣಿ ಕಲಾವಿದ ಶರಣಕುಮಾರ ಜಾಲಹಳ್ಳಿ ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕ ಸೂರ್ಯಕಾಂತ್ ಅಮ್ಮಾಪುರೆ, ನಿರೂಪಿಸಿದರು. ಕಾಳಮ್ಮ ಸ್ವಾಗತಿಸಿದರು. ಆರ್.ಕೆ.ಕುಲಕರ್ಣಿ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳು, ವಾಃನ ಚಾಲಕರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button