ಯಾದಗಿರಿಃ ಮಾರಕಾಸ್ತ್ರಗಳಿಂದ ಕೊಚ್ಚಿ ಓರ್ವನ ಕೊಲೆ ಇಬ್ಬರಿಗೆ ಗಾಯ
ವಿರೋಧಿ ಗುಂಪಿನಿಂದ ಮೂವರ ಮೇಲೆ ಮಾರಣಾಂತಿಕ ಹಲ್ಲೆ
ಯಾದಗಿರಿಃ ಹಳೇ ವೈಷಮ್ಯ ಹಿನ್ನೆಲೆ ವಿರೋಧಿ ಗುಂಪೊಂದು ಮಾರಕಾಸ್ತ್ರಗಳಿಂದ ಇನ್ನೊಂದು ಗುಂಪಿನ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಓರ್ವ ಹತನಾಗಿದ್ದು, ಇಬ್ಬರು ಗಂಬೀರ ಗಾಯಗೊಂಡ ಘಟನೆ ತಾಲೂಕಿನ ಅರಿಕೇರಾ (ಬಿ) ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಗುರುವಾರ ನಡೆದಿದೆ.
ಮಾರಕಾಸ್ತ್ರದಿಂದ ಭೀಕರವಾಗಿ ಕೊಲೆಯಾದ ವ್ಯಕ್ತಿ ಮಲ್ಲಪ್ಪ ಸಾಬಣ್ಣ ಉಂಬರಗಿ (32) ಎಂದು ಗುರುತಿಸಲಾಗಿದೆ. ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಮಲ್ಲಪ್ಪ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೆ ಜೊತೆಯಲ್ಲಿದ್ದ ಮಾನಪ್ಪ ಮತ್ತು ಸಾಬಣ್ಣ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಸೂಕ್ತ ಚಿಕಿತ್ಸೆಗಾಗಿ ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಂತರ ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅದೇ ಗ್ರಾಮದ ವಿರೋಧಿ ಗುಂಪಿನ ನಂದಪ್ಪ ಮತ್ತು ಲಕ್ಷ್ಮಣ ಎಂಬುವರಿಂದ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೊಲೆಯಾದ ಮಲ್ಲಪ್ಪ ಉಂಬರಗಿ ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈ ಕುರಿತು ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.