ಸಂಭ್ರಮದ ಶ್ರೀಕೃಷ್ಣ ತೊಟ್ಟಿಲೋತ್ಸವ
ಶಹಾಪುರಃ ನಗರದ ಹೋಳಿ ಕಟ್ಟೆಯ ಹನುಮಾನ್ ಮಂದಿರ ಆವರಣದಲ್ಲಿ ನಗರದ ಸ್ವಕುಳ ಸಾಳಿ ಸಮಾಜದಿಂದ ಗೋಕುಲಾಷ್ಠಮಿ ಅಂಗವಾಗಿ ರವಿವಾರ ಶ್ರೀ ಕೃಷ್ಣ ತೊಟ್ಟಿಲೋತ್ಸವವನ್ನು ಸಮಾಜದ ಮಹಿಳೆಯರು ಸಂಭ್ರಮದಿಂದ ಆಚರಿಸಿದರು.
ಶ್ರೀಕೃಷ್ಣನನ್ನು ಹೂವಿನ ತೊಟ್ಟಿಲಲ್ಲಿ ಹಾಕಿ ಮಹಿಳೆಯರು ಭಕ್ತಿಪೂರ್ವಕವಾಗಿ ಜೋಜೋ ಗೀತೆಗಳನ್ನು ಹಾಡಿದರು. ನಂತರ ತೊಟ್ಟಿಲಲ್ಲಿ ಹಾಕಿದ ಮಗುವಿಗೆ ಶ್ರೀಕೃಷ್ಣ ಎಂದು ನಾಮಕರಣ ಮಾಡಿದರು.
ತದ ನಂತರ ಮೊಸರು, ಬೆಣ್ಣೆ ಮಡಿಕೆಗೆ ಪೂಜೆ ಸಲ್ಲಿಸಿ ಕುಡಿಕೆ ಹೊಡೆಯುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದರು.
ಶ್ರೀಕೃಷ್ಣ ಪಾತ್ರಧಾರಿಗಳಾದ ಮಕ್ಕಳಿಂದ ಮೊಸರು ಗಡಿಗೆಯನ್ನು ಹೊಡೆಸಲಾಯಿತು. ಮೊಸರು ಗಡಿಗೆ ಹೊಡೆದ ನಂತರ ಗೋಕುಲಾನಂದ ಶ್ರೀಕೃಷ್ಣಾ ಮಹಾರಾಜಕೀ ಜೈ ಎಂಬ ಘೋಷಣೆಗಳು ಮೊಳಗಿದವು.
ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರೀಕೃಷ್ಣ ತೊಟ್ಟಿಲೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಸಮಾಜದ ಮಹಿಳೆಯರು, ಯುವತಿಯರು ಹಿರಿಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಮಂಜುಳ ಕೆಂಧೂಳೆ, ಲಕ್ಷ್ಮೀ ಫಿರಂಗಿ, ಅರ್ಚನಾ ಚಿಲ್ಲಾಳ, ಸುರೇಖಾ ಏಕಬೋಟೆ ಸೇರಿದಂತೆ ಇತರರು ತೊಟ್ಟಿಲೋತ್ಸವದಲ್ಲಿ ಭಾಗವಹಿಸಿ ನಾಮಕರಣ ಸಮಾರಂಭ ನಡೆಸಿಕೊಟ್ಟರು. ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯ ವೇಷಧಾರಿಯಲ್ಲಿ ಮಿಂಚುತ್ತಿರುವದು ಕಂಡು ಬಂದಿತು.
ಈ ಸಂದರ್ಭದಲ್ಲಿ ಹಿರಿಯರಾದ ಮಲ್ಲಯ್ಯ ಫಿರಂಗಿ, ಮಲ್ಲಿಕಾರ್ಜುನ ಚಿಲ್ಲಾಳ, ಜನಾರ್ಧನ ಮಾನು, ನಾಗೇಂದ್ರ ದಂಡು, ಸಮಾಜದ ಅಧ್ಯಕ್ಷ ರಾಜು ಚಿಲ್ಲಾಳ, ಸಂತೋಷ ಶಿರವಾಳಕರ್, ನಂದಕುಮಾರ ಚಿಲ್ಲಾಳ ಇತರರಿದ್ದರು.