ವಿನಯ ವಿಶೇಷ

ಮೈದುಂಬಿ ನಳನಳಿಸುತ್ತಿರುವ ಶಂಕರರಾಯನ ಕೆರೆ

ಒಣಗಿ ಬಣಗುಡುತ್ತಿದ್ದ ಕೆರೆಗೆ ಹರಿದು ಬಂದ ಕೃಷ್ಣೆ

ಮಲ್ಲಿಕಾರ್ಜುನ ಮುದನೂರ

ಯಾದಗಿರಿ, ಶಹಾಪುರಃ ಸಂಪೂರ್ಣ ಒಣಗಿ ಬಣಗುಡುತ್ತಿದ್ದ ತಾಲೂಕಿನ ಸಗರ ಗ್ರಾಮದ ಶಂಕರರಾಯನ ಕೆರೆಗೀಗ ಜೀವ ಕಳೆ ಬಂದಿದೆ. ಪ್ರಸ್ತುತ ಕೆರೆಗೆ ಕೃಷ್ಣೆ ಹರಿದು ಬಂದಿದ್ದು, ಶಂಕರನ ಕೆರೆ ತುಂಬಿ ನಳನಳಿಸುತ್ತಿದೆ. ಈ ಕೆರೆ ಒಡಲಾಳದಿ ಬದುಕುತಿದ್ದ ಜೀವ ಸಂಕುಲವೀಗ ಪುನಶ್ಚೇತನಗೊಂಡಿದೆ.

ಅಲ್ಲದೆ ವಿವಿಧ ತಳಿಯ ಸಾವಿರಾರು ಪಕ್ಷಿಗಳ ಧಾಮವಾಗಿ ಮಾರ್ಪಟ್ಟಿದ್ದ ಶಂಕರರಾಯನ ಕೆರೆ ಕಳೆದ ನಾಲ್ಕಾರು ತಿಂಗಳು ಮಳೆ ಅಭಾವದಿಂದ ನೀರಲ್ಲದ ಬರಡಾಗಿತ್ತು. ಅಲ್ಲದೆ ಜೀವ ಸಂಕುಲಕ್ಕೂ ಸಂಚಾರಕ್ಕ ಬಂದಿತ್ತು. ಕೆರೆ ಒಡಲು ಸಂಪೂರ್ಣ ಬತ್ತಿ ಹನಿ ನೀರಿಗಾಗಿ ಬಾಯ್ತೆರೆದು ನಿಂತಿರುವ ದೃಶ್ಯ ಮನ ಮಿಡಿಯುವಂತಿತ್ತು.

ಆದರೆ ಇದೀಗ ಕೆರೆ ನೀರು ತುಂಬಿ ತುಳುಕುತ್ತಿರುವದನ್ನು ನೋಡಲು  ಮಹದಾನಂದವಾಗಿದೆ ಎನ್ನುತ್ತಾರೆ ಇಲ್ಲಿನ ರೈತರು. ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಅಪಾರ ಪ್ರಮಾಣದ ಮಳೆಯಿಂದಾಗಿ ಆಲಮಟ್ಟಿ ಜಲಾಶಯ ಮೈತುಂಬಿಕೊಂಡಿರುವ ಹಿನ್ನೆಲೆ ಹೆಚ್ಚುವರಿ ನೀರನ್ನು ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹರಿ ಬಿಡುತ್ತಿರುವ ಹಿನ್ನೆಲೆ, ಬಸವ ಸಾಗರ ಜಲಾಶಯದಿಂದ ನೀರುನ್ನು ಕೃಷ್ಣಾ ನದಿಗೆ ಹರಿ ಬಿಟ್ಟಿರುವ ಕಾರಣ, ಕೃಷ್ಣಾ ಕಾಲುವೆ ಮೂಲಕ ಶಂಕರರಾಯನ ಕೆರೆಗೆ ನೀರು ಬಂದಿದ್ದು, ಕೆರೆ ತುಂಬಿ ನಳನಳಿಸುತ್ತಿದೆ.

ಶಂಕರನ ಕೆರೆಗೆ ನೀರಿಲ್ಲದ ಕಾರಣ ಒಡಲೊಳಗಿದ್ದ ಜೀವ ಸಂಕುಲ ವಿನಾಶದ ಅಂಚಿಗೆ ತಲುಪಿತ್ತು. ಆದರೆ ಸಧ್ಯ ಕೆರೆ ನೀರಿನಿಂದ ತುಂಬಿರುವ ಕಾರಣ, ಮತ್ತೆ ಜೀವ ಸಂಕುಲಕ್ಕೆ ಜೀವ ಕಳೆ ತುಂಬಿ ಬಂದಿದೆ ಎನ್ನಬಹುದು.

ಮಳೆ ಅಭಾವದಿಂದ ಕೆರೆ ಬತ್ತಿದ್ದು, ಜನ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಇಂತಹ ಸಂದರ್ಭದಲ್ಲಿ ಆಲಮಟ್ಟಿ ಜಲಾಶಯದಿಂದ ಜಿಲ್ಲೆಯ ನಾರಾಯಣಪುರ ಬಸವ ಸಾಗರದ ಜಲಾಶಯಕ್ಕೆ ನೀರಿನ ಒಳ ಹರಿವು ಜಾಸ್ತಿಯಾದ ಹಿನ್ನೆಲೆ ಕೃಷ್ಣಾ ನದಿಗೆ 2.22 ಲಕ್ಷ ಕ್ಯುಸೆಕ್‍ನಷ್ಟು ನೀರು ಹರಿಬಿಟ್ಟ ಕಾರಣ, ಕೃಷ್ಣಾ ನದಿ ಪಾತ್ರ ಪ್ರವಾಹ ಭೀತಿ ಎದುರಿಸುವಂತಾಗಿದೆ. ಮತ್ತು ಅದೇ ನೀರು ಕೃಷ್ಣಾ ಕಾಡಾ ಕಾಲುವೆ ಮೂಲಕ ಇಲ್ಲಿನ ಕೆರೆಗೆ ಅಪಾರ ಪ್ರಮಾಣ ನೀರು ಹರಿದು ಬಂದಿದ್ದು, ಕೆರೆ ಮೈದುಂಬಿಕೊಂಡು ನಳನಳಿಸುತ್ತಿದೆ.

ಹೀಗಾಗಿ ಇಲ್ಲಿನ ಜನ ಜಾನುವಾರು ಸೇರಿದಂತೆ ವಿವಿಧ ಪಕ್ಷಿಗಳಲ್ಲಿ ಮರುಜೀವ ಬಂದಿದೆ. ಸಗರ ಗ್ರಾಮದ ಅಂದಾಜು 200 ಜನ ರೈತಾಪಿ ಜನರು ಈ ಕೆರೆಯ ನೀರನ್ನು ಬಳಸಿಕೊಂಡು ಕೃಷಿ ಕಾಯಕ ಮಾಡುತ್ತಾರೆ. ಹೊಲ, ಗದ್ದೆಗಳಿಗೆ ಪ್ರಸ್ತುತ ಕೆರೆ ನೀರಿನಿಂದ ಸಾಕಷ್ಟು ಅನುಕೂಲವಾಗಲಿದೆ. ಹೀಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಜನ-ಜಾನುವಾರುಗಳಿಗೂ ಕುಡಿಯಲು ನೀರು ದೊರೆತಿದೆ. ಜೀವ ಸಂಕುಲಕ್ಕೆ ಜೀವ ಬಂದಂತಾಗಿದೆ. ಕೆರೆ ತುಂಬಿ ತುಳುಕುತ್ತಿರುವ ಕಾರಣ ಜನರಲ್ಲಿ ಹೊಸ ಉಲ್ಲಾಸ ಮೂಡಿ ಬಂದಿದೆ. ಸಮರ್ಪಕ ಮಳೆ ಬಾರದಿದ್ದರು ಕೆರೆ ಕೆಳಗಿನ, ಪಕ್ಕದ ಹೊಲ, ಗದ್ದೆಗಳಿಗೆ ಕೆರೆ ನೀರು ಹರಿಸಿಕೊಂಡು ಬೆಳೆ ಬೆಳೆಯಬಹುದು ಎಂಬ ಅಧಮ್ಯ ವಿಶ್ವಾಸದಲ್ಲಿದ್ದಾರೆ ಇಲ್ಲಿನ ರೈತರು.

——————–
ಬೇಸಿಗೆ ಕಾಲದಿಂದ ಕೆರೆಯಲ್ಲಿರುವ ನೀರು ಸಂಪೂರ್ಣ ಬತ್ತಿ ಹೋಗಿತ್ತು. ಮಳೆಗಾಲ ಬಂದು ಎರಡು ತಿಂಗಳಾದರೂ ಮಳೆ ಬಾರದೆ ಕೆರೆ ಹಾಗೇ ಒಣಗಿ ನಿಂತಿತ್ತು. ಅಲ್ಲದೆ ನೀರಿನ ಕೊರತೆಯಿಂದ ರೈತಾಪಿ ಜನರು ಸಾಕಷ್ಟು ಸಂಕಷ್ಟದಲ್ಲಿದ್ದರು. ಸಧ್ಯ ಶಂಕರರಾಯನ ಕೆರೆ ತುಂಬಿರುವ ಕಾರಣ ಗ್ರಾಮಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಪಶು ಪಕ್ಷಿಗಳಿಗೂ ಜೀವ ಬಂದಂತಾಗಿದೆ. ಕೆರೆ ಸುತ್ತಲೂ ಇದೀಗ ಹಸಿರು ಚಿಗುರಿದೆ. ಜೀವ ಮರುಕಳಿಸುತ್ತಿದೆ.

ಮಂಜುನಾಥ ಬಿರೆದಾರ. ಗ್ರಾಮಸ್ಥ.

————-

ಹಲವಾರು ವರ್ಷದಿಂದ ಪಕ್ಷಿಗಳ ಧಾಮವಾಗಿ ಮಾರ್ಪಟಿದ್ದ ಇಲ್ಲಿನ ಶಂಕರರಾಯನ ಕೆರೆ. ನೀರಿಲ್ಲದೆ ಪಕ್ಷಿಗಳು, ಜನ ಜಾನುವಾರಗಳೀಗೆ ಅನಾಥ ಪ್ರಜ್ಞೆಯಲ್ಲಿ ಕಾಲ ಕಳೆಯುವಂತಾಗಿತ್ತು. ಸಾಕಷ್ಟು ಪಕ್ಷಿಗಳು ಬೇರಡೆ ವಲಸೆ ಹೋಗಿವೆ. ಇದೀಗ ಮತ್ತೆ ಪಕ್ಷಿಗಳ ಸಂಕುಲ ಇಲ್ಲಿಗೆ ಬರುತ್ತಿವೆ.

ದುರ್ಗಪ್ಪ ಸಗರ. ಯೋಧ.

——————–

Related Articles

Leave a Reply

Your email address will not be published. Required fields are marked *

Back to top button