ಅಂಕಣಯೂತ್ ಐಕಾನ್ಸಂಸ್ಕೃತಿ

ಅಪ್ರತಿಮ ಕೆಚ್ಚೆದೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಅಪ್ರತಿಮ ಕೆಚ್ಚೆದೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ:

ದಿನಾಂಕ 26-01-2022 ರಂದು ಸಂಗೊಳ್ಳಿ ರಾಯಣ್ಣ ಅವರ ಹುತಾತ್ಮ ದಿನಾಚರಣೆ ನಿಮಿತ್ತ ವಿಶೇಷ ಲೇಖನ.

“ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರಿಸುವುದು”.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನು ಗಲ್ಲಿಗೇರುವ ಮುನ್ನ ಹೇಳಿದ ಕೊನೆಯ ಮಾತಿದು. ಇಷ್ಟು ಸಾಕು ರಾಯಣ್ಣ ಅಪ್ರತಿಮ ಶೂರ ಎನ್ನಲಿಕ್ಕೆ.

ಸಿಪಾಯಿ ದಂಗೆಯ 40 ವರ್ಷ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದ ಧೀರ, ದಿಟ್ಟ ಮಹಿಳೆ ರಾಣಿ ಚೆನ್ನಮ್ಮ.ನಮ್ಮೆಲ್ಲರ ಅಭಿಮಾನ, ಸ್ವಾಭಿಮಾನದ ಸಂಕೇತ ಅವರು.ಅವರ ಬಲಗೈ ಬಂಟನಾಗಿ ಸಂಗೊಳ್ಳಿ ರಾಯಣ್ಣ ನಿಂತು ಕೊಂಡಿದ್ದು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ವಿಚಾರ.

ರಾಯಣ್ಣ ನಮ್ಮ ಅಂತರಾತ್ಮ ಧ್ವನಿ ಮತ್ತು ನಿರಂತರ ಸ್ಫೂರ್ತಿ. ರಾಯಣ್ಣನಿಗೆ ವೀರ ರಾಯ, ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ,ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದ ಆಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ರಾಯಣ್ಣನಿಗೆ ಬಣ್ಣಿಸಲಾದ ಬಿರುದುಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.
ಜನನ/ ಪರಿಚಯ:
ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು 15ನೇ ಆಗಸ್ಟ್ 1796.ಆಗಸ್ಟ ಹದಿನೈದು ಭಾರತೀಯರಿಗೆ “ಸ್ವಾತಂತ್ರ್ಯ” ದೊರಕಿದ ದಿನವಾಗಿದೆ. ಇದು ಭಾರತೀಯರಿಗೆ ಎಂದೂ ಮರೆಯಲಾಗದ ರಾಷ್ಟ್ರೀಯ ಹಬ್ಬ ವಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಸಂಪಗಾವಿ)ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ತಂದೆ ಭರಮಪ್ಪ ತಾಯಿ ವೀರಮಾತೆ ಕೆಂಚಮ್ಮಾಳ ಪುತ್ರನಾಗಿ ಇವರದು ಪ್ರಸಿದ್ಧ ಹಾಲುಮತ ಕುಟುಂಬ. ಇವರ ತಾತ ರೋಗಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ನೀಡಿ ರಕ್ತಮಾನ್ಯ ಭೂಮಿಯನ್ನು ಬಳುವಳಿಯಾಗಿ ನೀಡಿದನು.

ಇಡೀ ಜೀವಮಾನ ಆಂಗ್ಲರನ್ನು ನಾಡಿನಿಂದ-ದೇಶದಿಂದ ಹೊರಹಾಕಲು ಮಾಡಿದ ಹೋರಾಟಗಳು ಸ್ಮರಣೀಯವಾಗಿವೆ.

ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ಮಾಡುತ್ತಾ ಬ್ರಿಟಿಷರಿಗೆ ಸಿಂಹಸ್ವಪ್ನ ವಾಗಿ ಕಾಡಿದ್ದ ರಾಯಣ್ಣ ಕಿತ್ತೂರು ಸಂಸ್ಥಾನದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದ್ದರು.ಸುಮಾರು ಮೂವತ್ತೈದು ವರುಷಗಳ ಕಾಲ ಅಂದರೆ ಸ್ವರ್ಗವಾಸಿಯಾಗುವವರೆಗೆ, ತನ್ನ ಸರ್ವಸ್ವವನ್ನು ಕಿತ್ತೂರ ನಾಡಿನ ಸ್ವಾತಂತ್ರ್ಯಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ.ಬ್ರಿಟಿಷರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಮರಣದಂಡನೆ ನೀಡಿದರು.ಆತನ ಜೊತೆ ಇತರ ಏಳು ಜನ ಅನುಯಾಯಿಗಳು ವಿಚಾರಣೆ ನಡೆಸಿ ಮರಣ ದಂಡನೆ ನೀಡಿದರು.

ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು. ಆದಾಗ್ಯೂ ತನ್ನ ಕೇವಲ 29ನೇ ವಯಸ್ಸಿನಲ್ಲಿ ಗಲ್ಲಿಗೇರಿಸುವ ಸಂದರ್ಭ ಬಂದಾಗಲೂ ವಿಚಲಿತನಾಗದೆ ವೀರಮರಣವನ್ನಪ್ಪಿ ದೇಶ ಪ್ರೇಮ ಮೆರೆದಿದ್ದಾರೆ ನಮ್ಮ ರಾಯಣ್ಣ.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನಾಂಕ (ಆಗಸ್ಟ್ 15) ಹಾಗೂ ಸಂಗೊಳ್ಳಿ ರಾಯಣ್ಣನ ಜನ್ಮದಿನಾಂಕ ಎರಡು ಒಂದೇ ಆಗಿದೆ. ಹಾಗೂ ರಾಯಣ್ಣ ಹುತಾತ್ಮನಾದ ದಿನಾಂಕ(ಜ.26) ಹಾಗೂ ಭಾರತ ಗಣರಾಜ್ಯ ಎಂದು ಘೋಷಿಸಿದ ದಿನಾಂಕ ಕೂಡಾ ಒಂದೇ ಆಗಿರುವುದು ಕಾಕತಾಳೀಯ.ಅವರ ತ್ಯಾಗ, ಬಲಿದಾನದ ದಿನ ಜನವರಿ 26 ಗಣರಾಜ್ಯೋತ್ಸವದ ದಿನಾಚರಣೆಯ ಈ ಸಂದರ್ಭದಲ್ಲಿ ಅವರ ತ್ಯಾಗ, ಬಲಿದಾನಗಳನ್ನು ಸಹ ಸ್ಮರಿಸಿಕೊಳ್ಳಲು ನಮ್ಮ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಇದ್ದರೆ ರಾಯಣ್ಣನಂತಹ ದೇಶಪ್ರೇಮಿ ಮಗನಿರಬೇಕು ಎನ್ನುವುದು ಎಲ್ಲಾ ತಾಯಂದಿರ ಮಾತಾಗಿದೆ. ರಾಯಣ್ಣನ ಹೆಸರನ್ನು ಅಮರವಾಗಿಸಲು ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಸಂಗೊಳ್ಳಿ ರಾಯಣ್ಣ ಜನ್ಮಸ್ಥಳ-ಕಾರ್ಯಸ್ಥಳವಾದ ಸಂಗೊಳ್ಳಿಯಲ್ಲಿ ಸರ್ಕಾರ ಪ್ರತಿವರ್ಷ ಜನವರಿ 12 ಮತ್ತು 13 ರಂದು ‘ಸಂಗೊಳ್ಳಿ ರಾಯಣ್ಣ ಉತ್ಸವ’ ಆಚರಿಸುತ್ತಾ ಬರಲಾಗುತ್ತಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಅಡಿಯಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಮತ್ತು ಶಿಲ್ಪವನ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ 100 ಎಕರೆ ಜಮೀನು ವಶಪಡಿಸಿಕೊಂಡು ಅಭಿವೃದ್ಧಿಪಡಿಸಿದೆ.

ಈ ನಿಟ್ಟಿನಲ್ಲಿ ಇದೀಗ ಸರ್ಕಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನ ಹಾಗೂ ಹುತಾತ್ಮ ದಿನದಂದು ರಾಜಧಾನಿ ಬೆಂಗಳೂರು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಸುವಂತೆ ಆದೇಶಿಸಿದೆ.

ಹೀಗಾಗಿ 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೇಶ ಕಟ್ಟುವ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಕಲಿಕೆಯ ಹಂತದಲ್ಲೇ ರೂಪಿಸುವ ಅಂಶಗಳನ್ನು ಆದ್ಯತೆಯ ಮೇರೆಗೆ ಸೇರಿಸಲಾಗಿದೆ. ಇದಕ್ಕೆ ಪೂರಕವಾಗಿ ಮೌಲ್ಯಧಾರಿತ ಅಂಶಗಳೂ ಇದ್ದು, ಇವುಗಳ ಆಧಾರದ ಮೇಲೆಯೇ ನೂತನ ಶಿಕ್ಷಣ ನೀತಿ ರೂಪಿತವಾಗಿದೆ. ಇದಕ್ಕೆ ಪೂರಕವಾಗಿ ಸಂಗೊಳ್ಳಿ ರಾಯಣ್ಣ ಅವರ ಕೆಚ್ಚು, ಅರ್ಪಣಾ ಮನೋಭಾವ, ದೇಶ ಭಕ್ತಿ ನಮಗೆಲ್ಲರಿಗೂ ಆದರ್ಶ.

ಈ ಮೂಲಕ ಆತನ ಹೋರಾಟದ ಅವಿಸ್ಮರಣೀಯ ಕ್ಷಣಗಳನ್ನು ಹಾಗೂ ಮೈನವಿರೇಳಿಸುವ ಹೋರಾಟದ ಕಥನಗಳನ್ನು ಜನತೆಯ ಮುಂದಿಡುವಲ್ಲಿ ರಾಜ್ಯ ಸರಕಾರ ಆಸಕ್ತಿ ವಹಿಸಿದೆ.ಆ ಮಹಾಪುರುಷನ ಬಗ್ಗೆ ನಾವು ಆರಾಧನಾ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಇಂದಿನ ಮಕ್ಕಳು ಹಾಗೂ ಯುವ ಜನತೆ ರಾಯಣ್ಣರಂಥ ಮಹಾಪುರುಷರಿಂದ ಪ್ರಭಾವಿತರಾದ ಮಾತ್ರ ಸಮಾಜದಲ್ಲಿ ಮೌಲ್ಯಗಳು ಜೀವಂತವಾಗಿ ಉಳಿಯಲು ಸಾಧ್ಯ.

– –ಬಸವರಾಜ ಎಮ್ ಯರಗುಪ್ಪಿ.

ಬಿ ಆರ್ ಪಿ ಶಿರಹಟ್ಟಿ.
ಸಾ.ಪೊ ರಾಮಗೇರಿ ತಾಲ್ಲೂಕು ಲಕ್ಷ್ಮೇಶ್ವರ ಜಿಲ್ಲಾ ಗದಗ
ದೂರವಾಣಿ 9742193758
ಮಿಂಚಂಚೆ basu.ygp@gmail.com

Related Articles

Leave a Reply

Your email address will not be published. Required fields are marked *

Back to top button