ಅಂಕಣಸಂಸ್ಕೃತಿ

ಸಂಕ್ರಮಣ: ನಿಸರ್ಗದ ಪರಿವರ್ತನೆಯ ಪರ್ವಕಾಲ

ಬೆಳಗ್ಗೆ ಬ್ರಹ್ಮ , ಮಧ್ಯಾಹ್ನ ವಿಷ್ಣು, ಸಂಜೆ ಶಿವನಾಗಿ ಪೂಜಿತ ಭಾಸ್ಕರ

-ರಾಘವೇಂದ್ರ ಹಾರಣಗೇರಾ
ಹಬ್ಬ ಹರಿದಿನಗಳು ಭಕ್ತಿ, ಧರ್ಮ ಮತ್ತು ವೃತಾಚರಣೆಗಳಿಗೆ ಸಂಬಂಧಿಸಿದ ಶುಭ ದಿನಗಳು ಹಾಗೂ ನಮ್ಮ ಸಂಸ್ಕøತಿ ಸಂವರ್ಧಕಗಳೂ ಆಗಿವೆ. ಹಿಂದೂ ಧರ್ಮದವರಿಗೆ ಧರ್ಮವೆ ಬಾಳಿನ ಉಸಿರು, ಕರ್ಮದ ಕುಶಲತೆಯೆ ಬಾಳಿನ ತಂತ್ರ, ಪೂರ್ಣಜ್ಞಾನ ಜ್ಯೋತಿಯಂತೆ ಅರಿವು ತುತ್ತ ತುದಿ ಹಬ್ಬ ಹರಿದಿನಗಳ ವೈಶಿಷ್ಟಟವಾಗಿದೆ.

ಹಬ್ಬಗಳೆಂದರೆ ಕೇವಲ ಉಂಡುಟ್ಟು ನಲಿದಾಡುವುದಲ್ಲ. ವೃತ ನಿಯಮಗಳ ಪಾಲನೆ ಎಲ್ಲಾ ದಿನಗಳಲ್ಲೂ ಆಚರಿಸಲು ಬರುವುದಿಲ್ಲ. ಆದ್ದರಿಂದ ಈ ಹಬ್ಬದ ದಿನಗಳಲ್ಲಿ ಕಡ್ಡಾಯವಾಗಿ ಆಚರಿಸುವುದರ ಮೂಲಕ ಅವುಗಳ ಮಹತ್ವ ಸಾರುತ್ತೇವೆ. ಇದಕ್ಕಾಗಿ ಸ್ನಾನ, ವಂದನೆ, ಜಪ, ತಪ, ಪೂಜೆಗಳು ಇತ್ಯಾದಿಗಳು ನೆರೆವೇರಿಸುತ್ತಾರೆ. ಬಾಹ್ಯ ಶುದ್ದಿಗಿಂತ ಅಂತ:ಶುದ್ದಿಯೇ ಇವುಗಳ ಮುಖ್ಯ ಉದ್ಧೇಶವಾಗಿರುತ್ತವೆ.

ಮಾನವನ ನಿಸರ್ಗ ಆರಾಧನೆ ಮನಕುಲದಷ್ಟೇ ಪುರಾತನ. ನಿಸರ್ಗ ಪ್ರಕೋಪದಿಂದ ಉದ್ಭವಿಸುವ ಆಗು ಹೋಗುಗಳ ರಹಸ್ಯವನ್ನು ಭೇದಿಸಲು ಅಸಮರ್ಥವಾದಾಗ ಅವು ದೈವಿ ಶಕ್ತಿಗಳ ಸ್ವರೂಪ ಪಡೆದು ನಿಸರ್ಗದ ಆರಾಧನೆ ಆರಂಭವಾಯಿತು. ಕಾಲ ಕ್ರಮೇಣ ನಿಸರ್ಗದ ಆರಾಧನೆ ಹಬ್ಬ ಹರಿದಿನಗಳ ಸ್ವರೂಪ ಪಡೆದುಕೊಂಡು ಜನರು ಆಚರಿಸತೊಡಗಿದರು. ನಾಡ ಸಂಸ್ಕøತಿಯ ಕಂಪನ್ನು ಬೀರುತ್ತ ಸಂಸ್ಕೃತಿಯನ್ನು ಪರಿಚಯಿಸಲು ಹಬ್ಬ ಹರಿದಿನಗಳು ಆವರ್ತ ರೂಪದಲ್ಲಿ ಬರುತ್ತಿರುತ್ತವೆ. ಈ ಮಾತಿಗೆ ಸಂಕ್ರಾತಿಯೇ ಒಂದು ನಿರ್ದೇಶನ.
ರೈತರ ಸುಗ್ಗಿಯ ಸಂಭ್ರಮ

ಹೇಮಂತ ಋತುವಿನಲ್ಲಿ ಬರುವ ಪವಿತ್ರಾ ಸಂಕ್ರಾತಿ ಹಬ್ಬದ ಸಂಧರ್ಭದಲ್ಲಿ ರೈತರಿಗೆ ಸುಗ್ಗಿಯ ಸಂಭ್ರಮವಿರುತ್ತದೆ. ಸೂರ್ಯನು ಉತ್ತರಾಯಣ ಪ್ರವೇಶಿಸುವ ಪುಣ್ಯದ ಪರ್ವಕಾಲ. ಶುಭ ಕಾರ್ಯಗಳಿಗೆ ಈ ಹಬ್ಬ ನಾಂದಿಯಾಡುತ್ತದೆ. ಮನುಷ್ಯನ ಜೀವನದಲ್ಲಿ ಸಂಕ್ರಾಂತಿಯನ್ನುಂಟು ಮಾಡುವ ಈ ದಿನವನ್ನು ಕರ್ನಾಟಕದಲ್ಲಿ ಸಂಕ್ರಮಣ, ತಮಿಳಿನಾಡುನಲ್ಲಿ ಪೊಂಗಲ, ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಎಂಬ ಹೆಸರುಗಳಲ್ಲಿ ವೈವಿಧ್ಯಮಯವಾಗಿ ಆಚರಿಸುತ್ತಾರೆ.

ನಿಸರ್ಗದ ದಿವ್ಯ ಶಕ್ತಿಯ ಆರಾಧನೆಯಲ್ಲಿ ನಭೋ ಮಂಡಲದ ಸ್ವರ್ಣಾಭರಣವೆಂಬಂತೆ ಮೆರೆಯುತ್ತಿರುವ ಸೂರ್ಯನಿಗೆ ಹಿರಿದಾದ ಪ್ರಾಧಾನ್ಯತೆ ಕೊಡಲಾಗಿದೆ. ಸಕಲ ಜೀವಿಗಳ ಚೈತನ್ಯ ಪೋಷಜನ್ನಾಗಿರುವ ಭಾಸ್ಕರನ್ನು ಬೆಳಗಿನ ವೇಳೆ ಬ್ರಹ್ಮನ್ನಾಗಿಯೂ, ಮಧ್ಯಾಹ್ನ ವಿಷ್ಣುವಾಗಿ, ಸಂಜೆ ಶಿವನಾಗಿಯೂ ಜನರಿಂದ ಆರಾಧಿಸಲ್ಪಡುತ್ತಾನೆ. ಮಳೆ, ಬೆಳೆ, ರೋಗ, ರುಜ್ಜೀನಿ, ಕತ್ತಲು, ಬೆಳಕು ಮತ್ತಿತರ ಪ್ರಕೃತಿಯ ಆಗು ಹೋಗುಗಳಿಗೆ ಸೂರ್ಯ ದೇವತೆಯೇ ಕಾರಣೀಭೂತ ಎಂಬ ನಂಬಿಕೆ ಇಂದಿಗೂ ಜನರಲ್ಲಿ ಕಾಣಬಹುದಾಗಿದೆ.

ಇಂಗ್ಲೀಷ್ ಕ್ಯಾಲೆಂಡೆರ್ ಪ್ರಕಾರ ಪ್ರತಿ ವರ್ಷ ಜನೆವರಿ 14, 15ರಂದು ತಪ್ಪದೇ ಬರುವ ಪರ್ವಕಾಲವೇ ಸಂಕ್ರಾಮಣ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದೇ ಸಂಕ್ರಾಮಣ ಕಾಲವೆಂದು ಕರೆಯಲಾಗುತ್ತೆದೆ. ಮಕರ ಸಂಕ್ರಾಮಣದೆಂದು ಸೂರ್ಯನು ತನ್ನ ಪಥವನ್ನು ಬದಲಾಯಿಸಿ ಮಕರ ರಾಶಿಯನ್ನು ಪ್ರವೇಶಿಸಿ, ದಕ್ಷಿಣದಿಂದ ಉತ್ತರಾಭಿಮುಖವಾಗಿ ಪಯಣಿಸುತ್ತಾನೆ. ಋತುಮಾನಗಳ ವೈಪರೀತ್ಯ ಅಂದು ನಿಖರವಾಗಿ ಗೋಚರವಾಗುವುದನ್ನು ಕಾಣಬಹುದು. ಹಿಂದೂ ಧರ್ಮದವರಿಗೆ ಉತ್ತರಾಯಣವು ಪರ್ವಕಾಲ.

ಭೋಗಿ, ಸಂಕ್ರಮಣ ಮತ್ತು ಕನು ಎಂಬ ಮೂರು ಹಬ್ಬಗಳ ಆಚರಣೆಯೊಂದಿಗೆ ಮಕರ ಸಂಕ್ರಮಣ ಸೇರಿಕೊಂಡಿದೆ. ಭೋಗಿ ಸಂಕ್ರಮಣ ಉಪವಾಸ ವೃತದ ಸಾಮಿಪ್ಯವನ್ನು ಹೊಂದಿದ್ದು ಕೌಟುಂಬಿಕ ಕ್ಷೇತ್ರಕ್ಕೆ ಸೀಮಿತ. ಭೋಗಿ ದಿನ ಹಾಲು ಬೆಲ್ಲ ಅಕ್ಕಿಯಿಂದ ಮಾಡಿದ ಪೊಂಗಲ್ ಎಂಬ ಪಾಯಸವನ್ನು ಸೂರ್ಯದೇವೆತೆಗೆ ನೈವೇದ್ಯ ಸಲ್ಲಿಸುತ್ತಾರೆ. ತಮಿಳರಿಗೆ ‘ಪೊಂಗಲ್’ ಸುಗ್ಗಿಯ ಹಬ್ಬ, ಕನ್ನಡಿಗರಿಗೆ ಅಂದು ಹೊಸ ಅಕ್ಕಿಯ ಹುಗ್ಗಿಯ ಪೇಜುವಾನಿ ಮೂರನೇ ದಿನ ಗೋಮಾತೆಯ ಆರಾಧನೆ, ಕೃಷಿಕರು ಅಂದು ದನ-ಕರುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುತ್ತಾರೆ.

ಪೀಡೆ ನಿವಾರಣೆಯ ಪ್ರತಿಕವಾಗಿ ಬೆಂಕಿಯ ಕಿಚ್ಚಿನ ಮೇಲಿಂದ ಹಾಯಿಸುತ್ತಾರೆ. ಸಂಕ್ರಾಂತಿ ಹಬ್ಬದಂದು ಹಲವುಕಡೆ ಜಾತ್ರೆಗಳು ನಡೆಯುತ್ತವೆ. ವರ್ಷವಿಡೀ ದುಡಿಮೆಯ ಆಯಾಸ ಈ ಪರ್ವಕಾಲದಂದು ರೈತ ಭಾಂಧವರು ಜಾತ್ರೆಗಳಿಂದ ನೀಗಿಸಿಕೊಳ್ಳುತ್ತಾರೆ.

ಪುಟಾಣಿಯರ ಪೀಡೆ ಪರಿಹಾರಕ್ಕೆ ಅವರಿಗೆ ಅಭ್ಯಂಜನ ಸ್ನಾನ ಮಾಡಿಸಿ ಅವರ ತಲೆಯ ಮೇಲೆ ಬಾರಿಹಣ್ಣು ಹಾಗೂ ಕಬ್ಬಿನ ಹೋಳುಗಳನ್ನು ಎರೆದು ಆರತಿ ಮಾಡುತ್ತಾರೆ. ಹಲವರು ನದಿಗಳಿಗೆ ಹೋಗಿ ಪುಣ್ಯ ಸ್ನಾನ ಮಾಡಿ ಬರುತ್ತಾರೆ. ಜಲಸ್ನಾನವನ್ನು ಮಾಡಿ ಮಕರ ಸಂಕ್ರಮಣದಂದು ಕೆಲವು ದೇವಾಲಯಗಳ ಉತ್ತರ ಬಾಗಿಲನ್ನು ಪ್ರವೇಶಿಸಿದರೆ ಸ್ವರ್ಗದ ಬಾಗಿಲು ನೋಡಿ ಬಂದಷ್ಟೇ ಪುಣ್ಯವೆಂಬ ನಂಬಿಕೆಯೂ ಇದೆ.

ಈ ಹಬ್ಬದ ಸಂಧರ್ಭದಲ್ಲಿ ಎಳ್ಳು-ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ಮೂಲಕ ಜನರು ಪರಸ್ಪರ ಸ್ನೇಹ ಸೌಹಾರ್ಧತೆಯನ್ನು ಮೆರೆಯುತ್ತಾರೆ. ಎಳ್ಳು-ಬೆಲ್ಲ ವಿತರಿಸಿ ಪ್ರಾಶನ ಮಾಡಿ, ನಾಡು-ನುಡಿಯ ಬದುಕಿನ ಪರಂಪರೆಯನ್ನು ಸವಿಯಾಗಿ ನೆನಪಿಸಿಕೊಡಲು ಮರಳಿ ಮರಳಿ ಬರುತ್ತಿರುವ ಈ ಮಕರ ಸಂಕ್ರಮಣ ಸರ್ವ ಜನರ ಬದುಕಿಗೆ ಭರವಸೆಯ ಆಶಾಕಿರಣ ಮೂಡಿಸಲಿ ಎಂದು ಆಶಿಸುತ್ತ ಎಲ್ಲರಿಗೂ ಈ ಪರ್ವಕಾಲ ಶುಭ ತರಲಿ ಎಂದು ಹಾರೈಸುತ್ತೇನೆ.

-ರಾಘವೇಂದ್ರ ಹಾರಣಗೇರಾ

ಸಮಾಜಶಾಸ್ತ್ರ ಉಪನ್ಯಾಸಕರು.

ಶಹಾಪೂರ ಮೊ| 99001559873

Related Articles

Leave a Reply

Your email address will not be published. Required fields are marked *

Back to top button