ಗಣೇಶ ಉತ್ಸವ ದೇಶಿ ಸಾಂಸ್ಕೃತಿಕದ ಪ್ರತೀಕ – ಲಕ್ಷ್ಮಣ ಲಾಳಸಗೇರಿ
ಸಾಮಾಜಿಕ ಕಾರ್ಯಕ್ಕೆ ಗಣೇಶೋತ್ಸವ ನಾಂದಿ

ಗಣೇಶ ಉತ್ಸವ ದೇಶಿ ಸಾಂಸ್ಕೃತಿಕದ ಪ್ರತೀಕ
ಸಾಮಾಜಿಕ ಕಾರ್ಯಕ್ಕೆ ಗಣೇಶೋತ್ಸವ ನಾಂದಿ
yadgiri, ಶಹಾಪುರಃ ಗಣೇಶೋತ್ಸವ ಆಚರಣೆ ಮೂಲಕ ನಮ್ಮ ದೇಶಿ ಸಾಂಸ್ಕೃತಿಕದ ಸಂರಕ್ಷಣೆ, ಸಮೃದ್ಧ ಬೆಳವಣಿಗೆ ಅಲ್ಲದೆ ಸಾಮಾಜಿಕ ಸಂಘಟನೆ ಬಲಗೊಳ್ಳಲಿದೆ ಎಂದು ತಾ.ಪ್ರಾ.ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಲಾಳಸಗೇರಿ ಅಭಿಪ್ರಾಯಪಟ್ಟರು.
ನಗರದ ಕುಂಬಾರ ಓಣಿಯಲ್ಲಿ ಸರ್ವಜ್ಞ ಯುವ ಬಳಗದಿಂದ ಪ್ರಸ್ತುತ 27 ನೇ ವರ್ಷದ ಗಣೇಶೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಣೇಶನ ಪ್ರತಿಷ್ಠಾಪನಾ ನಂತರ ನಿತ್ಯ ಒಂದಿಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ರೀಡೆಗಳು, ಸ್ಪರ್ಧೆಗಳು ಜತೆಗೆ ವಿಶೇಷವಾಗಿ ಮಡಿಕೆ ಒಡೆಯುವದು ಸೇರಿದಂತೆ ಹಲವಾರು ಸಾಂಪ್ರದಾಯಿಕ ಕ್ರೀಡೆಗಳನ್ನು ಸಾಮೂಹಿಕವಾಗಿ ನಡೆಸುವದರಿಂದ ಸಾಮಾಜಿಕವಾಗಿ ಅಭಿವೃದ್ಧಿಗೆ ಸಹಕಾರವಾಗಲಿದೆ. ಆ ನಿಟ್ಟಿನಲ್ಲಿ ಸತತ 27 ವರ್ಷದಿಂದ ಸರ್ವಜ್ಞ ಯುವ ಬಳಗ ಉತ್ತಮ ಕಾರ್ಯ ಮಾಡುತ್ತಾ ಬಂದಿರುವದು ಶ್ಲಾಘನೀಯ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿ, ಗಣೇಶನ ಹಬ್ಬದಂಗವಾಗಿ ವಿಶೇಷವಾಗಿ ಮಡಿಕೆ ಒಡೆಯುವ ಕಾರ್ಯಕ್ರಮ ಮನಮೋಹಕವಾಗಿದ್ದು, ಅದನ್ನು ನೋಡಲು ಜನ ಕಾತುರದಲ್ಲಿದ್ದಾರೆ. ಮುಂಚಿತವಾಗಿ ಹಬ್ಬದಂಗವಾಗಿ ಮಕ್ಕಳು, ಮಹಿಳೆಯರ ಸಹಭಾಗಿತ್ವದಲ್ಲಿ ವಿವಿಧ ಕ್ರೀಡೆಗಳ ಸ್ಪರ್ಧೆ ನಡೆಸಿ ಬಹುಮಾತನ ವಿತರಿಸುವ ಜತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಲು ಸಹಕಾರಿಯಾದ ರಸಪ್ರಶ್ನೆ ಕಾರ್ಯಕ್ರಮ ನೆರವೇರಿಸಿರುವದು ಸರ್ವಜ್ಞನ ಯುವ ಬಳಗದ ಉತ್ತಮ ಕಾರ್ಯಕ್ಕೆ ಹಿಡಿದ ಕೈಗನ್ನಡಿ, ಗಣೇಶ ಸನಾತನ ಧರ್ಮದ ಧಾರ್ಮಿಕ ಕಾರ್ಯಕ್ರಮಕ್ಕೆ ಮೊದಲ ಪೂಜಿತ ಅವಕಾಶ ಪಡೆದಾತ. ಗಣೇಶನನ್ನ ಶ್ರದ್ಧಾ ಭಕ್ತಿಯಿಂದ ಪೂಜಿಸಿದ್ದಲ್ಲಿ ಫಲ ನೀಡುವದರಲ್ಲಿ ಅನುಮಾನವೇ ಬೇಡ. ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ.? ಜಾತಿ ವಿಜಾತಿ ಎನಬೇಡ ದೇವನೊಲಿದಾತನೇ ಜಾತಾ ಸರ್ವಜ್ಞ ಎಂಬಂತೆ, ದೇವರಿಗೆ ಪ್ರಿಯವಾಗಬೇಕಾದಲ್ಲಿ ನಾವೆಲ್ಲ ಯಾವ ರೀತಿ ನಡೆದುಕೊಳ್ಳಬೇಕು ನಮ್ಮ ವ್ಯಕ್ತಿತ್ವ ಎಂಥದ್ದಿರಬೇಕೆಂಬುದು ಮೊದಲು ನಾವೆಲ್ಲ ಅರ್ಥೈಸಿಕೊಂಡು ಬದುಕು ರೂಪಿಸಿಕೊಳ್ಳಬೇಕಿದೆ. ಸತ್ಯ, ನ್ಯಾಯ ನಿಷ್ಠೆ ಪ್ರಾಮಾಣಿಕತೆ ಮೈಗೂಡಿಸಿಕೊಂಡು ನಡೆದಾಗ ಮಾತ್ರ ದೇವರು ಅಂಥವರ ಜತೆ ಸದಾ ಇರಲಿದ್ದಾನೆಂಬುದು ಮನಗಾಣಬೇಕಿದೆ ಎಂದರು.
ಸಾನ್ನಿಧ್ಯವಹಿಸಿದ್ದ ಚರಬಸವೇಶ್ವರ ಸಂಸ್ಥಾನದ ಬಸವಯ್ಯ ಶರಣರು ಆಶೀರ್ವಾದ ವಚನ ನೀಡಿದರು. ನಿವೃತ್ತ ಶಿಕ್ಷಕ ಸೊಮಶೇಖರಯ್ಯ ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಸಮಾಜದ ಮುಖಂಡ ಸಿದ್ರಾಮಪ್ಪ ಕೆರವಟಿಗಿ, ಡಾ.ಬಸವರಾಜ ಇಜೇರಿ, ಕುಂಬಾರ ಸಮಾಜದ ಯುವ ಘಟಕದ ಅಧ್ಯಕ್ಷ ಉಮೇಶ ಗುಡಗುಂಟಿ, ಉದ್ಯಮಿ ಮನೋಜ ಸೇಠ ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದವರಿಗೆ ಬಹುಮಾನ ವಿತರಿಸಲಾಯಿತು. ನಂತರ ರಾತ್ರಿ 1 ಗಂಟೆವರೆಗೂ ಮಡಿಕೆ ಒಡೆಯುವ ಕಾರ್ಯಕ್ರಮ ಬಲು ರೋಚಕವಾಗಿ ನಡೆಯಿತು. ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರ ಪೂಜೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು. ಯುವ ಮುಖಂಡ ಶರಣು ಯಡ್ರಾಮಿ ನಿರೂಪಿಸಿ ವಂದಿಸಿದರು. ಮಡಿಕೆ ಒಡೆಯುವ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ 3 ಸಾವಿರ ದ್ವಿತೀಯ ಬಹುಮಾನ 2 ಸಾವಿರ ತೃತೀಯ ಬಹುಮಾನ 1 ಸಾವಿರ ರೂಪಾಯಿ ನಗದು ವಿತರಿಸಲಾಯಿತು. ಉಳಿದಂತೆ ವಿವಿಧ ಕ್ರೀಡೆಗಳಲ್ಲಿ ಜಯ ಗಳಿಸಿದ ಸ್ಪರ್ಧಾಳುಗಳಿಗೂ ಟಿಫಿನ್ ಬಾಕ್ಸ್, ನೀರಿನ ಬಾಟಲಿ ಸೇರಿದಂತೆ ಮಕ್ಕಳಿಗೆ ಪೆನ್ನು, ಕಾಪಿ ವಿತರಣೆ ಮಾಡಲಾಯಿತು.