ವಾರದ ಹಿಂದೆ ಭರವಸೆ ನೀಡಿದ್ದ ಪೌರಾಯುಕ್ತ ಎಲ್ಲಿ.? ಮಹಿಳೆಯರ ಆಕ್ರೋಶ
ಮಹಿಳಾ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮತ್ತೆ ನಗರಸಭೆಗೆ ಮುತ್ತಿಗೆ
ಮಹಿಳಾ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮತ್ತೆ ನಗರಸಭೆಗೆ ಮುತ್ತಿಗೆ
ಕಾದು ಕಾದು ಸುಸ್ತಾದ ಮಹಿಳೆಯರು ಪೌರಾಯುಕ್ತರ ವಿರುದ್ಧ ಆಕ್ರೋಶ
yadgiri, ಶಹಾಪುರಃ ನಗರದ ವಾರ್ಡ್ ಸಂಖ್ಯೆ 26 ರಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ಸೌಕರ್ಯ ಸೇರಿದಂತೆ ವಾರಕ್ಕೊಮ್ಮೆ ಕುಡಿಯುವ ನೀರು ದೊರೆಯುತ್ತಿದ್ದು, ನೀರು ಮತ್ತು ಮಹಿಳೆಯರ ಬಯಲು ಶೌಚ ಅನಿವಾರ್ಯತೆಯಿಂದ ಬೇಸತ್ತ ಮಹಿಳೆಯರು ಶುಕ್ರವಾರ ಮತ್ತೆ ನಗರಸಭೆಗೆ ಮುಂದೆ ಚಂಬು ಸಮೇತ ಆಗಮಿಸಿದ್ದ ಮಹಿಳೆಯರು ಧರಣಿ ನಡೆಸಿದರು.
ಒಂದು ಗಂಟೆ ಕಳೆದರೂ ಧರಣಿ ಸ್ಥಳಕ್ಕೆ ಆಗಮಿಸದ ಪೌರಾಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಸಾಮಾನ್ಯ ಸಭೆ ನಡೆಯುತ್ತಿದ್ದ ಸಭಾಂಗಣಕ್ಕೆ ಧರಣಿನಿರತ ಮಹಿಳೆಯರೇ ತೆರಳಿ ಪೌರಾಯುಕ್ತರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಹೊರಗಡೆ ಬಂದ ಪೌರಾಯುಕ್ತ ಇಂದು ಸಾಮಾನ್ಯ ಸಭೆ ಜರುಗುತ್ತಿದೆ. ನಿಮ್ಮ ಸಮಸ್ಯೆ ನನಗೆ ಗೊತ್ತಿದೆ. ಸಾರ್ವಜನಿಕ ಶೌಚಾಲಯ ಕಟ್ಟಲು ನಿಮ್ಮ ವಾರ್ಡ್‍ನಲ್ಲಿ ಸರ್ಕಾರಿ ಜಾಗ ಇರುವದಿಲ್ಲ. ಅಲ್ಲದೆ ಯಾವುದಾದರೂ ನಿವೇಶನ ಕೊಟ್ಟರೆ ಅದಕ್ಕೆ ತಕ್ಕ ಬೆಲೆ ನೀಡಿ ಖರೀಧಿಸಿ ಶೌಚಾಲಯ ನಿರ್ಮಾಣ ಮಾಡಬೇಕಿದೆ. ಇದಕ್ಕೆಲ್ಲ ಸಮಯ ಬೇಕು ಎಂದು ಸಮಜಾಯಿಸಿದರು.
ಮಾತು ಆಲಿಸದ ಮಹಿಳೆಯರು ಕಳೆದ ವಾರವು ಇದೇ ಹೇಳಿದ್ರಿ, ಅದೇ ರಾಗ ಅದೇ ತಾಳ ಎನ್ನುವಂತಾಗಿದೆ. ಕೂಡಲೇ ಮಹಿಳಾ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು.
ವಾರ್ಡ್ ಸಂಖ್ಯೆ 26 ರಲ್ಲಿ ಮೂಲ ಸೌಕರ್ಯ ಇಲ್ಲದೆ ಜನರು ಪರದಾಡುವಂತಾಗಿದೆ. ಮೂರು ದಿನಗಳಿಗೊಮ್ಮೆ ನಲ್ಲಿ ನೀರು ಬಿಡಲಾಗುತ್ತಿದೆ. ಮಹಿಳೆಯರಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಪೌರಾಯುಕ್ತ ಓಂಕಾರ ಪೂಜಾರಿ, ಎಇಇ ನಾನಾಸಾಬ ಮಡಿವಾಳ ಪ್ರತಿಭಟನಾ ನಿರತ ಮಹಿಳೆಯರನ್ನು ಸಮಜಾಯಿಸಿದರು. ಇಷ್ಟರಲ್ಲಿಯೇ ಸೂಕ್ತ ವ್ಯವಸ್ಥೆ ಕಲ್ಪಿಸುವ ಯತ್ನದಲ್ಲಿದ್ದೇವೆ. ನಿಮ್ಮ ಬಡಾವಣೆಯಲ್ಲಿ ನಿವೇಶನ ಕೊಡಿ ಕೂಡಲೇ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸೋಣ. ಕುಡಿಯುವ ನೀರು ಮಳೆ ಅಭಾವದಿಂದ ಮುಂದೆ ನೀರು ಕಡಿಮೆ ಬೀಳಬಾರದೆಂಬ ಕಾರಣಕ್ಕೆ ಮೂರು ದಿನಗಳಿಗೊಮ್ಮೆ ಬಿಡಲಾಗುತ್ತಿದೆ. ಇಷ್ಟರಲ್ಲಿಯೇ ಫಿಲ್ಟರ್ ಬೆಡ್ ಕೆರೆ ತುಂಬಿದಲ್ಲಿ ಸಮರ್ಪಕವಾಗಿ ನೀರು ಹರಿಸಲಾಗುವದು ಎಂದರು.
ಈ ಸಂದರ್ಭದಲ್ಲಿ ಮುಖಂಡ ಬಸವರಾಜ ರತ್ತಾಳ ಸೇರಿದಂತೆ ನಿವಾಸಿಗಳಾದ ಭಾಗಮ್ಮ, ಭೀಮವ್ವ, ಮಲ್ಲಮ್ಮ ಬಂದಳ್ಳಿ, ಅಂಬಪ್ಪ ದರ್ಶನಾಪುರ, ಗೌರಮ್ಮ ನರಿ, ಭೀಮವ್ವ ಕಾಡಂಗೇರಿ, ಶಾಂತಮ್ಮ ತಳವಾರ, ಅವಮ್ಮ ಚಂಡು, ದೇವಮ್ಮ, ಶಾಂತಮ್ಮ ಹೊಸಮನಿ ಬಡಾವಣೆಯ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದರು.
ವಾರ್ಡ್ ಸಂಖ್ಯೆ 26 ರಲ್ಲಿ ಮಹಿಳಾ ಸಾರ್ವಜನಿಕ ಶೌಚಾಲಯ ಇಲ್ಲದೆ ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಆದರೆ ಆ ಬಡಾವಣೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸರ್ಕಾರಿ ಜಾಗವಿಲ್ಲ. ಅಥವಾ ಯಾರಾದರೂ ಜಾಗ ನೀಡಿದಲ್ಲಿ ತಕ್ಕ ಬೆಲೆ ಕೊಟ್ಟು ಶೌಚಾಲಯ ನಿರ್ಮಾಣದ ಮಾಡಲಾಗುವದು. ಜಾಗ ಪರಿಶೀಲನೆಯಲ್ಲಿದ್ದೇವೆ. ಕುಡಿಯುವ ನೀರು ಇಷ್ಟರಲ್ಲಿ ನಿತ್ಯ ಬಿಡುವ ವ್ಯವಸ್ಥೆ ಮಾಡಲಾಗುವುದು.
-ಓಂಕಾರ ಪೂಜಾರಿ. ಪೌರಾಯುಕ್ತ. ಶಹಾಪುರ.