ಪೊಲೀಸಪ್ಪನ ಪೋಲಿ ಪುರಾಣ : ಗ್ರಹಚಾರ ಬಿಡಿಸಿದ ಗ್ರಾಮೀಣ ಜನ
ಪೊಲೀಸರ ಬಗ್ಗೆ ಇಂದಿಗೂ ಸಮಾಜದಲ್ಲಿ ಹೆಚ್ಚಿನ ಗೌರವ ಇದೆ. ನೊಂದವರಿಗೆ ನ್ಯಾಯ ಕೊಡಿಸುವವರು ಆರಕ್ಷಕರು ಎಂಬ ನಂಬಿಕೆ ಉಳಿದಿದೆ. ಅಂತೆಯೇ ಅನೇಕ ಪೊಲೀಸರು, ಅಧಿಕಾರಿಗಳು ದಕ್ಷರಾಗಿ ದುಡಿದು ಇಲಾಖೆಯ ಗೌರವವನ್ನು ಹೆಚ್ಚಿಸಿದ್ದಾರೆ. ಆದರೆ, ಅಷ್ಟೇ ಪ್ರಮಾಣದ ಪೊಲೀಸರು ಇಲಾಖೆಗೆ ಕಪ್ಪು ಚುಕ್ಕಿ ಇಟ್ಟಿರುವುದು ಸಹ ಸತ್ಯ. ಈಗ ಇಲಾಖೆಗೆ ಕಪ್ಪುಚುಕ್ಕೆಯಾದ ಮತ್ತೋರ್ವ ಪೊಲೀಸಪ್ಪನ ಪ್ರಕರಣ ಬಯಲಾಗಿದೆ.
ರಾಮನಗರ ನಗರದ ಸಂಚಾರಿ ಠಾಣೆಯ ಪೊಲೀಸ್ ಪೇದೆ ಲೊಕೇಶ್ ಸ್ವಗ್ರಾಮದ ಪಕ್ಕದೂರಿನ ಮಹಿಳೆಯನ್ನು ಪರಿಚಯಿಸಿಕೊಂಡಿದ್ದಾನಂತೆ. ಫೇಸ್ ಬುಕ್, ವಾಟ್ಸಪ್ ಮೂಲಕ ಸಂಪರ್ಕ ಮತ್ತು ಸಲುಗೆ ಬೆಳೆಸಿಕೊಂಡಿದ್ದಾನಂತೆ. ಪೊಲೀಸ್ ಇಲಾಖೆಯ ದೈಹಿಕ ಪರೀಕ್ಷೆಗೆಂದು ರಾಮನಗರಕ್ಕೆ ತೆರಳಿದ್ದಾಗ ಬಲೆಗೆ ಬೀಳಿಸಿಕೊಂಡು ಲೈಂಗಿಕವಾಗಿ ಬಳಸಿಕೊಂಡಿದ್ದಾನಂತೆ. ಅಷ್ಟೇ ಅಲ್ಲದೆ, ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆಂಬ ಆರೋಪವೂ ಕೇಳಿ ಬಂದಿದೆ.
ಮಹಿಳೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಪತಿಯ ಮನೆ ಸೇರಿದರೂ ಸಹ ಪೇದೆ ಲೊಕೇಶ್ ಬೆನ್ನು ಬಿಡದೆ ಕಾಡಿದ್ದಾನೆ. ಪಂಚೆ, ಟೀಶರ್ಟ್ ತೊಟ್ಟು ವೇಷ ಬದಲಿಸಿಕೊಂಡು ಸ್ಥಳೀಯರಂತೆ ಗ್ರಾಮಕ್ಕ ಬರುವುದು. ವಾಟ್ಸಪ್ ಸಂದೇಶಗಳನ್ನು ಕಳುಹಿಸುವುದನ್ನು ಶುರು ಮಾಡಿದ್ದಾನೆ. ಆದರೆ, ಗ್ರಹಚಾರ ಕೆಟ್ಟು ಮಹಿಳೆಯ ಪತಿ ಮತ್ತು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಹಣ್ಣುಗಾಯಿ ನೀರುಗಾಯಿ ಆಗಿದ್ದಾನೆ.
ಮಹಿಳೆಯೊಂದಿಗೆ ಅನೈತಿಕ ಸಂಪರ್ಕ ಇಟ್ಟುಕೊಂಡಿದ್ದ ಪೇದೆಗೆ ಗ್ರಾಮಸ್ಥರು ಸರಿಯಾಗಿ ಬುದ್ಧಿ ಕಲಿಸಿ ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ವಿವಾಹಿತ ಆಗಿದ್ದರೂ ಸಹ ಪರಸ್ತ್ರೀಯ ಬೆನ್ನುಹತ್ತಿ ರಾಮನಗರದಿಂದ ಹಿರಿಯೂರಿಗೆ ಬಂದಿದ್ದ ಪೇದೆಗೆ ಧರ್ಮದೇಟು ನೀಡಿ ಬುದ್ಧಿ ಹೇಳಿದ್ದಾರೆ. ಇನ್ನಾದರೂ ಪೋಲಿ ಪೇದೆ ತಪ್ಪು ತಿದ್ದಿಕೊಂಡು ನಡೆಯಬೇಕು. ಪೊಲೀಸರು ಪೇದೆ ಲೊಕೇಶ್ ಗೆ ಸರಿಯಾದ ಶಾಸ್ತಿ ಮಾಡಬೇಕು ಎಂದು ಗ್ರಾಮೀಣ ಜನ ಆಗ್ರಹಿಸಿದ್ದಾರೆ.