ಪರಿಹಾರ ನಿಧಿಗೆ ನಿವೃತ್ತ ಶಿಕ್ಷಕನಿಂದ ಮಾಸಿಕ ವೇತನ ದೇಣಿಗೆ
ದೇಶದ ಪ್ರತಿ ಸಂಕಷ್ಟಕ್ಕೆ ಮಿಡಿಯುವ ನಿವೃತ್ತ ಶಿಕ್ಷಕ
ಶಹಾಪುರಃ ಕಾರ್ಗಿಲ್ ಯದ್ಧ ಸಂದರ್ಭ ಸೇರಿದಂತೆ ನೆರೆ ಹಾವಳಿ, ಸುನಾಮಿ ಸಂದರ್ಭ ಸೇರಿದಂತೆ ಇತರೆ ತುರ್ತು ಪರಿಸ್ಥಿತಿಯಲ್ಲಿ ಇಲ್ಲಿನ ನಿವೃತ್ತ ಶಿಕ್ಷಕ ಸೋಮಶೇಖರ ಹಿರೇಮಠ ಪ್ರತಿ ಬಾರಿ ತಮ್ಮ ತಿಂಗಳ ವೇತನವನ್ನು ತುರ್ತು ಪರಿಹಾರ ನಿಧಿಗೆ ನೀಡುವ ಮೂಲಕ ಎಲ್ಲರಿಗೂ ಮಾದರಿ ಎನಿಸಿದ್ದಾರೆ.
ಪ್ರತಿ ಬಾರಿ ದೇಶದಲ್ಲಿ ಇಂತಹ ವಿಷಮ ಸ್ಥಿತಿ ಉಂಟಾದಾಗ ಮನಮಿಡಿಯುವ ನಿವೃತ್ತ ಶಿಕ್ಷಕರು ಕೈಲಾದ ಸಹಾಯ ಸಹಕಾರ ನೀಡುತ್ತಾ ಬಂದಿರುವದು ಇವರ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ಅದರಂತೆ ಈ ಬಾರಿ ಕೊರೊನಾ ವೈರಸ್‍ನಿಂದ ದೇಶ ತಲ್ಲಣಗೊಂಡಿರುವದನ್ನು ಮನಗಂಡ ಅವರು, ಪ್ರಧಾನಿ ಪರಿಹಾರ ನಿಧಿಗೆ 12,2,90 ರೂ. ಮತ್ತು ರಾಜ್ಯ ಸಿಎಂ ಪರಿಹಾರ ನಿಧಿಗೆ 12,2,80 ರೂ. ಒಟ್ಟು 24,5,70 ಒಂದು ತಿಂಗಳದ ವೇತನವನ್ನು ಅವರು ದೇಣಿಗೆಗೆ ನೀಡಿದ್ದಾರೆ.
ಜನ ಸಮುದಾಯದಲ್ಲಿ ಉಂಟಾಗುವ ಪ್ರತಿ ಬಾರಿ ಇಂತಹ ನೈಸರ್ಗಿಕ ವಿಕೋಪಕ್ಕೆ ತುತ್ತಾದಾಗ ದೇಶ, ರಾಜ್ಯದ ಪರಿಹಾರ ನಿಧಿಗೆ ತಮ್ಮ ಮಾಸಿಕ ಪಗಾರನ್ನು ನೀಡುತ್ತಾ ಬಂದಿದ್ದಾರೆ. ಈ ಸಂದರ್ಭದಲ್ಲಿ ಕೊರೊನಾ ಕುರಿತು ಅಭಿಪ್ರಾಯ ಹಂಚಿಕೊಂಡ ಅವರು, ಸರ್ಕಾರ ನೀಡಿದ ಸೂಚನೆಯನ್ನು ಜನರು ಪಾಲಿಸಬೇಕು.
ಮುಂದಿನ ಸ್ಥಿತಿ ಅರಿತು ಕೇಂದ್ರ, ರಾಜ್ಯ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಜನರ ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು. ಜನರ ಉಳಿವಿಗಾಗಿಯೇ ಅವರೆಲ್ಲ ಹೋರಾಟ ನಡೆಸುತ್ತಿದ್ದಾರೆ. ಪೊಲೀಸರು ಮತ್ತು ವೈದ್ಯರು, ನರ್ಸ್, ಕಾರ್ಮಿಕರ ಅನಿಯಮಿತ ಶ್ರಮಕ್ಕೆ ಗೌರವ ನೀಡಬೇಕು. ಕೈಲಾದ ಸಹಾಯ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.