ಪ್ರಮುಖ ಸುದ್ದಿ

ಮೊರಾರ್ಜಿ ದೇಸಾಯಿ ವಸತಿ ಶಾಲೆಃ ವಿದ್ಯಾರ್ಥಿಗಳಿಂದ ಪ್ರತಿಭಟನೆ

ವಾರ್ಡನ್, ಪ್ರಿನ್ಸಿಪಾಲ್, ನರ್ಸ್ ವಿರುದ್ಧ ದೋರನಹಳ್ಳಿವರಗೆ ಕಾಲ್ನಡಿಗೆ ಮೂಲಕ ಪ್ರತಿಭಟನೆ

ಸಮರ್ಪಕವಾಗಿ ಊಟ ಹಾಕುವದಿಲ್ಲ, ಆರೋಗ್ಯ ಸಹಾಯಕರು ತಪಾಸಣೆ ಮಾಡಲ್ಲ,
yadgiri, ಶಹಾಪುರಃ ತಾಲೂಕಿನ ಬೇವಿನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಅಸಮರ್ಪಕ ಊಟ ಮತ್ತು ವಸತಿ ಶಾಲೆಯ ಅವ್ಯವಸ್ಥೆಗೆ ರೋಸಿ ಹೋದ ವಿದ್ಯಾರ್ಥಿಗಳು ಸೋಮವಾರ ಸಮೀಪದ ದೋರನಹಳ್ಳಿ ಗ್ರಾಮದವರೆಗೆ ಕಾಲ್ನಡಿಗೆ ಮೂಲಕ ಪ್ರತಿಭಟನೆ ಮೆರವಣಿಗೆ ನಡೆಸಿ ಹೆದ್ದಾರಿ ಮೇಲೆ ಜಿಲ್ಲಾಧಿಕಾರಿ ಬರುವವರೆಗೂ ಎದ್ದೇಳಲ್ಲ ಎಂದು ಪಟ್ಟು ಹಿಡಿದಿರುವ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡುತ್ತಿಲ್ಲ, ಇಂಗ್ಲೀಷ್ ಪಾಠ ಮಾಡುವವರು ಇಲ್ಲ ಮುಖ್ಯವಾಗಿ ಪೌಷ್ಠಿಕ ಆಹಾರ ಸೇವನೆ ಮಾಡದೆ ಆರೋಗ್ಯ ಹದಗೆಡುತ್ತಿದ್ದು, ಇದಕ್ಕೆಲ್ಲ ವಾರ್ಡನ್ ಹಾಗೂ ಪ್ರಾಂಶುಪಾಲರ ಬೇಜವಬ್ದಾರಿಯೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ವಾರ್ಡನ್ ಹಾಗೂ ಪ್ರಾಂಶುಪಾಲರನ್ನು ವರ್ಗಾವಣೆಗೆ ಮಾಡಬೇಕೆಂದು ಆಗ್ರಹಿಸಿದರು. ಅಲ್ಲದೆ ನಿತ್ಯ ಮೆನು ಪ್ರಕಾರ ಊಟದ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

ಅಸರ್ಮಪಕ ಊಟ, ವಿದ್ಯುತ್ ಕಡಿತ, ಕುಡಿಯುವ ನೀರಿನ ಅವ್ಯವಸ್ಥೆಯಿಂದ ಇಂಗ್ಲೀಷ್ ಬೋಧನೆ ಇಲ್ಲದೆ ಕಂಗಲಾಗಿದ್ದೇವೆ. ಆರೋಗ್ಯ ಸಹಾಯಕ ಒಂದು ದಿನವು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿ ಔಷಧಿ ನೀಡಿಲ್ಲ. ವಿದ್ಯಾರ್ಥಿಯೋರ್ವರ ಕೈಯಲ್ಲಿ ಮಾತ್ರೆಗಳನ್ನು ಕಳುಹಿಸುತ್ತಾರೆ ಎಂದು ವಿದ್ಯಾರ್ಥಿ ಮಂಜುನಾಥ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ವಾರಗಳಿಂದ ವಾರ್ಡ್‍ನ್ ನಾಪತ್ತೆಯಾಗಿದ್ದು, ಶಾಲೆಯತ್ತ ಸುಳಿದಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ದೂರಿದರು. ಕರೆ ಮಾಡಿ ಕೇಳಿದರೆ, ಸೋಮವಾರ ಬರುತ್ತೇನೆ ಎಂದು ಹೀಗೆ ದಿನಗಳನ್ನು ಮುಂದೂಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಇಂಗ್ಲೀಷ್ ಪಾಠ ಮಾಡುವವರಿಲ್ಲ. ಇಲ್ಲಿನ ವಾರ್ಡ್‍ನ್ ಅವರೇ ಇಂಗ್ಲೀಷ್ ಪಾಠ ಮಾಡುತ್ತಾರೆ, ಅವರೇ ಶಾಲೆಗೆ ಬರುವದಿಲ್ಲ. ನಿತ್ಯ ಒಂದೇ ತರಹದ ಊಟ ಹಾಕಲಾಗುತ್ತಿದೆ. ಪೌಷ್ಠಿಕವಿರುವ ಆಹಾರ ಮಾಡಿ ಎಂದರೆ ನಾಳೆ ಮಾಡುವ ಎಂದು ಮತ್ತೆ ಅದೇ ಸತ್ವವಿಲ್ಲದ ಆಹಾರ ಮಾಡುತ್ತಾರೆ. ಪ್ರಾಣಿಗಳು ಸಹ ಅದನ್ನು ಸೇವಿಸುವದಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಹಿಂದೆ ಸರಿಯಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಕೊನೆಯಲ್ಲಿ ಆಗಮಿಸಿದ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಾನು ಬಂದಿದ್ದು, ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳುತ್ತೇನೆ. ನಿಮ್ಮ ಬೇಡಿಕೆಗಳ ಈಡೇರಿಕೆಗೆ ಸದ್ಯದಿಂದಲೇ ಕ್ರಮಕೈಗೊಳ್ಳುತ್ತೇನೆ ಎಲ್ಲರೂ ಪ್ರತಿಭಟನೆ ಬಿಟ್ಟು ವಸತಿ ಕೋಣೆಗಳಿಗೆ ತೆರಳಿ ಊಟ ಮಾಡಿ ಅಭ್ಯಾಸದ ಕಡೆ ಗಮನ ಹರಿಸಿ ಎಂದು ಮನವೊಲಿಸುವಲ್ಲಿ ಯಶಸ್ವಿಯಾದರು.
ಅವರ ಭರವಸೆಗೆ ಒಪ್ಪಿದ ವಿದ್ಯಾರ್ಥಿಗಳು ತಮ್ಮ ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿದರು.

ಮೊರಾರ್ಜಿ ವಸತಿ ಶಾಲೆಯಲ್ಲಿ ಪೌಷ್ಠಿಕ ಆಹಾರ ನೀಡುವದಿಲ್ಲ. ಮೆನು ಚಾಟ್ ಪ್ರಕಾರ ಊಟ ನೀಡುವದಿಲ್ಲ. ಇಂಗ್ಲೀಷ್ ಬೋಧನಾ ವ್ಯವಸ್ಥೆ ಇಲ್ಲ. ವಾರ್ಡ್‍ನ್ ಎರಡು ವಾರಗಳಿಂದ ಶಾಲೆಗೆ ಬಂದಿಲ್ಲ. ಎರಡು ತಿಂಗಳಿಂದ ಸಮರ್ಪಕ ಊಟದ ವ್ಯವಸ್ಥೆ ಇಲ್ಲ. ಆರೋಗ್ಯ ಕುರಿತು ತಪಾಸಣೆ ಮಾಡುವವರಿಲ್ಲ. ವಿದ್ಯುತ್, ನೀರು ಎಲ್ಲವೂ ಇಲ್ಲಗಳ ಮಧ್ಯೆ ನಮ್ಮ ಅಭ್ಯಾಸ ನಡೆಸುವದು ಕಷ್ಟಕರವಿದೆ. ನಮ್ಮ ಗೋಳು ಕೇಳುವವರಾರು.?

-ಶ್ವೇತಾ. ವಿದ್ಯಾರ್ಥಿನಿ.

ಬೇವಿನಹಳ್ಳಿ ಮೊರಾರ್ಜಿ ಶಾಲೆಯ ಪರಿಶಿಷ್ಠ ಜಾತಿ ವಿಭಾಗದ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳ ಕುರಿತು ಆಕ್ರೋಶಗೊಂಡು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವಿಷಯ ಕುರಿತು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ್ದು, ಎರಡು ದಿನದಲ್ಲಿ ಬಗೆಹರಿಸುವದಾಗಿ ಭರವಸೆ ನೀಡಿದ್ದೇನೆ, ಅದರಂತೆ ಸೂಕ್ತ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ವಿದ್ಯಾರ್ಥಿಗಳು ವಾರ್ಡನ್ ವರ್ಗಾವಣೆಗೆ ಪಟ್ಟು ಹಿಡಿದಿದ್ದು, ಪರಿಶೀಲಿಸಿ ಕೂಡಲೇ ಈ ಕುರಿತು ಕ್ರಮಕೈಗೊಳ್ಳಲಾಗುವುದು. ಮೆನು ಪ್ರಕಾರ ಊಟ ನೀಡಲು ಸೂಚಿಸಿದ್ದೇನೆ.

-ಪ್ರಭು ದೊರೆ. ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ.

Related Articles

Leave a Reply

Your email address will not be published. Required fields are marked *

Back to top button