ಶಹಾಪುರಃ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆಗೆ ಕೋಲಿ ಸಮಾಜ ನಿರ್ಣಯ
ಕೋಲಿ ಸಮಾಜ ಪೂರ್ವಭಾವಿ ಸಭೆಃ ದೌರ್ಜನ್ಯ ಖಂಡಿಸಿ ನ.24 ರಂದು ಬೃಹತ್ ಪ್ರತಿಭಟನೆ
ಯಾದಗಿರಿಃ ಜಿಲ್ಲೆಯಲ್ಲಿ ಕೋಲಿ ಸಮಾಜದವರ ಮೇಲೆ ನಿತ್ಯ ದೌರ್ಜನ್ಯ ನಡೆಯುತ್ತಿದ್ದು, ಸಮಾಜದ ಬಂಧುಗಳಿಗೆ ಸೂಕ್ತ ಭದ್ರತೆ ಒದಗಿಸುವ ಅಗತ್ಯವಿದೆ, ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಮನ ಸೆಳೆಯಬೇಕಿದೆ ಎಂದು ಸಮಾಜದ ಮುಖಂಡ ಸಣ್ಣ ನಿಂಗಪ್ಪ ನಾಯ್ಕೋಡಿ ತಿಳಿಸಿದರು.
ಜಿಲ್ಲೆಯ ಶಹಾಪುರ ನಗರದ ಅಂಬಿಗರ ಚೌಡಯ್ಯ ದೇವಸ್ಥಾನದ ಆವರಣದಲ್ಲಿ ತಾಲೂಕು ಕೋಲಿ ಸಮಾಜದಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಲ್ಲದೆ ತಾಲೂಕಿನ ಸಗರ ಹೋಬಳಿ ವ್ಯಾಪ್ತಿ ರೋಜಾ ಗ್ರಾಮದಲ್ಲಿ ಈಚೆಗೆ ನಡೆದ ಯಮನೂರಪ್ಪ ದೇವಸ್ಥಾನದ ಅರ್ಚಕ, ಕೋಲಿ ಸಮಾಜದ ಶರಣ ಹಣಮಂತ್ರಾಯ ಪೂಜಾರಿ ಅವರ ಬರ್ಬರ ಹತ್ಯೆ ಖಂಡನೀಯವಾದದು. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆ ಕಾರಣಕ್ಕೆ ಸಮಾಜ ಬಂಧುಗಳು ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯವಿದೆ. ಇಲ್ಲವಾದಲ್ಲಿ ಗ್ರಾಮೀಣ ಭಾಗದಲ್ಲಿ ಸಮುದಾಯದ ಜನ ನಿತ್ಯ ಒಂದಿಲ್ಲೊಂದು ದೌರ್ಜನ್ಯಕ್ಕೆ ಬಲಿಯಾಗಬೇಕಾಗುತ್ತದೆ. ಸಾಕಷ್ಟು ಉದಾಹರಣೆಗಳು ನಮ್ಮ ಜಿಲ್ಲೆಯಲ್ಲಿ ನಡೆದಿವೆ. ಇನ್ನಾದರೂ ಎಚ್ಚೆತ್ತುಕೊಂಡು ಸಮಾಜದ ಬಾಂಧವರು ಒಂದಾಗಿ ಹೋರಾಟ ಮಾಡುವ ಮೂಲಕ ನ್ಯಾಯ ಪಡೆಯಬೇಕಿದೆ. ಅನ್ಯಾಯ, ದೌರ್ಜನ್ಯ, ಅತ್ಯಾಚರಾರದಂತ ಪ್ರಕರಣಗಳು ಕುರಿತು ಸಮುದಾಯದ ಜನರಿಗೆ ನ್ಯಾಯ ಒದಗಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರ ಒಮ್ಮತದಿಂದ ನ.24 ಶುಕ್ರವಾರದಂದು ಬೃಹತ್ ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಗರದ ಚರಬಸವೇಶ್ವರ ಕಮಾನದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸುವ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಪ್ರತಿಭಟನೆಯಲ್ಲಿ 5 ರಿಂದ 10 ಸಾವಿರ ಜನ ಸಂಖ್ಯೆ ಸೇರುವ ಸಾಧ್ಯತೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ಅಯ್ಯಣ್ಣ ಕನ್ಯಾಕೋಳೂರ, ರಾಮಣ್ಣ ನಾಯ್ಕೋಡಿ, ಭೀಮರಾವ್ ಮಮದಾಪುರ, ರವೀಂದ್ರನಾಥ ನರಸನಾಯಕ, ದೊಡ್ಡ ಮಾನಯ್ಯ ಹಾದಿಮನಿ, ಮಲ್ಲರಡ್ಡಿ ವಿಭೂತಿಹಳ್ಳಿ ಸೇರಿದಂತೆ ಇತರರಿದ್ದರು.