ಯಾದಗಿರಿಃ ಅಂಗಡಿ, ಪಾನ್ ಡಬ್ಬಾಗಳ ಮೇಲೆ ದಾಳಿ 14 ಪ್ರಕರಣ ದಾಖಲು
ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ ದಂಡ ವಸೂಲಿ
ಯಾದಗಿರಿ: ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿರುವ ಕಿರಾಣಿ ಅಂಗಡಿ ಮತ್ತು ಪಾನ್ ಶಾಪ್‍ಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿ ದಾಳಿ ನಡೆಸಿ, 14 ಪ್ರಕರಣಗಳನ್ನು ದಾಖಲಿಸಿ, ಅಂದಾಜು 1450 ರೂ. ದಂಡ ವಸೂಲಿ ಮಾಡಿದ ಘಟನೆ ಜರುಗಿದೆ.
ಈ ಸಂದರ್ಭದಲ್ಲಿ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ್ ಪತ್ರಕರ್ತರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ತಂಬಾಕು ಮಾರಾಟ ಕಾನೂನು ಬಾಹಿರವಾಗಿ ನಡೆಯುತ್ತಿದೆ. ವಿಶೇಷವಾಗಿ ಕೆಲವು ಕಿರಾಣಿ, ಜನರಲ್ ಸ್ಟೋರ್ ಮತ್ತು ಪಾನ್ ಡಬ್ಬಾಗಳಲ್ಲಿ ತಂಬಾಕು ಉತ್ಪನ್ನಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಕ್ಕಳಿಗೆ ಕಾಣುವ ಹಾಗೇ ಮಾರಾಟ ಮಾಡುತ್ತಿದ್ದು, ಇದು ಕಾನೂನು ಬಾಹಿರವಾಗಿದೆ.
ಸಾಕಷ್ಟು ಬಾರಿ ವ್ಯಾಪಾರಿಗಳಿಗೆ ತಂಬಾಕು ಮಾರಾಟ ಅಪರಾಧ ಕುರಿತು, ಅಲ್ಲದೆ ಕೆಲವು ನಿರ್ದೇಶನಗಳನ್ನು ತಿಳಿಸಲಾಗಿದೆ ಆದಾಗ್ಯು ವ್ಯಾಪಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ತಿಳಿಸಿದರು.
ಕೊಟ್ಟಾ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ. ಹಲವರಿಗೆ ದಂಡ ವಸೂಲಿಯೂ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ತಂಬಾಕು ಮರಾಟ ಬಹಿರಂಗವಾಗಿ ನಡೆಯದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ ಇದೇ ವೇಳೆಗೆ ಮೈಲಾಪೂರ ಗ್ರಾಮಗಳಿಗೆ ಸಿಬ್ಬಂದಿ ಭೇಟಿ ನೀಡಿ, ಅಂಗಡಿ ಮತ್ತು ಪಾನ್‍ಶಾಪ್‍ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲಿಸಿತು.
ದಾಳಿಯ ಸಂದರ್ಭದಲ್ಲಿ ತಂಬಾಕು ಉತ್ಪನ್ನ ಮರಾಟ ಸಲಹೆಗಾರರಾದ ಮಹಾಲಕ್ಷ್ಮಿ ಸಜ್ಜನ್, ಗ್ರಾಮೀಣ ಪೋಲಿಸ್ ಠಾಣೆಯ ಎಎಸ್‍ಐ ಶಿವಲಿಂಗಪ್ಪ, ಶಿಕ್ಷಣ ಇಲಾಖೆಯ ಸಿಆರ್‍ಪಿ ಹಫೀಜ್ ಪಟೇಲ್, ಸಾಮಾಜಿಕ ಕಾರ್ಯಕರ್ತ ಮಸ್ಟರ್ ಫೀಲಿಪ್, ಕಾರ್ಮಿಕ ನಿರೀಕ್ಷಕ ಶಿವಶಂಕರ್ ಬಿ. ತಳವಾರ, ಯಾದಗಿರಿ ನಗರದ ಡಾನ್ ಬಾಸ್ಕೋ ಮಕ್ಕಳ ಸಹಾಯ ವಾಣಿ-1098 ಸಿಬ್ಬಂದಿ, ಬಾಲ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು, ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳು ಹಾಜರಿದ್ದರು.