ವಿನಯ ವಿಶೇಷ

ಆ ಊರಲ್ಲಿ ಬಾಲಕಿಯರ ಮದುವೆ ನಡಿಯಿತಂತೆ ಗೊತ್ತಾ!?

-ವಿನಯ ಮುದನೂರ್

ವರುಣದೇವನ ಕೃಪೆಗಾಗಿ ಬಾಲಕಿಯರ ಮದುವೆ : ವಿಭಿನ್ನ ಆಚರಣೆ!

ವರುಣದೇವನ ಒಲುಮೆಗಾಗಿ ಪ್ರಾರ್ಥಿಸುವ ರೈತಕುಲ ಅನೇಕ ಆಚರಣೆಗಳನ್ನು ಆಚರಿಸುತ್ತದೆ. ಕೆಲವು ಕಡೆ ಭೂತಾಯಿಯ ಪೂಜೆ, ಗಂಗಾಪೂಜೆ ವರುಣದೇವನ ಪ್ರಾರ್ಥನೆ, ಗ್ರಾಮ ದೇವತೆಗಳ ಪೂಜೆ, ಉತ್ಸವಗಳನ್ನು ಮಾಡಲಾಗುತ್ತದೆ. ಇನ್ನೂ ಕೆಲವು ಕಡೆ ಕತ್ತಗಳ ಮದುವೆ, ಕಪ್ಪೆಗಳ ಮದುವೆಯೂ ನಡೆಯುತ್ತದೆ. ಬುಡಕಟ್ಟು ಸಂಸ್ಕೃತಿಯ ಗುಲಕಮ್ಮ ಆಚರಣೆ ವಿಭಿನ್ನವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯಲ್ಲೊಂದು ವಿಶಿಷ್ಟ ಆಚರಣೆ ಮೂಲಕ ಮಳೆರಾಯನಿಗೆ ಆಹ್ವಾನಿಸಲಾಗಿದೆ.

ಹಿತ್ತಲಹಳ್ಳಿ ಗ್ರಾಮ ಸತತ ಬರಗಾಲದಿಂದಾಗಿ ಮಳೆ-ಬೆಳೆ ಇಲ್ಲದೆ ತತ್ತರಿಸಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು ಈ ವರ್ಷವೂ ಬರದ ಛಾಯೆ ಆವರಿಸಿದೆ. ಮೋಡಗಳು ತೇಲಿ ಬರುತ್ತವಾದರೂ ನೀರಾಗಿ ಧರೆಗಿಳಿಯದೆ ಸರದಿಯಲ್ಲಿ ಮುಂದೆ ಸಾಗುತ್ತವೆ. ಹೀಗಾಗಿ, ಮುಗಿಲ ಕಡೆ ಮುಖ ಮಾಡಿ ಕುಳಿತ ರೈತನಿಗೆ ನಿತ್ಯ ನಿರಾಸೆಯೇ ಗತಿಯಾಗಿದೆ. ಪರಿಣಾಮ ವರುಣ ದೇವನ ಕೃಪೆಗಾಗಿ ಗ್ರಾಮದ ಜನ ಪುರಾತನ ಸಂಪ್ರದಾಯದ ಮೊರೆ ಹೋಗಿದ್ದಾರೆ.

ಆ ವಿಶಿಷ್ಟ ಆಚರಣೆಯೇ ಬಾಲಕಿಯರ ಮದುವೆ. ಹೌದು, ಇಡೀ ಗ್ರಾಮ ಮದುವೆ ಮಂಟಪದಂತೆ ಸಿಂಗಾರಗೊಂಡಿತ್ತು. ಗ್ರಾಮದ ಜನರೆಲ್ಲಾ ಮದುವೆ ಮನೆಯ ನೆಂಟರಿಷ್ಟರಂತೆ ಲವಲವಿಕೆಯಿಂದ ಓಡಾಡುತ್ತಿದ್ದರು. ಮದುವೆ ಕಾರ್ಯದ ಸಕಲ ಸಿದ್ಧತೆಗಳೂ ಅಲ್ಲಿ ನಡೆದಿದ್ದವು. ಪುಟ ಬಾಲಕಿಯರಿಬ್ಬರಿಗೆ ವಧು-ವರರಂತ ಸಿಂಗರಿಸಲಾಗಿತ್ತು. ಪೇಟ ತೊಟ್ಟು ಅಪ್ಪಟ ಸಾಂಪ್ರದಾಯಿಕ ಶೈಲಿಯಲ್ಲಿ ಬಿಳಿ ಪಂಚೆ, ಬಿಳಿ ಶ್ಲಾಗನಲ್ಲಿ ವರ, ರೇಷ್ಮೆ ಸೀರೆ, ಚಿನ್ನದೊಡವೆಗಳೊಂದಿಗೆ ವಧು ಆಗಮಿಸಿದರೆ ಮದುವೆ ಮನೆ ರಂಗು ರಂಗು.

ಗ್ರಾಮೀಣ ಜನರೆಲ್ಲ ಖುಷಿಖುಷಿಯಾಗಿ ಶಾಸ್ತ್ರೋಕ್ತವಾಗಿ ಬಾಲಕಿಯರ ಮದುವೆ ನೆರವೇರಿಸಿದರು. ಆ ಮೂಲಕ ವರುಣದೇವನಿಗೆ ಭುವಿಗಿಳಿದು ರೈತರ ಬದುಕು ಹಸನಾಗಿಸುವಂತ ಪ್ರಾರ್ಥನೆ ಸಲ್ಲಿಸಿದರು. ಹೀಗೆ ಆಚರಣೆ ಮಾಡುವ ಮೂಲಕ ಮಳೆರಾಯನಿಗೆ ಪ್ರಾರ್ಥನೆ ಸಲ್ಲಿಸಿದರೆ ಮಳೆರಾಯ ಕೃಪೆ ತೋರುತ್ತಾನೆ ಎಂಬುದು ಈ ಭಾಗದ ನೇಗಿಲಯೋಗಿಯ ನಂಬಿಕೆಯಾಗಿದೆ

ರೈತರ ಆಚರಣೆ ಏನೇ ಇರಲಿ ವರುಣ ದೇವ ಧರೆಗಿಳಿದು ಬರಲಿ. ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತಾಪಿ ವರ್ಗಕ್ಕೆ ಈ ವರ್ಷ ಖುಷಿ ತರಲಿ. ಅನ್ನದಾತ ಸುಖೀಯಾಗಿರಲಿ ಎಂಬುದು ವಿನಯವಾಣಿ ಆಶಯ

Related Articles

Leave a Reply

Your email address will not be published. Required fields are marked *

Back to top button