ಶಹಾಪುರಃ ಸಿಡಿಲಿಗೆ ಮತ್ತೋರ್ವ ಬಲಿ, ರೈತರಲ್ಲಿ ಮೂಡಿದ ಆತಂಕ
ಯಾದಗಿರಿಃ ಸಿಡಿಲಿಗೆ ಮತ್ತೋರ್ವ ಬಲಿ
ಯಾದಗಿರಿ: ಕಳೆದವಾರದಿಂದ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಸಿಡಿಲಿನ ಹೊಡೆತಕ್ಕೆ ಅನೇಕರು ಮೃತಪಟ್ಟಿದ್ದಾರೆ.
ಸೆಪ್ಟಂಬರ್28 ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಓರ್ವ ವ್ಯಕ್ತಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದರು. ಅಲ್ಲದೆ ಇನ್ನುಳಿದ ಮೂವರು ಮಹಿಳೆಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಸೆ.29 ರಂದು ಕಲಬುರ್ಗಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಮತ್ತೆ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದರು. ಅಂತೇಯೇ ಮಳೆಯ ಆರ್ಭಟದಿಂದ ಅನೇಕ ಕಡೆ ಅವಾಂತರಗಳು ಸಂಭವಿಸಿವೆ. ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ಇನ್ನೆರಡು ಕಡೆ ಸಿಡಿಲಿಗೆ ಜನರು ಬಲಿಯಾದ ಘಟನೆ ವರದಿಯಾಗಿತ್ತು.
ಇಂದು ಮದ್ಯಾಹ್ನ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ಯುವಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ. ಉಸ್ಮಾನ್ ಪಾಶ ತಂದೆ ಜಮಾಸಾಬ (20) ಎಂಬ ಯುವಕನೇ ಮೃತ ದುರ್ದೈವಿ. ಈತ ಜಮೀನೊಂದರಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ವಡಿಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಕುಟುಂಬದ ರೋದನ ಮುಗಿಲು ಮುಟ್ಟಿದೆ.
ಸಿಡಿಲು ತಂದ ಆತಂಕ : ರೈತ ಮುದಕಪ್ಪನ ಮಾತು
ಕಳೆದ ವಾರದಿಂದ ಸಿಡಿಲಿಗೆ ಬಲಿಯಾದವರ ಹಲವು ಘಟನಾವಳಿ ಕಂಡ ಗ್ರಾಮೀಣ ಭಾಗದ ರೈತಾಪಿ ಜನರಲ್ಲಿ ಆತಂಕ ಮನೆ ಮಾಡಿದೆ. ಹೊಲಗಳಿಗೆ ತೆರಳಿದ ರೈತಾಪಿ ಜನರು ಕೆಲಸ ಮುಗಿಸಿ ಸಂಜೆ ಮನೆ ತಲುಪುವ ತನಕ ಮನೆಯಲ್ಲಿರುವವರಲ್ಲಿ ಸಮಾಧಾನ ಇರುವುದಿಲ್ಲ. ಕಾರಣ ಹೊಲಕ್ಕೆ ಹೋಗುವವರಿಗೆ ಸಂಜೆ ಬೇಗನೆ ಮನೆ ಸೇರಿಕೊಳ್ಳಿ, ಕೆಲಸ ಉಳಿದಿದ್ದಲ್ಲಿ ಬೆಳಗ್ಗೆ ಮತ್ತೆ ಬೇಗನೆ ಹೋಗಿ ಮಾಡಿದರಾಯಿತು ಎಂದುಕೊಳ್ಳುತ್ತೇವೆ. ಆದರೆ ಅಲ್ಲಿನ ಕೆಲಸ ಕಂಡು ಬಿಟ್ಟು ಬರುವ ಮನಸ್ಸು ಆಗಲ್ಲ. ಮೋಡ ಕವಿದು ಗುಡುಗು, ಸಿಡಿಲು, ಮಿಂಚಿನ ಆರ್ಭಟ ಬಂದರೆ ಸಾಕು ಮನದಲ್ಲಿ ತಲ್ಲಣ ಉಂಟಾಗುತ್ತದೆ ಎಂದು ಹಿರಿಯ ರೈತ ಮುದಕಪ್ಪ ‘ವಿನಯವಾಣಿ’ ಎದುರು ಅವಲತ್ತುಕೊಂಡಿದ್ದಾರೆ.
ಗುಡುಗಿನ ಶಬ್ಧ ಕೇಳುತ್ತಿದ್ದಂತೆ ಶಿವ ಶಿವಾ ಶಿವ ಶಿವಾ ಎಂಬ ಪದ ರೈತಾಪಿ ಜನರ ಬಾಯಲ್ಲಿ ಸಾಮಾನ್ಯವಾಗಿ ಕೇಳಿ ಬರುತ್ತದೆ. ಮಳೆ ಜಾಸ್ತಿಯಾಗಿ ಬೆಳೆಗಳ ಮಧ್ಯೆ ಸಾಕಷ್ಟು ‘ಸದಿ’ ಬೆಳೆದು ನಿಂತಿದೆ ಅದನ್ನೆಲ್ಲ ತೆಗೆಯವುದು ಅನಿವಾರ್ಯವಿದೆ.
ಇಲ್ಲವಾದಲ್ಲಿ ‘ಸದಿ’ ಪ್ರಮುಖ ಬೆಳೆಯ ಬೆಳವಣಿಗೆಯನ್ನು ಕುಗ್ಗಿಸುತ್ತದೆ. ಆ ಕಾರಣಕ್ಕಾಗಿ ನಿತ್ಯ ಹೊಲದಲ್ಲಿ ಸದಿ ತೆಗೆಯಲು ಹೋಗಬೇಕು. ಗುಡುಗು ಸಿಡಿಲು ಎಂದು ಮನೆಯಲ್ಲಿ ಕುಳಿತರೆ ಕೆಲಸ ಆಗುವುದಿಲ್ಲ, ಹೊಟ್ಟೆ ತುಂಬುವುದಿಲ್ಲವಲ್ಲ ಅನ್ನುತ್ತಾರೆ ರೈತ ಮುದುಕಪ್ಪ.