ಸಿಎಂ ಗ್ರಾಮ ವಾಸ್ತವ್ಯ ಸದುಪಯೋಗ ಪಡಿಸಿಕೊಳ್ಳಿ-ಖರ್ಗೆ
ಜೂ.22 ಅಫಜಲಪುರದ ಹೆರೂರ(ಬಿ) ದಲ್ಲಿ ಸಿಎಂ ಗ್ರಾಮ ವಾಸ್ತವ್ಯ
ಕಲಬುರಗಿಃ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಹೆಚ್ ಡಿ ಕುಮಾರಸ್ವಾಮಿ ಅವರ ಅದ್ಭುತ ಪರಿಕಲ್ಪನೆಯಾದ ‘ಗ್ರಾಮ ವಾಸ್ತವ್ಯ’ ಕಾರ್ಯಕ್ರಮ ಇದೇ ಜೂನ್ 22 ರಂದು ಕಲಬುರಗಿ ಜಿಲ್ಲೆಯ ಅಫಜಲ್ ಪುರ ವಿಧಾನ ಸಭಾ ಕ್ಷೇತ್ರದ ಹೆರೂರ್ ( ಬಿ) ಗ್ರಾಮದಲ್ಲಿ ನಡೆಯಲಿದ್ದು, ಜಿಲ್ಲೆಯ ಸಾರ್ವಜನಿಕರು ತಮ್ಮ ಕುಂದು ಕೊರೆತೆಗಳ ಅಹವಾಲು ಸಲ್ಲಿಸಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಸಮಾಜಕಲ್ಯಾಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಕರೆ ನೀಡಿರುವ ಸಚಿವರು, ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದಿಂದ ಜಿಲ್ಲೆಯ ಗ್ರಾಮೀಣ ಭಾಗದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ.
ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕೊಡುವ ಹಿತದೃಷ್ಠಿಯಿಂದ ಮುಖ್ಯಮಂತ್ರಿಗಳೇ ಸ್ವತಃ ಜನರ ಬಳಿಗೆ ಬರುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸುತ್ತಿದ್ದು, ಸರಕಾರದ ವಿವಿಧ ಇಲಾಖೆಗಳ ಅಡಿಯಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲಿದ್ದಾರೆ.
ಹೀಗಾಗಿ, ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಅಭಿವೃದ್ದಿಗೆ ಸಹಕರಿಸಬೇಕು ಎಂದು ಸಚಿವರು ಹೇಳಿದ್ದಾರೆ.
ಅಂದಿನ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ವಿವಿಧ ಇಲಾಖೆಗಳ ಅಡಿಯಲ್ಲಿ ಸೌಲಭ್ಯ ಪಡೆದ ಸುಮಾರು 2000 ಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ.
ಪ್ರಮುಖವಾಗಿ ಕೆಲ ಫಲಾನುಭವಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ವಿತರಿಸಲಿದ್ದಾರೆ. ಇನ್ನುಳಿದಂತೆ ಭಾಗ್ಯಲಕ್ಷೀ ಬಾಂಡ್, ಗ್ಯಾಸ್ ಸ್ಟೋವ್, ನೂತನ ಪಡಿತರಚೀಟಿ, ಹೊಲಿಗೆ ಯಂತ್ರ, ಮೆಟ್ರಿಕ್ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಪಡೆದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪುರಸ್ಕಾರ, ವಿದ್ಯಾರ್ಥಿ ವೇತನ, ವೃದ್ಯಾಪ್ಯ ವೇತನ, ವಿವಿಧ ಪ್ರಕರಣಗಳ ಅಡಿಯಲ್ಲಿ ಬಿಡುಗಡೆಯಾದ ಸಿಎಂ ಪರಿಹಾರ, ಆಶ್ರಯ ಯೋಜನೆಗಳಡಿಯಲ್ಲಿ ಮಂಜೂರಾದ ಮನೆಗಳ ಹಕ್ಕುಪತ್ರ ವಿತರಿಸಲಿದ್ದಾರೆ.
ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯ ಪ್ರತಿ ತಾಲೂಕಿನಿಂದ ಹೆರೂರು ( ಬಿ) ಗ್ರಾಮಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಾಹನ ಸೌಲಭ್ಯ ಕಲ್ಪಿಸಿದೆ.
ಪ್ರಮುಖವಾಗಿ ಸಾರ್ವಜನಿಕರು ತಮ್ಮ ಅವಾಹಲುಗಳನ್ನು ನಿರ್ಧರಿಸಿದ ಅರ್ಜಿಗಳಲ್ಲಿ ಭರ್ತಿ ಮಾಡಬೇಕಾಗಿದ್ದು, ಅವರಿಗೆ ನೆರವಾಗಲು ಸ್ವಯಂ ಸೇವಕರ ( volunteers) ಸೇವೆ ಲಭ್ಯವಿರುತ್ತದೆ. ಮನವಿ ಸಲ್ಲಿಸಲು ಬರುವ ಮಹಿಳೆಯರಿಗೆ, ವೃದ್ಧರಿಗೆ ಹಾಗೂ ವಿಶೇಷವಾಗಿ ಅಂಗವಿಕಲರಿಗೆ ಸಿಎಂ ಅವರ ವೇದಿಕೆಗೆ ಕರೆದೊಯ್ಯಲು ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯೂ ಕೂಡಾ ಸ್ವಯಂ ಸೇವಕರು ನೆರವಾಗಲಿದ್ದಾರೆ.
ಅರ್ಜಿ ತುಂಬಿದ ನಂತರ ಸಾರ್ವಜನಿಕರು ಟೋಕನ್ ಪಡೆದುಕೊಂಡ ನಂತರ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿಯಾಗಬಹುದಾಗಿದೆ. ಈ ಹಿಂದೆ ಸಾರ್ವಜನಿಕ ಸಭೆಯಲ್ಲಿ ಅವಹಾಲು ಸಲ್ಲಿಸಿದ ನಂತರವೂ ಸಮಸ್ಯೆ ಬಗೆಹರಿಯದಿದ್ದ ಪ್ರಕರಣಗಳಿದ್ದಲ್ಲಿ ಅಂತವರೂ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರು ಹಾಗೂ ಇನ್ನಿತರ ವ್ಯವಸ್ಥೆ ಮಾಡಲಾಗಿದ್ದು. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ.
ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ನೆರವು ನೀಡಲು ವೈದ್ಯರ ತಂಡವನ್ನು ನಿಯುಕ್ತಿಗೊಳಿಸಲಾಗಿದ್ದು ಅಂಬುಲೆನ್ಸ್ ಸೇರಿದಂತೆ ಇತ್ಯಾದಿ ತುರ್ತು ಸೇವೆಗಳ ನೆರವು ಒದಗಿಸಲಾಗುತ್ತಿದೆ. ಜೊತೆಗೆ ಅಗ್ನಿಶಾಮಕ ಸೇವೆ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗಿದೆ.
ಕಲಬುರಗಿ ಜಿಲ್ಲೆ ತೀವ್ರ ಬರದಿಂದ ತತ್ತರಿಸಿದ್ದು ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಸಿಎಂ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು ಬರದಿಂದ ನಲುಗಿರುವ ರೈತರಿಗೆ , ಕೃಷಿ ಕಾರ್ಮಿಕರಿಗೆ ನೆರವಾಗುವ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾಗುವ ಯೋಜನೆಗಳ ಪಟ್ಟಿಯೊಂದನ್ನೂ ಈಗಾಗಲೇ ಸಿದ್ದಪಡಿಸಿದ್ದು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಇದೇ ಸಂದರ್ಭದಲ್ಲಿ ಸಲ್ಲಿಸಲಾಗುತ್ತಿದೆ.
ಬಹಳ ಪ್ರಮುಖವಾಗಿ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕಗಳ ಅಭಿವೃದ್ದಿ ಕುರಿತು ಈ ಹಿಂದೆ ಸಲ್ಲಿಸಲಾಗಿದ್ದ ಪಸ್ತಾವನೆಗಳ ಕುರಿತು ಈಗಾಗಲೇ ಸನ್ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು ಯೋಜನೆಗಳ ಜಾರಿಗಾಗಿ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು ಆದಷ್ಟು ಬೇಗ ಪ್ರಸ್ತಾವನೆಗಳ ಜಾರಿಗೆ ತರಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ಈ ಕುರಿತು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಗ್ರಾಮ ವಾಸ್ತವ್ಯ ಕಾರ್ಯಕ್ರಮ ಗ್ರಾಮೀಣ ಭಾಗಗಳ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಸಚಿವರು ತಿಳಿಸಿದ್ದು, ಸಾರ್ವಜನಿಕರು ಶಾಂತಿ ಸಹನೆಯಿಂದ ಇದ್ದು ತಮ್ಮ ಅಗತ್ಯ ಸಹಕಾರ ನೀಡುವ ಮೂಲಕ ಇನ್ನೂ ಹೆಚ್ಚಿನ ಅಭಿವೃದ್ದಿ ಕೆಲಸ ಮಾಡಲು ನೆರವಾಗುವಂತೆ ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡಿದ್ದಾರೆ.