ಕಥೆ

ನಾನು‌ ನಿಮ್ಮೊಂದಿಗೆ ಇದ್ದೇನೆ ನೀವೇಕೇ ಹುಡುಕುತಲಿರುವಿರಿ-ದೇವರು

ದಿನಕ್ಕೊಂದು ಕಥೆ

ಅತ್ಯಂತ ಅರ್ಥಪೂರ್ಣವಾದ ಈ ಸಾಲುಗಳನ್ನು ಪೂಜ್ಯ ಸ್ವಾಮಿ ಪುರುಷೋತ್ತಮಾನಂದಜೀಯವರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಆ ಗೀತೆಯನ್ನು ಈ ಕೆಳಗೆ ನೋಡಬಹುದು.
ಎಲ್ಲಿ ಅರಸುವೆ ನನ್ನ, ಓ ನನ್ನ ಕಿಂಕರನೆ ನಿನ್ನ ಬಳಿಯೇ ನಾನು ಇರುತಲಿರುವೆ. ನಾನು ನಿನ್ನೊಂದಿಗೇ ಇದ್ದರೂ ನನಗಾಗಿ ಎಲ್ಲೊ ದೂರದಿ ಹುಡುಕಿ ಬಳಲುತಿರುವೆ!

ಗುಡಿ ಮಸೀದಿಯೊಳಿಲ್ಲ, ಕಾಶಿ ಕೈಲಾಸದಲೊ, ದ್ವಾರಕೆ ಅಯೋಧ್ಯೆಯೊಳೊ, ದೊರೆವನಲ್ಲ. ಸನ್ಯಾಸದೊಳಗಿಲ್ಲ, ವೈರಾಗ್ಯದೊಳಗಿಲ್ಲ, ಯೋಗಾದಿ ಸಿದ್ಧಿಗೂ ದೂರ ನಾನು. ಶ್ರದ್ಧೆ ಎಲ್ಲಿರುವುದೋ ಅಲ್ಲಿ ದೊರೆಯುವೆ ನಾನು ನನಗಾಗಿ ಹುಡುಕಿದರೆ ಸಿಗುವೆ ನಾನು.

ಈ ಗೀತೆಯನ್ನು ಪೂಜ್ಯ ಸ್ವಾಮಿ ಪುರುಷೋತ್ತಮಾನಂದ– ಜೀಯವರ ಮಧುರ ಕಂಠದಲ್ಲಿ ಕೇಳುವುದು ಒಂದು ಅನಿರ್ವಚನೀಯ ಅನುಭವ. ಇದಕ್ಕೆ ಸಂಬಂಧಿಸಿದ ಪುಟ್ಟ ಕತೆಯನ್ನು ಸ್ವಾಮೀಜಿಯವರೇ ಹೇಳುತ್ತಿದ್ದರು. ಅದು ಹೀಗಿದೆ. ಒಂದು ಬಂದರಿನಲ್ಲಿ ದೊಡ್ಡ ಹಡಗೊಂದು ನಿಂತಿತ್ತಂತೆ. ಅದರ ಸ್ಥಂಭದ ಮೇಲೆ ಒಂದು ಹಕ್ಕಿ ಬಂದು ಕುಳಿತಿತ್ತು.

ಹಡಗಿನಲ್ಲೂ ಅದಕ್ಕೆ ಕಾಳುಕಡ್ಡಿ ಸಿಗುತ್ತಿದ್ದವು. ಆನಂದವಾಗಿ ಕಾಳುಕಡ್ಡಿ ತಿನ್ನುತ್ತ ಹಡಗಿನ ಪಟಗಳ ಮಧ್ಯೆ ಹಕ್ಕಿ ಹಾರಾಡಿಕೊಂಡಿತ್ತು. ಈ ಮಧ್ಯೆ ಹಡಗು ಯಾನಕ್ಕೆ ಹೊರಟಿದ್ದು ಅದರ ಗಮನಕ್ಕೆ ಬರಲಿಲ್ಲ. ಎಷ್ಟೋ ಹೊತ್ತಿನ ನಂತರ ಅದು ಮತ್ತೆ ಪಟಸ್ಥಂಭದ ಮೇಲೆ ಬಂದು ಕುಳಿತಾಗ ಅದಕ್ಕೆ ಎಲ್ಲೆಲ್ಲೂ ನೀರೇ ಕಾಣಿಸುತ್ತಿತ್ತು.

ದಡ ಕಾಣಿಸಲಿಲ್ಲ. ಅದಕ್ಕೆ ದಡದಲ್ಲಿದ್ದರೆ ತನಗೆ ಇನ್ನೂ ಹೆಚ್ಚು ಕಾಳುಕಡ್ಡಿ ಸಿಗಬಹುದು, ಇನ್ನೂ ಆನಂದವಾಗಿರಬಹುದು ಎನಿಸಿತು. ಹರೆಯದಲ್ಲಿರುವ ಹಕ್ಕಿಗೆ ತನ್ನ ರೆಕ್ಕೆಗಳ ಮೇಲೆ ಅತೀವ ವಿಶ್ವಾಸ. ದಡವನ್ನು ಹುಡುಕಿಕೊಂಡು ಉತ್ತರದಿಕ್ಕಿಗೆ ಹಾರಿತು.
ರೆಕ್ಕೆಗಳು ಬಳಲುವಷ್ಟು ಹಾರಿದರೂ ದಡ ಕಾಣಲಿಲ್ಲ.

ಅದು ಹಿಂದಕ್ಕೆ ಹಾರಿ ಬಂದು ಮತ್ತೆ ಹಡಗಿನ ಪಟಸ್ಥಂಭದ ಮೇಲೆಯೇ ಕುಳಿತಿತು. ಸ್ವಲ್ಪ ಹೊತ್ತು ದಣಿವಾರಿಸಿಕೊಂಡ ನಂತರ ದಕ್ಷಿಣ ದಿಕ್ಕಿಗೆ ಹೋದರೆ ದಡ ಸಿಗಬಹುದು ಎಂದುಕೊಂಡು ದಕ್ಷಿಣ ದಿಕ್ಕಿಗೂ ಹೋಯಿತು. ಹಾರಿಹಾರಿ ರೆಕ್ಕೆಗಳು ಬಳಲಿದವು. ಆದರೆ ದಡ ಕಾಣಲಿಲ್ಲ. ಅದು ಮತ್ತೆ ಹಡಗಿನ ಪಟಸ್ಥಂಭದ ಮೇಲೆಯೇ ಬಂದು ಕುಳಿತಿತು. ಆನಂತರ ಅದು ಪೂರ್ವ ದಿಕ್ಕಿಗೆ ಹೋಗಿ ಬಂತು. ಪಶ್ಚಿಮ ದಿಕ್ಕಿಗೂ ಹೋಗಿ ಬಂತು. ಎಲ್ಲಿಯೂ ದಡ ಕಾಣಲಿಲ್ಲ. ಕೊನೆಗೆ ಪಟಸ್ಥಂಭದ ಮೇಲೆ ಕುಳಿತು ಕೆಳಗೆ ನೋಡಿತು. ಕೆಳಗೂ ಕಾಳು ಕಡ್ಡಿಗಳು ಕಂಡವು. ನಾನು ಎಲ್ಲೆಲ್ಲಿಯೋ ಹುಡುಕಿಕೊಂಡು ಹೋಗುವ ವಸ್ತುಗಳು ಇಲ್ಲಿಯೇ ಇವೆಯಲ್ಲ ಎಂದು ಸಮಾಧಾನಪಟ್ಟುಕೊಂಡು ನಂತರದ ದಿನಗಳನ್ನು ಅಲ್ಲಿಯೇ ಆನಂದವಾಗಿ ಕಳೆಯಿತು.

ಈ ಕತೆಯಲ್ಲಿ ದಡವನ್ನು ಅರಸಿಕೊಂಡು ನಾಲ್ಕೂ ದಿಕ್ಕಿಗೆ ಹಾರಿ ಬಳಲಿ ಮತ್ತೆ ಹಡಗಿಗೇ ಮರಳಿ ಬರುವ ಹಕ್ಕಿಯ ಪರಿಸ್ಥಿತಿ ನಮ್ಮೆಲ್ಲರದ್ದು! ನಾವು ಕೂಡ ದೇವರನ್ನು ಅರಸುತ್ತ ಎಲ್ಲ ದಿಕ್ಕು ಗಳಿಗೂ ಹೋಗುತ್ತೇವೆ. ಇಲ್ಲಿ ಸಿಗಲಿಲ್ಲ, ಅಲ್ಲಿ ಸಿಗಬಹುದು ಎಂದು ಅಲ್ಲಿಗೆ ಹೋಗುತ್ತೇವೆ. ಅಲ್ಲಿಯೂ ಸಿಗದಿದ್ದರೆ ಮತ್ತೆಲ್ಲಿಯೋ ಸಿಗಬಹುದೆಂದು ಮತ್ತೆಲ್ಲಿಗೋ ಹೋಗುತ್ತೇವೆ.

ಆದರೆ ದೇವರು ನಾವೆಲ್ಲಿದ್ದೇವೆಯೋ, ಅಲ್ಲಿಯೇ ನಮಗೆ ಸಿಗುತ್ತಾನೆ! ದೇವರು ಬೇರೆಲ್ಲಿಯೋ ಇದ್ದಾನೆ ಎಂದು ಭಾವಿಸುವ ಅಜ್ಞಾನಿಗಳು, ದೇವರು ನಾವೆಲ್ಲಿದ್ದೇವೆಯೋ ಅಲ್ಲಿಯೇ ಇದ್ದಾನೆ ಎಂದು ಅರಿತುಕೊಳ್ಳುವವರು ಜ್ಞಾನಿಗಳು ಎಂದು ಸ್ವಾಮೀಜಿಯವರು ಹೇಳುತ್ತಿದ್ದರು.

ಪೂಜ್ಯ ಸ್ವಾಮೀಜಿಯವರ ಪುಣ್ಯ ಸ್ಮರಣೆಗೆ ಪ್ರಣಾಮಗಳನ್ನು ಸಲ್ಲಿಸೋಣ. ನಮಗೆ ಅವಕಾಶವಿದ್ದರೆ ಯೂಟ್ಯೂಬಿನಲ್ಲಿ ಈ ಭಕ್ತಿ ಗೀತೆಯನ್ನು ಕೇಳಿ ಆನಂದಿಸೋಣ. ನಾವು ದೇವರನ್ನು ಹುಡುಕುತ್ತಿಲ್ಲ. ನಾವು ಹುಡುಕುತ್ತಿರುವುದು ಮನಃಶಾಂತಿಯನ್ನು, ತೃಪ್ತಿಯನ್ನು, ಆನಂದವನ್ನೂ ಎನ್ನುವವರು ನಾವಾದರೆ, ಅದನ್ನು ಎಲ್ಲೆಲ್ಲಿಯೋ ಹುಡುಕಿಕೊಂಡು ಹೋಗುವುದರಲ್ಲಿ ಅರ್ಥವಿದೆಯೇ? ನಾವಿರುವಲ್ಲಿಯೇ ಲಭ್ಯವಿರುವ ಅವುಗಳನ್ನು ಎಲ್ಲೆಲ್ಲಿಯೋ ಅರಸಿಕೊಂಡು ಹೋಗುವುದು ವ್ಯರ್ಥವಲ್ಲವೇ?

🖊️ಸಂಗ್ರಹ🖋️ಡಾ.ಈಶ್ವರಾನಂದ ಸ್ವಾಮೀಜಿ.

📞 – 9341137882

Related Articles

Leave a Reply

Your email address will not be published. Required fields are marked *

Back to top button