ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು
ಆರ್ಥಿಕ ಸಂಕಷ್ಟದಲ್ಲಿ ನಿಸ್ವಾರ್ಥ ಪರಿಸರ ತಾಯಿ, ಸಾಲುಮರದ ತಿಮ್ಮಕ್ಕ
ಬೆಂಗಳೂರು: ಶತಾಯುಷಿ ಸಾಲುಮರದ ತಿಮ್ಮಕ್ಕ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿರುವ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆದರೆ, ಈವರೆಗೆ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಭೇಟಿ ನೀಡಿಲ್ಲ. ಕನಿಷ್ಠ ಕಾಳಜಿಯನ್ನು ತೋರಿಸಿಲ್ಲ. ಆ ಮೂಲಕ ಸರ್ಕಾರ ನಾಡಿನಲ್ಲಿ ಪರಿಸರ ಕಾಳಜಿಯ ಪರಂಪರೆಗೆ ತಳಹದಿ ಆಗಿರುವ ತಿಮ್ಮಕ್ಕರನ್ನು ನಿರ್ಲಕ್ಷಿಸಲಾಗಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಸಾಲುಮರದ ತಿಮ್ಮಕ್ಕನ ದತ್ತುಪುತ್ರ ಬಿ.ಎನ್. ಉಮೇಶ ಆಸ್ಪತ್ರೆಯಲ್ಲಿದ್ದು ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ತಿಮ್ಮಕ್ಕ ಆಸ್ಪತ್ರೆಗೆ ದಾಖಲಾಗಿದ್ದಾಗ ಸಚಿವೆ ಉಮಾಶ್ರೀ ಭೇಟಿ ನೀಡಿ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದ್ದರು. ಆದರೆ, ಈವರೆಗೆ ಅದು ಕಾರ್ಯ ರೂಪಕ್ಕೆ ಬಂದಿಲ್ಲ. ತಿಮ್ಮಕ್ಕಳ ಹುಟ್ಟೂರು ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಿಸಬೇಕೆಂಬುದು ತಿಮ್ಮಕ್ಕ ಅವರ ಕನಸಾಗಿದೆ. ಆದರೆ, ಸರ್ಕಾರ ಕೇವಲ ಭರವಸೆ ನೀಡಿ ಕೈತೊಳೆದುಕೊಂಡಿದೆ. ಅಲ್ಲದೆ ತಿಮ್ಮಕ್ಕ ಅವರ ಹೆಸರಿನಲ್ಲಿ ಪ್ರತಿ ತಾಲೂಕಿನಲ್ಲಿ ಉದ್ಯಾನವನ ನಿರ್ಮಿಸುವುದಾಗಿ ಹೇಳಿದ್ದ ಸರ್ಕಾರ ಈವರೆಗೆ ಯೋಜನೆ ಜಾರಿಗೆ ತಂದಿಲ್ಲ ಎಂದು ಉಮೇಶ ಆರೋಪಿಸಿದ್ದಾರೆ.