ಗುಜರಾತಿನಲ್ಲಿ ಮತ್ತೊಮ್ಮೆ ಬಿಜೆಪಿ ಪಾರುಪಥ್ಯ ಗ್ಯಾರಂಟಿ?
ಚುನಾವಣಾ ಪೂರ್ವ ಸಮೀಕ್ಷೆ ವರದಿಯೇನು ಗೊತ್ತಾ?
ಇಂಡಿಯಾ ಟುಡೇ ಗ್ರೂಪ್ಸ್ ಮತ್ತು ಆಕ್ಸಿಸ್ ಮೈ ಇಂಡಿಯಾ ಜಂಟಿಯಾಗಿ ಗುಜರಾತಿನಲ್ಲಿ ಚುನಾವಣ ಪೂರ್ವ ಸಮೀಕ್ಷೆ ನಡೆಸಿವೆ. ಸಮೀಕ್ಷೆ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ ಮತ್ತೊಮ್ಮೆ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯ ವರದಿ ಪ್ರಕಾರ ಒಟ್ಟು ಗುಜರಾತ್ ವಿಧಾನಸಭೆಯ 182 ಸ್ಥಾನಗಳ ಪೈಕಿ ಬಿಜೆಪಿ 115ರಿಂದ 125 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ 57 ರಿಂದ 65 ಸ್ಥಾನಗಳಿಗೆ ತೃಪ್ತಿ ಪಡಬೇಕಾಗುತ್ತದೆ. ಇನ್ನು ಇತರರು ಮೂರು ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಆದರೆ, ಹಾರ್ದಿಕ್ ಪಟೇಲ್ ಬೆಂಬಲಿತ ಪಕ್ಷ ಸೊನ್ನೆ ಸಂಪಾದನೆ ಮಾಡಲಿದೆ ಎನ್ನಲಾಗಿದೆ.
ಬಿಜೆಪಿ ಶೇಕಡಾ 48 ಮತಗಳನ್ನು ಪಡೆಯಲಿದ್ದು ಕಾಂಗ್ರೆಸ್ ಶೇಕಡಾ 38, ಇತರರು 12, ಹಾರ್ದಿಕ್ ಪಟೇಲ್ ಶೇಕಡಾ 2 ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ವರದಿ ಮಾಡಿದೆ. ಆದರೆ, ಅಂತಿಮ ತೀರ್ಪು ಮಾತ್ರ ಗುಜರಾತಿನ ಮತದಾರರೆ ನೀಡಲಿದ್ದು ಚುನಾವಣೆ ಬಳಿಕವಷ್ಟೇ ಗುಜರಾತಿಗರ ಮನ ಗೆದ್ದವರು ಯಾರು ಎಂಬುದು ಬಹಿರಂಗವಾಗಲಿದೆ.