ಎಲ್ಲೊ ಮಳೆಯಾಗುತಿದೆ ಎಂದು, ತಂಗಾಳಿಯು ಹೇಳುತಿದೆ….
ಭೂದೇವಿ ಹಸಿರುಟ್ಟು ನಲಿಯುವ ಕಾಲ..
ಮಳೆಯ ಅತಿವೃಷ್ಟಿಯ ಅನಾಹುತ ಒಳ್ಳೆಯದಲ್ಲ, ಅನಾವೃಷ್ಠಿಯೂ ಬರಗಾಲ ತಂದು ಜೀವನ ಏರುಪೇರು ಮಾಡುತ್ತೆ. ಏನೇ ಇರಲಿ ಮೊದಲ ಮಳೆಯ ಮಣ್ಣಿನ ಘಮಕ್ಕೆ ಮೂಗರಳೋದು ಮಾತ್ರ ದಿಟ. ಮಳೆಯ ಅನುಭವ, ಅನುಭೂತಿ ಪ್ರತಿವರ್ಷವೂ ಒಂದೊಂದು ರೀತಿ.
ಮಳೆಯಲಿ ನನೆಯುವದು,ತೊಯಿಸಿಕೊಳ್ಳುತ ಓಡುವದು,ಮಳೆಯಲಿ ಆಡುವದು,ದೋಣಿ ಮಾಡಿ ತೇಲಿಬಿಡುವದು, ಕಳ್ಳೆಮಳ್ಳೆ ಕಪಾಟ ಮಳ್ಳೆ ಅಂತ ಹಾಡುತ ತಿರುಗಿ ಲಾಗ ಹಾಕುವದು ಎಂಥ ಖುಷಿಯ ಆಹ್ಲಾದಕರ ಸನ್ನಿವೇಶಗಳು ಬಾಲ್ಯಕಾಲದ ಆ ತುಂಟಜೀವನದಲ್ಲಿ.
ಪೃಕೃತಿಯ ರಮ್ಯತೆ, ಭೂದೇವಿ ಹಸಿರುಟ್ಟು ನಲಿಯುವ ಚೇತೋಹಾರಿ ಕಾಲ. ನನಗಂತೂ ಎಲ್ಲ ಕಾಲಕ್ಕಿಂತಲೂ ಮಳೆಗಾಲಾನೆ ಇಷ್ಟ.ಬಿಸಿಲ ಭರೆ ಇರಲ್ಲ,ಚಳಿಯ ಥರಗುಟ್ಟುವಿಕೆ ಇರಲ್ಲ. ಬಿಸಿಲಿದ್ದರೂ ನಡು ನಡುವೆ ಮಳೆ ಸುರಿದು ಭೂದೇವಿಯ ತಣ್ಣಗಾಗಿಸುವ ವರ್ಷಧಾರೆ.
ಬೆಟ್ಟಗುಡ್ಡಗಳ ಇಳಿಜಾರಿಂದ ಹರಿದುಬರುವ ಸಣ್ಣ ಸಣ್ಣ ತೊರೆಗಳು ರೋಡ ಮೇಲೆ ಹರಿಯುವಾಗ ಅದರಲಿ ದಾಟಿಹೋಗುವ ಸಂಭ್ರಮಕೆ ಸಾಟಿನೆ ಇಲ್ಲ. ಗಿಡಮರಗಳಲಿ ಕುಳಿತ ಹಕ್ಕಿಗಳು ತೊಯಿಸಿಕೊಂಡಾಗ ಪಟಪಟನೆ ರೆಕ್ಕೆಬಡಿದು ಹಾರುವಾಗ ಸಿಡಿಯುವ ಹನಿಗಳು, ಮರದ ಹನಿಗಳು ಸದಾ ಟಪ್ ಟಪ್ ಮಾಡುತ ನಿಂತ ನೀರಲಿ ಬೀಳುವ ಪರಿ ಅದ್ಯಾವ ಸಂಗೀತಕ್ಕೂ ಕಡಿಮೆ ಇಲ್ಲ ಅನಸಿದ್ದು ಸತ್ಯ.
ಸಂಜೆಯಾದರೆ ಕಪ್ಪುಮೋಡಗಳು ಒಮ್ಮೆಲೆ ಬಂದು ರೌದ್ರನರ್ತನ ಮಳೆ ಸುರಿಯುತಿತ್ತು ಆಗ ಕತ್ತಲಾವರಿಸಿ ಹೇಗಪ್ಪಾ ಮನೆಗೆ ಹೋಗೋದು ಅಂತ ಭಯಗೊಂಡು ಹತಾಶರಾಗಿ ಮಳೆರಾಯನಿಗೆ ನಿಲ್ಲೊ ನಿಲ್ಲೂ ಮಳೆರಾಯ ಉಂಡಿಕಡಬ ಕೊಡ್ತಿನಿ ಅಂತ ಪ್ರಾರ್ಥಿಸಿದ್ದು ಇದೆ.
ಇವೆಲ್ಲ ಮಲೆನಾಡಿನಲ್ಲಿರುವ ನನ್ನ ಅಜ್ಜಿ ಮನೆಗೆ ಹೋದಾಗಿನ ಸಂಭ್ರಮದ ಕ್ಷಣಗಳು. ಊರ ಮುಂದಿನ ಹಳ್ಳ ತುಂಬಿ ಮನೆಯ ಹೊಸ್ತಿಲಿಗೆ ಬಂದು ಅಪ್ಪಳಸ್ತಿತ್ತು. ದೊಡ್ಡದಾದ ಹೊಸ್ತಿಲು ಅದಕೆ ನೀರು ಒಳಹೋಗದಂತೆ ಕಟ್ಟಿಗೆಯ ದೊಡ್ಡ ತುಂಡನ್ನು ಅಡ್ಡವಾಗಿ ಇಡುತಿದ್ದರು ಆದರೂ ನೀರು ಒಳಬಂದು ಪಡಸಾಲೆಯನ್ನೆಲ್ಲ ತೋಯಿಸಿ ಮಡಗಟ್ಟುತಿತ್ತು.
ಹಿರಿಯರು ಹೊಳಿಗಂಗವ್ವ ಬೇಗ ಇಳದು ಹೋಗ ಅಂತ ಪ್ರಾರ್ಥಿಸಿ ಬಾಗಿನ ಅರ್ಪಿಸತಿದ್ದರು. ಕಟ್ಟೆ ಮೇಲೆ ಜೋರಾಗಿ ಬಂದು ಬೀಳುವ ಆಲಿಕಲ್ಲುಗಳನ್ನು ಬೊಗಸೆಯೊಡ್ಡೆ ಹಿಡಿಯಲು ಹರಸಾಹಸ ಪಡ್ತಿದ್ದಿವಿ. ಸಿಗದೆ ಕರಗುವ ಪರಿಯನೋಡಿ ಹೈರಾಣಾಗತಿದ್ದಿವಿ. ಎಂಥ ಚಂದದ ಬಾಲ್ಯ ಮತ್ತೆ ಸಿಗುವದೆ? ಇಲ್ಲ ತಾನೆ, ನೆನಪುಗಳ ಮಾತು ಮಧುರ.
ಕುಡಿಯುವ ನೀರಿಗೆ ಹಳ್ಳದ ಒರತೆಗಳನ್ನೆ ಅವಲಂಬಿಸಿದ್ದರಿಂದ ಹಳ್ಳಬಂದುಹೋದ ಮೇಲೆ ಒರತೆಗಳು ರಾಡಿಯಾಗಿರ್ತಿದ್ದವು.ಅವನ್ನು ಸ್ವಚ್ಚ ಮಾಡಿ ಬೊಗಸೆಯಿಂದಲೋ ಗಿಂಡಿಯಿಂದಲೋ ಕೊಡಕ್ಕೆ ನೀರು ತುಂಬಿ ಇಡುತಿದ್ದೆವು. ದೊಡ್ಡವರು ಜೋಡಗೋಡ ಹೊತಕೊಂಡು ಹೋಗಿ ಕುಡಿಯುವ ಹಂಡೆ ತುಂಬಿಸುವದೊರಳಗ ಸುಸ್ತಾಗತಿದ್ದರು.
ಎಷ್ಟೊಸಲ ಹುದಲಲ್ಲಿ ಕಾಲಸಿಕ್ಕು ಜಾರಿದ್ದುಂಟು. ಹಳ್ಳದೊಂದಿಗೆ ಊರಿನ ಜನಕೆ ಅವಿನಾಭಾವ ಸಂಬಂಧ. ಪ್ರತಿಯೊಂದಕ್ಕೂ ಹಳ್ಳವನ್ನೆ ಆಶ್ರಯಿಸಿ ಜೀವಿಸುವ ಜನತೆಗೆ ಮೇಲಿಂದ ಮೇಲೆ ಸುರಿಯುವ ಮಳೆ ಇನ್ನಿಲ್ಲದ ಸಂಕಟಗಳನ್ನು ಒಡ್ಡುತಿತ್ತು.
ಭಾರಿಮಳೆಗೆ ಗಿಡಗಳು ಉರಳಿ ಅಡ್ಡಾಡುವ ದಾರಿಗಳನ್ನೆ ಬಂದಮಾಡತಿದ್ದವು. ಓಣಿಯ ಇಳಿಜಾರಿಂದ ರಭಸವಾಗಿ ಹರಿದು ಬರುವ ನೀರು ನೋಡುವದೆ ರೋಮಾಂಚನ.ಕಾಗದದ ದೋಣಿಗಳು ನಿರಾಳವಾಗಿ ಡುಮಕಿ ಹೊಡಿಯುತ್ತ ಸಾಗತಿದ್ದವು.ನಾವು ಚಪ್ಪಾಳೆಹೊಡೆಯುತ್ತ ನನ್ನ ದೋಣಿ ಮುಂದ….ನನ್ನದೂ ಅಂತ ಚೀರುತ್ತ ನೀರಿನೊಂದಿಗೆ ಓಡುತ್ತ ಜಾರಿ ಬಿದ್ದು ಗಾಯ ಮಾಡಿಕೊಂಡು ಹಿರಿಯರಿಂದ ಬೈಸಿಕೊಂಡದ್ದಿದೆ.
ಮಲೆನಾಡ ಒಡಲಲಿ ನಾನಾ ತರಹದ ಗಿಡಮರಗಳು ಮಳೆಯಿಂದ ತೊಟ್ಟಿಕ್ಕುವ ರಿಮ್ ಜಿಮ್ ನಾದದೊಂದಿಗೆ ಬೆಳೆದವರು ನಾವೆಲ್ಲ ಬೆಂಕಿ ಮೇಲೆ ಸುಟ್ಟ ಹಪ್ಪಳ ಹಾಗೂ ಶುಂಠಿ ಕಾಷಾಯ ಮಳೆಗಾಲದ ಸಂಜೆಗೆ ಅಜ್ಜಿ ತಯಾರಿಸ್ತಿದ್ದಳು.
ಕುರು ಕುರು ತಿನ್ನುತ ಕಾಷಾಯ ಹೀರುತ ಹೊಸ್ತಿಲ ಮೇಲೆ ಕೂತು ಮಳೆಯನ್ನು ಕಣ್ತುಂಬಿಕೊಳ್ಳುವ ಕ್ಷಣಗಳನ್ನು ಈಗ ಎಲ್ಲಿ ಹುಡಕಲಿ. ರಾತ್ರಿ ಮಲಗೋವಾಗ ಶೀತವಾಗದಿರಲಿ ಅಂತ ಕುಲಾಯಿ ಕಟ್ಟಿ ಮಲಗಿಸುತಿದ್ದ ನನ್ನ ಅಜ್ಜಿನ ಎಲ್ಲಿ ಹುಡಕಲಿ. ಈಗ ಅಲ್ಲಿ ಅಂದಿನ ಮಳೆಯೂ ಇಲ್ಲ ನನ್ನ ಅಜ್ಜಿನೂ ಇಲ್ಲ. ಅಂದಿನ ಹರಿಯುವ ಹಳ್ಳನೂ ಇಲ್ಲ. ಹೀಗಾಗಿ ಎಲ್ಲ ಮರೆಯದ ಮಳೆಯ ನೆನಪುಗಳು ಮಾತ್ರ.
–ಜಯಶ್ರೀ ಭ.ಭಂಡಾರಿ.
ಅಧ್ಯಾಪಕಿ,
ನೂತನ ಫ್ರೌಢ ಶಾಲೆ,
ಜಾಲಿಹಾಳ.
ಬಾದಾಮಿ.
9986837446.