ಆ ಮೃದು ಸ್ವಭಾವದ ‘ಬಸವ’ನ ಕಂಡ್ರೆ ಗಡಗಡ : ಪರಮೇಶ್ವರಪ್ಪ ಕುದರಿ ಬರಹ
ಬರಹ : ಪರಮೇಶ್ವರಪ್ಪ ಕುದರಿ, ಶಿಕ್ಷಕರು ಚಿತ್ರದುರ್ಗ
ನಾನಾಗ ರಾಣಿಬೆನ್ನೂರಿನಲ್ಲಿ ಸೆಕೆಂಡ್ ಪಿ.ಯು.ಸಿ ಓದುತ್ತಿದ್ದೆ. ನೋಡಲು ತುಂಬಾ ಒರಟನಂತೆ ಕಾಣುತ್ತಿದ್ದ, ಆದರೆ ಸ್ವಭಾವತಃ ಮೃದುವಾಗಿದ್ದ ಸಹಪಾಠಿ ಬಸವರಾಜನ ಪರಿಚಯವಾಗಿ, ಪರಿಚಯ ಸ್ನೇಹವಾಗಿ ಬದಲಾಯಿತು.
ಬಸವರಾಜ ನನ್ನಲ್ಲಿನ ಸಾಹಿತ್ಯಕ ಗುಣಗಳನ್ನು ತುಂಬಾ ಮೆಚ್ಚಿಕೊಂಡಿದ್ದ, ಎಷ್ಟೋ ಸಾರಿ ನನ್ನಿಂದಲೇ ತನ್ನ ಹುಡುಗಿಗಾಗಿ ಲವ್ ಲೆಟರ್ ಬರೆಸಿಕೊಂಡಿದ್ದ ಕೂಡ!
ಇಡೀ ಕಾಲೇಜಿಗೆ ಕಾಲೇಜೇ ಆತನನ್ನು ಕಂಡರೆ ಹೆದರುತ್ತಿತ್ತು, ಉಪನ್ಯಾಸಕರು ಕೂಡ! ನರಪೇತಲನಂತಿದ್ದ ನನಗೆ ಬಸವರಾಜ ಬಾಡಿಗಾಡ್ ಆಗಿದ್ದ.
ನಮ್ಮ ಕಾಲೇಜಿನ ಹಿಂದಿನ ಹೋಟೆಲ್ಲಿನಲ್ಲಿ ಮಾಡುತ್ತಿದ್ದ ಬಿಸಿ-ಬಿಸಿ ಜಿಲೇಬಿ ಎಂದರೆ ಆತನಿಗೆ ಬಲು ಇಷ್ಟ. ಅದೆಷ್ಟು ಬಾರಿ ಕ್ಲಾಸ್ ತಪ್ಪಿಸಿ ನಾವಿಬ್ಬರು ಜಿಲೇಬಿ ತಿಂದಿದ್ದೇವೊ ಗೊತ್ತಿಲ್ಲ!
ಅಭ್ಯಾಸದಲ್ಲಿ ಸಾಧಾರಣವಾಗಿದ್ದ ನನ್ನ ಗೆಳೆಯ ಹೃದಯವಂತನಾಗಿದ್ದ. ಯಾರಾದರೂ ದೇಹಿ ಎಂದು
ಬಂದರೆ ಕರಗಿ, ತನ್ನಲ್ಲಿದ್ದುದನ್ನು ಧಾರೆ ಎರೆದು ಬಿಡುತ್ತಿದ್ದ.
ಆ ಒಂದು ದಿನ ಪಿ.ಯು.ಸಿ ರಿಜಲ್ಟ್ ಬಂದಾಗ ಆತ ಫೇಲಾಗಿದ್ದ , ನಾನು ಪಾಸಾಗಿದ್ದೆ. ತಾನು ಫೇಲಾಗಿದ್ದ ನೋವು ಆತನಿಗಿರಲಿಲ್ಲ. ಬದಲಾಗಿ ನಾನು ಪಾಸಾಗಿದ್ದ ಸಂತಸ ಅವನಿಗೆ ಅತೀವವಾಗಿತ್ತು!
ನಾನು ಪಾಸಾದ ಖುಷಿಗೆ ನನ್ನನ್ನು ವಾಚಿನ ಅಂಗಡಿಗೆ ಕರೆದೊಯ್ದು ಒಂದು ವಾಚ್ ಕೊಡಿಸಿದ್ದ. ಸಾಲದ್ದಕ್ಕೆ ಶಂಕರ್ ಸ್ಟುಡಿಯೋಗೆ ನನ್ನನ್ನು ಕರೆದೊಯ್ದು ತಾನು ನನ್ನ ಕೈಯಿಗೆ ವಾಚ್ಕಟ್ಟುವ ಫೋಟೊ ತೆಗೆಸಿದ್ದ.!
ಮುಂದೆ ಕಾಲಾಂತರದಲ್ಲಿ ನಾನು ಶಿಕ್ಷಕನಾದೆ-ಮದುವೆಯೂ ಆದೆ, ನನ್ನನ್ನುಕಾಣಲು ಒಂದು ದಿನ ಚಿತ್ರದುರ್ಗಕ್ಕೂ ಬಂದ. ಕ್ಷಣಾರ್ಧದಲ್ಲಿ ನನ್ನವಳಿಗೆ ಆತ್ಮೀಯನಾದ.
ನನ್ನ ಅವನ ಸ್ನೇಹದ ಬಗ್ಗೆ ನನ್ನವಳಿಗೆ ಹೇಳಿ ಖುಷಿ ಪಟ್ಟ. ಜೊತೆಗೆ ಚಿತ್ರದುರ್ಗದಲ್ಲಿ ‘ಮತ್ತೆ ಹಾಡಿತು ಕೋಗಿಲೆ’ ಸಿನಿಮಾನೂ ನೋಡಿದ. ವಿಷ್ಣುವರ್ಧನ್ ಎಂದರೆ ಆತನಿಗೆ ಪ್ರಾಣ. ಮಾರನೆಯ ದಿನ ಊರಿಗೆ ಹೊರಟ ಬಸವ ತುಸು ಖಿನ್ನನಾಗಿದ್ದ.
ವಲ್ಲದ ಮನಸ್ಸಿನಿಂದ ಆತನನ್ನು ಬೀಳ್ಕೊಟ್ಟೆ. ಮಾರನೇಯ ದಿನ ಆತ, ತನ್ನ ಪ್ರೇಯಸಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟ! ಹಾಳು ಜಾತಿಯತೆ ಪದ್ಧತಿಗೆ ಹೆದರಿ ನನ್ನ ಬಸವ ಈ ಜಗತ್ತಿನಿಂದ
ದೂರಾಗಿ ಬಿಟ್ಟ. ಅಜಾನುಬಾಹು ದೇಹ ಮೃದು ಮನಸು ಹೊಂದಿದ್ದ ನನ್ನ ಸ್ನೇಹಿತ ಬಸವ.
ಅಂದು ಎಷ್ಟು ನೊಂದುಕೊಂಡಿದ್ದನೋ ಅದೊಂದು ಮಾತು ಹೇಳದೆ ಕೊನೆ ಉಸಿರಿರುವರೆಗೂ ಸ್ನೇಹಿತರ ಕಷ್ಟಕ್ಕೆ ಎದೆಯೊಡ್ಡಿನಿಂತಿದ್ದ ಓದಿಗೆ ಸಹಕಾರ ನೀಡುತ್ತಿದ್ದ ತನ್ನ ಕಷ್ಟ ನಷ್ಟ ಇಷ್ಟದ ಬಗ್ಗೆ ಏನೇನು ಹೇಳಲಿಲ್ಲ ಮೌನವಾಗಿ ಜಾಗ ಖಾಲಿ ಮಾಡಿದ ಬಸವ, ನಮ್ಮ ಮನಸ್ಸಿಂದ ಮಾತ್ರ ಎಂದಿಗೂ ಹೋಗಲಾರ ಆತ ಇಂದಿಗು ನಮ್ಮ ಮನೆ ಮನಸಲ್ಲಿ ಅಜರಾಮರ.
ನನ್ನ ಕೊನೆಯ ಉಸಿರಿರುವವರೆಗೂ ಆತನೊಬ್ಬನೇ ನನ್ನ ಪ್ರಾಣ ಸ್ನೇಹಿತ. ಆತನ ಆತ್ಮಕ್ಕೆ ಈ ದಿನ ಶಾಂತಿ ಕೋರುವೆ.