ವಯನಾಡಿನಲ್ಲಿ ಭೀಕರ ಭೂಕುಸಿತ: ಮೃತರ ಸಂಖ್ಯೆ 24ಕ್ಕೆ ಏರಿಕೆ..!

ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭಾರೀ ಭೂ-ಕುಸಿತ ಸಂಭವಿಸಿದ್ದು ಸಾವಿನ ಸಂಖ್ಯೆ 24ಕ್ಕೆ ಏರಿಕೆ ಆಗಿದೆ. ಜೊತೆಗೆ ಮಣ್ಣಿನ ಅಡಿಯಲ್ಲಿ ನೂರಾರು ಮಂದಿ ಜೀವಂತ ಸಮಾಧಿ ಆಗಿರುವ ಆತಂಕ ವ್ಯಕ್ತವಾಗುತ್ತಿದೆ. ವಯನಾಡು ಜಿಲ್ಲೆಯಲ್ಲಿ ಭೂಕುಸಿತದ ನಂತರ ರಕ್ಷಣಾ ಕಾರ್ಯಾಚರಣೆಗಾಗಿ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಫೀಲ್ಡಿಗೆ ಇಳಿದಿವೆ.
ಅಲ್ಲಿನ ಜನರಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಮೆಪ್ಪಾಡಿ, ಮುಂಡಕ್ಕೈ ಟೌನ್ ಮತ್ತು ಚುರಲ್ ಮಾಲಾದಲ್ಲಿ ಇಂದು ಮುಂಜಾನೆ ಅನಾಹುತ ಆಗಿದೆ. ಭೂಕುಸಿತದಿಂದ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭೂಕುಸಿತದಲ್ಲಿ ಗಾಯಗೊಂಡ 50 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಕ್ಕೈ ಟೌನ್‌ನಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಭಾರೀ ಮಳೆಯ ಸಂದರ್ಭದಲ್ಲಿ ಮೊದಲ ಭೂಕುಸಿತ ಸಂಭವಿಸಿದೆ. ಮುಂಡಕ್ಕೈನಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಮುಂಜಾನೆ 4 ಗಂಟೆ ಸುಮಾರಿಗೆ ಚುರಲ್ ಮಾಳದ ಶಾಲೆಯೊಂದರ ಬಳಿ ಎರಡನೇ ಭೂಕುಸಿತ ಸಂಭವಿಸಿದೆ. ಶಾಲೆಯ ಸುತ್ತಮುತ್ತಲಿನ ಮನೆಗಳು, ಅಂಗಡಿಗಳು ಗುಡ್ಡ ಕುಸಿತದಿಂದ ನಾಶ ಆಗಿವೆ.