ಗೋಣಿಚೀಲದಲ್ಲಿ ಯುವಕನ ಶವ ಪತ್ತೆ-ಪಾರ್ಟಿ ನೆಪದಲ್ಲಿ ಕರೆಸಿ ಕೊಲೆ ಶಂಕೆ
ಶಹಾಪುರಃ ಗೋಣಿಚೀಲದಲ್ಲಿ ಯುವಕನ ಶವ ಪತ್ತೆ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಸೋಫಿ ಸರ್ಮದ್ ದರ್ಗಾ ಬಳಿಯ ಶಂಕರರಾಯನ ಕೆರೆಯಲ್ಲಿ ಗೋಣಿಚೀಲದಲ್ಲಿ ಯುವಕನ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಲಿಂಗಸುಗೂರ ಮೂಲದ ಕುಮಾರ (22) ಎಂಬಾತನೇ ಕೊಲೆಯಾದ ಯುವಕ. ಮುಸ್ತಫಾ ಮತ್ತು ಇನ್ನಿಬ್ಬರು ಸೇರಿ ಈ ಯುವಕನನ್ನು ಪುಸಲಾಯಿಸಿ ಇಲ್ಲಿಗೆ ಕರೆ ತಂದು, ಆತನಿಗೆ ಕುಡಿಸಿ ನಿಶೆಯಾದ ನಂತರ ಗೋಣಿ ಚೀಲದಲ್ಲಿ ಹಾಕಿ ಕಲ್ಲು ಕಟ್ಟಿ ಕೆರೆಯಲ್ಲಿ ಎಸೆಯಲಾಗಿದೆ ಎಂದು ತಿಳಿದು ಬಂದಿದೆ.
ಕೊಲೆಗೆ ಕಾರಣ ಪ್ರೇಮ ಪ್ರಕರಣ ಎಂದು ತಿಳಿದು ಬಂದಿದೆ. ಕೊಲೆಯಾದ ಯುವಕ ಕುಮಾರ ಲಿಂಗಸುಗೂರಿನಲ್ಲಿ ಒಂದು ಹಡುಗಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಂಗಸುಗೂರ ಪೊಲೀಸರು ಆರೋಪಿ ಮುಸ್ತಫಾ ಎಂಬಾತನನ್ನು ಬಂಧಿಸಿ ವಿಚಾರಣೆ ನಿಮಿತ್ತ ಸ್ಥಳಕ್ಕೆ ಕರೆ ತಂದು ಪರಿಶೀಲನೆ ನಡೆಸಿದಾಗ ಶವ ದೊರೆತಿದೆ.
ಆರೋಪಿ ಮುಸ್ತಫಾ ಜತೆ ಇನ್ನಿಬ್ಬರಿದ್ದಾರೆ ಎಂದು ಹೇಳಲಾಗುತ್ತಿದೆ. ಉಳಿದ ಇಬ್ಬರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಆರೋಪಿ ಮುಸ್ತಫಾ ಸಮೇತ ಲಿಂಗಸೂಗೂರ ಪೊಲೀಸರು ಸೇರಿದಂತೆ ಶಹಾಪುರ ಠಾಣೆಯ ಸಿಪಿಐ ನಾಗರಾಜ ಜೆ, ಮತ್ತು ಗೋಗಿ ಪೊಲೀಸರು ಹಾಜರಿದ್ದರು.
ಕೆರೆಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಈ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಈ ಕುರಿತು ಯಾವುದೇ ವಿಷಯ ಬಹಿರಂಗ ಪಡಿಸುತ್ತಿಲ್ಲ. ಪೊಲೀಸರ ತೀವ್ರ ತನಿಖೆಯಿಂದಲೇ ಸಮಗ್ರ ಸತ್ಯಾಂಶ ಹೊರಬೇಕಿದೆ. ಘಟನಾ ಸ್ಥಳದಲ್ಲಿ ಸಾರ್ವಜನಿಕರು ಜಮಾವಣೆಗೊಂಡಿದ್ದರು.