ಕೆಲ ಕಾವಿಧಾರಿಗಳು ರಾಜಕಾರಣದಲ್ಲಿ ತೊಡಗಿದ್ದು ಧರ್ಮ ಒಡೆಯುತ್ತಿದ್ದಾರೆ -ರಂಭಾಪುರಿಶ್ರೀ
ಶಹಾಪುರಃ ವಿಶ್ವಗುರು ಬಸವಣ್ಣನವರು ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡಿದ್ದಾರೆ. ಆದರೆ, ಬಸವ ಅನುಯಾಯಿಗಳು ಎಂದು ಹೇಳಿಕೊಂಡು ಸ್ವತಂತ್ರ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವ ಕೆಲವರು ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಆ ಮೂಲಕ ಬಸವ ತತ್ವಕ್ಕೆ ವಿರೋಧವಾದ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಬಾಳೆ ಹೊನ್ನೂರಿನ ರಂಭಾಪುರಿ ಶ್ರೀಗಳು ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ನೂತನ ಬಸವೇಶ್ವರರ ಪ್ರತಿಮೆ ಅನಾವರಣದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಲವು ಖಾವಿಧಾರಿಗಳು ರಾಜಕಾರಣದಲ್ಲಿ ತೊಡಗಿದ್ದಾರೆ. ಧರ್ಮ ಒಡೆಯುವ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಅಲ್ಲದೆ ವೀರಶೈವ ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಕೆಲವರು ವೀರಶೈವ ಧರ್ಮವನ್ನು ಇತಿಹಾಸದ ಪುಟದಿಂದ ನಿರ್ಣಾಮ ಮಾಡುವ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಆಗಿವೆ. ಪ್ರತ್ಯೇಕವಾಗಿ ನೋಡುವುದು ಸಲ್ಲದು. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ವೀರಶೈವ ಮತ್ತು ಲಿಂಗಾಯತ ಇಬ್ಬರು ಒಂದಾಗಿ ಬಂದಲ್ಲಿ ಕೇಂದ್ರಕ್ಕೆ ಪ್ರತ್ಯೇಕ ಧರ್ಮ ಶಿಫಾರಸ್ಸು ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿದ್ದರು. ಈಗ ಲಿಂಗಾಯತರ ಒತ್ತಡ ಜಾಸ್ತಿಯಾಗಿದೆ, ಪ್ರತ್ಯೇಕ ಧರ್ಮಕ್ಕಾಗಿ ಶಿಫಾರಸ್ಸು ಮಾಡಲಾಗುವುದು ಎಂದು ಹೇಳುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ ಎಂದು ರಂಭಾಪುರಿ ಶ್ರೀಗಳು ನುಡಿದರು.
ಬಸವಣ್ಣ ಯಾವ ವಚನದಲ್ಲಿಯೂ ಲಿಂಗಾಯತ ಎಂದು ಉಲ್ಲೇಕಿಸಿಲ್ಲ. ವೀರಶೈವ ಎಂಬ ಪದ ಬಳಿಸಿದ್ದಾರೆ. ಲಿಂಗಾಯತ ಎಂಬುದು ವೀರಶೈವದ ಪರ್ಯಾಯ ಪದವಷ್ಟೆ. ವೀರಶೈವ ಸಮಾಜದ ಅಭಿವೃದ್ಧಿಗೆ ಸಹಕರಿಸುವ ಮನಸ್ಸಿದ್ದರೆ 2(ಎ) ವರ್ಗಕ್ಕೆ ಸೇರ್ಪಡಿಸುವ ಮೂಲಕ ಶೇ.15 ರಿಂದ 20 ರಷ್ಟು ಮೀಸಲಾತಿ ನೀಡಲಿ ಎಂದು ಒತ್ತಾಯಿಸಿದರು.