ವಿದ್ಯಾರ್ಥಿಗಳ ಜೊತೆ ರಾಜ್ಯ ಸರ್ಕಾರ ಚಲ್ಲಾಟ ಆಕ್ರೋಶ
ಉಚಿತ ಬಸ್ಪಾಸ್ ನೀಡದ ಸರ್ಕಾರಕ್ಕೆ ಧಿಕ್ಕಾರ
ಸ್ವಯಂಪ್ರೇರಿತ ಕಾಲೇಜು ಬಂದ್, ಅಂಗಡಿ ಮುಂಗಟ್ಟು ಎಂದಿನಂತೆ ಆರಂಭ
ಯಾದಗಿರಿ,ಶಹಾಪುರ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ಸಂಘಟನೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ಜಾರಿಗಾಗಿ ಕರೆ ನೀಡಿದ್ದ ಅಖಿಲ ಕರ್ನಾಟಕ ಸ್ವಯಂಪ್ರೇರಿತ ಶಾಲಾ-ಕಾಲೇಜು ಬಂದ್ ಯಶಸ್ವಿಯಾಗಿದೆ.
ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಶಾಲಾ-ಕಾಲೇಜುಗಳನ್ನು ಬಹಿಷ್ಕರಿಸಿ ಬಂದ್ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಶಿಕ್ಷಕರು, ಪೋಷಕರು ಸಹ ಬಂದ್ಗೆ ಸಹಕರಿಸಿದ್ದಾರೆ.
ರಸ್ತೆಗಿಳಿದ ಎಸ್ಐಡಿಓ ಸಂಘಟನೇ ಕಾರ್ಯಕರ್ತರು, ಬಡ ವಿದ್ಯಾರ್ಥಿಗಳು ಹಾಗೂ ರೈತರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊಟ್ಟ ಮಾತನ್ನು ಉಳಿಸಿಕೊಳ್ಳಲಾರದ, ಹಣದ ಕೊರತೆಯ ಸುಳ್ಳು ನೆಪಗಳನ್ನು ಹೇಳುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಯುವ ಸಮುದಾಯ ತೀವ್ರವಾಗಿ ಖಂಡಿಸಿತು.
ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವುದಕ್ಕೆ ಶೀಘ್ರ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಸಮೂಹ ಆಗ್ರಹಿಸಿತು.
ಕೂಡಲೇ ಸರ್ಕಾರ ಸ್ಪಂದಿಸದೆ ಹೋದಲ್ಲಿ ಉಗ್ರ ಹೋರಾಟ ಕೈಗೊಳ್ಳುವದಾಗಿ ಎಸ್ಡಿಐಓ ಸಂಘಟನೆ ಪ್ರಮುಖರು ಎಚ್ಚರಿಸಿದ್ದಾರೆ.
ನಗರದಲ್ಲಿ ಎಲ್ಲಾ ಶಾಲಾ-ಕಾಲೇಜು ಸ್ವಯಂಪ್ರೇರಿತ ಬಂದ್ ಆಗಿದ್ದವು. ಎಐಡಿಎಸ್ಓ ಕಾರ್ಯದರ್ಶಿ ಸುಭಾಷಚಂದ್ರ ಬಿ.ಕೆ, ಸಂಘಟನಾಕಾರರಾದ ಸಿಂಧು ಬಿ, ಚೇತನ ಕೆ.ಎಸ್, ಅವರ ನೇತೃತ್ವದಲ್ಲಿ ಶಹಾಪುರದ ಬಸವೇಶ್ವರ ವೃತ್ತದಲ್ಲಿ ವಿವಿಧ ಶಾಲಾ-ಕಾಲೇಜಿನ ಹೋರಾಟ ಸಮಿತಿ ಮುಖಂಡರನ್ನೊಳಗೊಂಡ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಹಮ್ಮದ್, ನಿಂಗಯ್ಯ, ಮಹರಾಜ, ಈರಣ್ಣ, ರಂಜಿತಾ, ಸರಸ್ವತಿ, ಉಮಾ, ವಿಜಯಲಕ್ಷ್ಮೀ, ಶಾರದ, ಅಂಬಿಕಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.