ಪಡಿತರ ಚೀಟಿಗೆ ಆಧಾರ್ ದೃಢೀಕರಣ ಮಾಡದಿದ್ದರೆ ರದ್ದು-ಡಿಸಿ ಕೂರ್ಮಾರಾವ್
ಯಾದಗಿರಿ ಜಿಲ್ಲೆಯಲ್ಲಿ ಆಹಾರ ಸುರಕ್ಷಾ ಮಾಹೆ ಜಾರಿ
ಯಾದಗಿರಿಃ ರಾಜ್ಯ ಸರಕಾರವು 2018-19ನೇ ಸಾಲಿನ ಆಯ-ವ್ಯಯದಲ್ಲಿ ಆಹಾರ ಸುರಕ್ಷಾ ಮಾಹೆ ಎಂಬ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಇದರಲ್ಲಿ ಪ್ರತಿ ಪಡಿತರ ಚೀಟಿಗಳನ್ನು ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸಲು ಹಾಗೂ ಅರ್ಹ ಪಡಿತರ ಚೀಟಿದಾರರನ್ನು ಗುರುತಿಸಿ ಪಡಿತರ ಚೀಟಿಯನ್ನು ನೀಡಲು ತಿಳಿಸಲಾಗಿದೆ.
ಆಧಾರ್ ದೃಢೀಕರಣ (ಇ-ಕೆವೈಸಿ) ವನ್ನು ಮಾಡದೇ ಇರುವ ಫಲಾನುಭವಿಗಳಿಗೆ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ 26,945 ಅಂತ್ಯೋದಯ ಪಡಿತರ ಚೀಟಿಯ 1,04,876 ಸದಸ್ಯರು ಹಾಗೂ 2,29,699 ಆದ್ಯತಾ ಕುಟುಂಬ (ಬಿಪಿಎಲ್) ಪಡಿತರ ಚೀಟಿಯ 8,06,825 ಸದಸ್ಯರು ಒಟ್ಟು 9,11,698 ಫಲಾನುಭವಿಗಳಿದ್ದು, ಶೇಕಡಾ 100ರಷ್ಟು ಆಧಾರ್ ಅನ್ನು ಸಂಗ್ರಹಿಸಲಾಗಿರುತ್ತದೆ. ಜಿಲ್ಲೆಯ ಎಲ್ಲಾ ಫಲಾನುಭವಿಗಳ ಮಾಹಿತಿಯೊಂದಿಗೆ ಆಧಾರ್ ಜೋಡಣೆಯಾಗಿರುವುದರಿಂದ ಮೊದಲ ಹಂತದಲ್ಲಿ ಆಧಾರ್ ದೃಢೀಕರಣವನ್ನು (ಇ-ಕೆವೈಸಿ) ಮಾಡಬಹುದಾಗಿದೆ.
ಇದರಿಂದ ಚಾಲ್ತಿಯಲ್ಲಿರದ, ಕುಟುಂಬದೊಂದಿಗೆ ವಾಸವಿಲ್ಲದ, ಮೃತರಾದ ಫಲಾನುಭವಿಗಳಿಗೆ ಮಾಹಿತಿಗಳನ್ನು ಗುರುತಿಸಿ ಅಂತಹ ಫಲನುಭವಿಗಳ ಮಾಹಿತಿಗಳನ್ನು ಆಹಾರ ದತ್ತಾಂಶದಿಂದ ಕಡಿತಗೊಳಿಸಿ ಪಡಿತರ ದಾಸ್ತಾನು ಉಳಿಕೆಯಾಗಲು ಕ್ರಮವಹಿಸಬೇಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಎನ್.ಐ.ಸಿ ರವರು ಈಗಾಗಲೇ ಸಿದ್ಧಪಡಿಸಿರುವ ತಂತ್ರಾಂಶದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ನ್ಯಾಯಬೆಲೆ ಅಂಗಡಿ ಹಂತದಲ್ಲಿ ಮಾತ್ರ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಡಿತರ ಚೀಟಿಯ ಫಲಾನುಭವಿಗಳು ತಮ್ಮ ಪಡಿತರ ಚೀಟಿಯ ಯಾವುದಾದರೂ ಒಬ್ಬ ಸದಸ್ಯರ ಜಾತಿ ಪ್ರಮಾಣ ಪತ್ರವನ್ನು ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಮಾಡುವ ಸಂದರ್ಭದಲ್ಲಿ ಮಾಹಿತಿ ನೀಡಲು ಸೂಚಿಸಲಾಗಿದೆ.
ಪಡಿತರ ಚೀಟಿದಾರರು ಅನಿಲ ಸಂಪರ್ಕ ಹೊಂದಿದರೇ, ಅಂತಹ ಪಡಿತರ ಚೀಟಿದಾರರ ಯಾವ ಯೋಜನೆಯ ಫಲಾನುಭವಿಗಳು ಅಥವಾ ನೇರವಾಗಿ ಖರೀದಿ ಮಾಡಿರುವ ಕುರಿತು ಮಾಹಿತಿ ನೀಡಲು ಸೂಚಿಸಲಾಗಿದೆ. ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ನಿರ್ವಹಿಸುವ ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ಫಲಾನುಭವಿಯ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಮಾಡುವ ಸಲುವಾಗಿ ಪ್ರತಿ ಫಲಾನುಭವಿಗೆ ರೂ.5 ರಂತೆ ಒಂದು ಕುಟುಂಬದ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಪೂರ್ಣಗೊಳಿಸಿದ್ದಲ್ಲಿ ಗರಿಷ್ಠ ಮೊತ್ತ ರೂ.20 ಮಾತ್ರ ಇಲಾಖಾ ವತಿಯಿಂದ ನೇರವಾಗಿ ಅಂಗಡಿಯವರಿಗೆ ಪಾವತಿಸಲಾಗುತ್ತದೆ.
ಫಲಾನುಭವಿಯಿಂದ ಯಾವುದೇ ಮೊತ್ತವನ್ನು ನ್ಯಾಯಬೆಲೆ ಅಂಗಡಿಯವರು ಸಂಗ್ರಹಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸೂಚಿಸಲಾಗಿದೆ. ಒಂದು ವೇಳೆ ಪಡಿತರ ಚೀಟಿದಾರರಿಂದ (ಇ-ಕೆವೈಸಿ) ಮಾಡಲು ನ್ಯಾಯಬೆಲೆ ಅಂಗಡಿ ಮಾಲೀಕರು ಹಣ ಪಡೆದ ಬಗ್ಗೆ ದೂರುಗಳು ಬಂದರೆ ಅಂತಹ ನ್ಯಾಯಬೆಲೆ ಅಂಗಡಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇ-ಕೆವೈಸಿ ಮಾಡದಿದ್ದರೆ ಪಡಿತರ ಸ್ಥಗಿತ: ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಸೆಪ್ಟೆಂಬರ್-2019ರ ಮಾಹೆಯಿಂದ ನವೆಂಬರ್-2019 ರ ಮಾಹೆಯವರೆಗೆ 3 ತಿಂಗಳುಗಳ ಕಾಲ ನಿರ್ವಹಿಸಿ ಡಿಸೆಂಬರ್-2019 ರ ಮಾಹೆಯಿಂದ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಮಾಡದೇ ಇರುವ ಫಲಾನುಭವಿಗಳಿಗೆ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮ ವಹಿಸಲಾಗುತ್ತದೆ.
ಪಡಿತರ ಚೀಟಿದಾರರ ಆಧಾರ್ ದೃಢೀಕರಣ (ಇ-ಕೆವೈಸಿ)ಯನ್ನು ಪಡೆಯುವ ಸಂದರ್ಭದಲ್ಲಿ ಯಾವುದಾದರು ಸಮಸ್ಯೆಗಳು ಮತ್ತು ದೂರುಗಳು ಇದ್ದರೆ ದೂರವಾಣಿ ಸಂಖ್ಯೆ: 08473-253707 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.