Homeಪ್ರಮುಖ ಸುದ್ದಿ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಬಿ.ಎಸ್‌. ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಚಾರ್ಜ್‌ಶೀಟ್‌

ಬೆಂಗಳೂರು: ಪೋಕ್ಸೋ ಪ್ರಕರಣಕ್ಕೆ (POCSO Case) ಸಂಬಂಧಿಸಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಬಿ.ಎಸ್‌. ಯಡಿಯೂರಪ್ಪ, ಅರುಣ್‌ ಎಂವೈ, ಎಂ.ರುದ್ರೇಶ್‌, ಜಿ.ಮರಿಸ್ವಾಮಿ ಎಂಬುವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಹೀಗಾಗಿ ಒಂದನೇ ಪೋಕ್ಸೊ ತ್ವರಿತಗತಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಿಐಡಿ ಸಲ್ಲಿಸಿದೆ.

ಸಿಐಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್‌ ನಾಯಕ್‌ ಅವರು ನ್ಯಾಯಾಲಯಕ್ಕೆ ದೋಷಾರೋ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್‌ ಶೀಟ್ ಸಲ್ಲಿಕೆ‌ ವೇಳೆ ನ್ಯಾಯಾಲಯವು ಆರೋಪ ಪಟ್ಟಿ ಸ್ವೀಕರಿಸಲು ವ್ಯಾಪ್ತಿ ಹೊಂದಿರುವ ಕುರಿತು ತಿಳಿಸುವಂತೆ ಸೂಚಿಸಿತ್ತು. ಆಗ ಎಸ್‌ಪಿಪಿ ನಾಯಕ್‌ ಅವರು ʼಪೋಕ್ಸೊ ನ್ಯಾಯಾಲಯವು ಅಪರಾಧ ಕೇಂದ್ರಿತ ನ್ಯಾಯಾಲಯ ಎಂದು ಪರಿಗಣಿಸಲ್ಪಡುತ್ತದೆ. ಜನಪ್ರತಿನಿಧಿಗಳ ನ್ಯಾಯಾಲಯವು ಆರೋಪಿ ಕೇಂದ್ರಿತ ನ್ಯಾಯಾಲಯವಾಗುತ್ತದೆ. ಹೀಗಾಗಿ, ಆರೋಪಪಟ್ಟಿಯನ್ನು ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಸಲ್ಲಿಕೆ ಮಾಡುವ ಅಗತ್ಯವಿಲ್ಲ ಎಂದು ವಾದಿಸಿದ್ದರು. ಇದನ್ನು ಆಲಿಸಿದ ಪೀಠವು ಆರೋಪ ಪಟ್ಟಿ ಸ್ವೀಕರಿಸಿದ್ದು, ಅದನ್ನು ಪ್ರಧಾನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಮಂಡಿಸುವಂತೆ ಆದೇಶಿಸಿದೆ.

ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆ ಸೆಕ್ಷನ್‌ 8, ಐಪಿಸಿ ಸೆಕ್ಷನ್‌ಗಳಾದ 354(ಎ), 204, 214 ಅಡಿ, 2ನೇ ಆರೋಪಿ ಅರುಣ್‌ ಎಂ.ವೈ, 3ನೇ ಆರೋಪಿ ಎಂ.ರುದ್ರೇಶ್‌ ಮತ್ತು 4ನೇ ಆರೋಪಿ ಜಿ.ಮರಿಸ್ವಾಮಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 204, 214ರ ಅಡಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಯಡಿಯೂರಪ್ಪ ನಿರ್ದೇಶನದಂತೆ ಆರೋಪಿ ರುದ್ರೇಶ್‌ ಅವರಿಂದ 2 ಲಕ್ಷ ರೂ. ಪಡೆದು ಅದನ್ನು ಸಂತ್ರಸ್ತ ಮಹಿಳೆಗೆ ನೀಡಿ, ಆಕೆಯ ಫೋನ್‌ನಲ್ಲಿನ ಬಿಎಸ್‌ವೈಗೆ ಸಂಬಂಧಿಸಿದ ವಿಡಿಯೊವನ್ನು ಡಿಲೀಟ್‌ ಮಾಡಿಸಿರುವುದು ಮತ್ತು ಅದನ್ನು ಸಾಮಾಜಿಕ ಜಾಲತಾಣದಿಂದ ತೆಗೆಸಿದ ಆರೋಪ ಅರುಣ್ ಮತ್ತು ಮರಿಸ್ವಾಮಿ ಅವರ ಮೇಲಿದೆ.

ಇನ್ನು ಯಡಿಯೂರಪ್ಪ ಅವರು ಎಫ್‌ಐಆರ್‌ ರದ್ದತಿ ಕೋರಿ ಹಾಗೂ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಕೆ ಮಾಡಿರುವ ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿವೆ.

Related Articles

Leave a Reply

Your email address will not be published. Required fields are marked *

Back to top button