ವಾಲ್ಮೀಕಿ ನಾಯಕ ಸಮುದಾಯಕ್ಕೆ 7.5ರಷ್ಟು ಮೀಸಲಾತಿ ನೀಡಿ
ನ್ಯಾಯಮೂರ್ತಿ ನಾಗಮೋಹನದಾಸ ವರದಿ ಅಂಗೀಕಾರಕ್ಕೆ ಆಗ್ರಹ
yadgiri, ಶಹಾಪುರ: ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ಉದ್ಯೋಗ ಶಿಕ್ಷಣಕ್ಕಾಗಿ ಶೇಕಡಾ 7.5ರಷ್ಟು ಮೀಸಲಾತಿ ನೀಡಬೇಕು. ನ್ಯಾಯಮೂರ್ತಿ ನಾಗಮೋಹನದಾಸ ವರದಿಯನ್ನು ಅಂಗೀಕರಿಸಬೇಕೆಂದು ತಾಲೂಕಾ ವಾಲ್ಮೀಕಿ ನಾಯಕ ಸಂಘದಿಂದ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಚುನಾವಣಾ ಸಮಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ಪರಿಶಿಷ್ಟ ಪಂಗಡ ಮೀಸಲಾತಿಯನು ಕೇಂದ್ರದ ಮಾದರಿಯಂತೆ ಶೇಕಡ 7.5ರಷ್ಟು ಮೀಸಲಾತಿ ಜಾರಿಗೊಳಿಸುವುದಾಗಿ ಇಂದಿನ ಮುಖ್ಯಮಂತ್ರಿಗಳು ಘೋಷಿಸಿದ್ದು, ಕೇಂದ್ರದ ಮಾದರಿಯಂತೆ ಅವರು ಕೊಟ್ಟ ಮಾತು ಮರೆತಿದ್ದಾರೆ. ಸಿಎಂ ಅವರು ಬಜೆಟ್‍ನಲ್ಲಿ ಪ್ರತ್ಯೇಕ ಸಚಿವಾಲಯ ಜಾರಿಗೊಳಿಸಲು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ಮುಖಾಂತರ ಐತಿಹಾಸಿಕ ಹೋರಾಟ ನಡೆಸಿದಾಗ ಆಗ ಸಮ್ಮಿಶ್ರ ಸರ್ಕಾರ ಎರಡು ತಿಂಗಳ ಕಾಲಾವಕಾಶ ಕೇಳಿದ್ದು, ಕಾಲಾಂತರದಲ್ಲಿ ಸರ್ಕಾರ ಅಧಿಕಾರ ಕಳೆದುಕೊಂಡ ನಂತರ ಬಂದ ಯಡಿಯೂರಪ್ಪ ಅವರ ಸರ್ಕಾರವು ಸಹ ಆಯೋಗದ ವರದಿ ನಂತರ ಕ್ರಮ ಜರುಗಿಸುವದಾಗಿ ಘೋಷಿಸಿತು.
ಆದರೆ ನಾಗಮೋಹನದಾಸ ಆಯೋಗ ವರದಿ ನೀಡಿ ಎರಡು ತಿಂಗಳಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಅಧಿವೇಶನದಲ್ಲಿ ನಾಗಮೋಹನದಾಸ ಆಯೋಗ ವರದಿ ಮಂಡಿಸಿ ಅಂಗೀಕರಿಸುವ ಮೂಲಕ ಸಮುದಾಯಕ್ಕೆ ನ್ಯಾಯ ಮತ್ತು ಸಂವಿಧಾನ ಹಕ್ಕು ಒದಗಿಸಬೇಕು ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚೆನ್ನಬಸ್ಸು ವಕೀಲರು, ರವಿ ಯಕ್ಷಿಂತಿ, ಹಣಮಂತ ಟೋಕಾಪುರ, ರಾಘವೇಂದ್ರ ಯಕ್ಷಿಂತಿ, ಮಹಾದೇವ ಶಾರದಹಳ್ಳಿ, ಅಶೋಕ ಯಕ್ಷಿಂತಿ, ಶರಣಪ್ಪ ಪ್ಯಾಟಿ ವಕೀಲರು, ರಾಯಣ್ಣ ಬಿರಾಳ, ಶಿವರಾಜ, ನಾಗರಾಜ, ಆನಂದ ನಾಯಕ, ಮೌನೇಶ ಹೊಸಗೇರಿ, ಅಂಬ್ರೇಶ ಇಟಗಿ ವಕೀಲರು, ಮರೆಪ್ಪ ಸಗರ ಇತರರು ಇದ್ದರು. ಮನವಿ ಸ್ವೀಕರಿಸಿದ ತಹಶೀಲ್ದಾರ ಜಗನ್ನಾಥರೆಡ್ಡಿ ಈ ಕುರಿತು ಮಾಹಿತಿ ಕಳುಹಿಸುವುದಾಗಿ ಭರವಸೆ ನೀಡಿದರು.