ಪ್ರಮುಖ ಸುದ್ದಿ

ನಾಡಿನ ರೈತರ ಬದುಕಿಗೆ ಮಿಡಿದ ಹೃದಯ ಮೈಲಾರಪ್ಪ-ಕೋಡಿಹಳ್ಳಿ

ರೈತ ಹೋರಾಟಗಾರ ಮೈಲಾರಪ್ಪ ಸಗರ ಅವರಿಗೆ ಸೆಲ್ಯೂಟ್ ಹೊಡೆದ ಕೋಡಿಹಳ್ಳಿ

ಶಹಾಪುರಃ ರೈತಪರ ಹೋರಾಟಗಾರ ಮೈಲಾರಪ್ಪ ಸಗರ ಅವರು ತಮ್ಮ ಕಂಚಿನ ಕಂಠದಿಂದ ರೈತರ ಸ್ಥಿತಿಗತಿ ಕುರಿತು ಆಗಿಂದಾಗೆ ಹಾಡುಗಳನ್ನು ಕಟ್ಟಿ ಹಾಡುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ನಾಡಿನ ರೈತರ ಅಭ್ಯುದಯಕ್ಕೆ ಮೈಲಾರಪ್ಪ ಹೃದಯ ಸದಾ ಮಿಡಿಯುತಿತ್ತು. ಇಂದು ಅವರಿಲ್ಲ ಆದರೆ ಅವರ ಆದರ್ಶ, ಅಪ್ರತಿಮ ಹೋರಾಟತನ ನಮ್ಮ ಜೊತೆಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.
ತಾಲೂಕಿನ ಸಗರ ಗ್ರಾಮದಲ್ಲಿ ಜಿಲ್ಲಾ ಕರಾರೈಸಂ ಹಾಗೂ ಹಸಿರು ಸೇನೆ ಘಟಕ ಆಯೋಜಿಸಿದ್ದ ಹಿರಿಯ ರೈತ ಹೋರಾಟಗಾರ ದಿ.ಮೈಲಾರಪ್ಪ ಸಗರ ಅವರ ನುಡಿನಮನ ಕಾರ್ಯಕ್ರಮದಲ್ಲಿ ನೇಗಿಲ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸ್ವತಃ ಹಾಡು ರಚನೆ ಮಾಡಿ ಕಂಚಿನ ಕಂಠದಿಂದ ಸಂಗೀತ ಕ್ಷೇತ್ರಕ್ಕೆ ಮೆರಗು ನೀಡಿದ್ದ, ರೈತ ಹೋರಾಟಗಾರ ಮೈಲಾರಪ್ಪ ಸಗರವರು ಸಗರನಾಡಿನಲ್ಲಿ ಅಪ್ರತಿಮ ರೈತ ಕಲಾವಿದರಾಗಿದ್ದರು. ಅವರ ಹಾಡುಗಳು ಗ್ರಾಮೀಣ ಭಾಷೆಯಲ್ಲಿ ಸೊಗಡನ್ನೆ ಸಾರಿ ಹೇಳುವಂತಿವೆ. ತಮ್ಮ ಹಾಡುಗಳಿಂದ ರೈತ ಹೋರಾಟಕ್ಕೆ ಜೀವ ಕಳೆ ನೀಡುವದರೊಂದಿಗೆ ರೈತ ಶಕ್ತಿಯ ಪ್ರತಿರೂಪವಾಗಿದ್ದರು.

ಸದಾ ಜನಮಾನಸದಲ್ಲಿ ಹಸಿರಾಗಿರುವ ಮೈಲಾರಪ್ಪ ಸಗರವರ ಹಾಡುಗಳು ಮತ್ತು ಹೋರಾಟದ ಗೀತೆಗಳು ಇಂದಿಗೂ ಜನ ಜಾಗೃತಿಗೆ ಪೂರಕವಾಗಿವೆ ಎಂದ ಅವರು, ಅಂದು ಸಗರ ಮೈಲಾರಪ್ಪನವರ ಹೋರಾಟದ ರೈತ ಸಂಘ ಇಂದು ರೈತಪರ ಹೋರಾಟ ಮಾಡುತ್ತಾ ಬಂದಿದ್ದು. ರೈತರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದು ರೈತರನ್ನು ದಳ್ಳುರಿಗೆ ತರುವ ಹುನ್ನಾರದಲ್ಲಿ ಸರ್ಕಾರಗಳ ಕಾರ್ಯ ಯೋಜನೆಗಳು ಮುಂದುವರೆದಿವೆ. ಪ್ರತಿಯೊಂದು ಹಳ್ಳಿಯಲ್ಲಿ ರೈತರು ಕೃಷಿ ಕೂಲಿ ಕಾರ್ಮಿಕರು ಜಾಗೃತರಾಗಿ, ಬಂಡವಾಳ ಕಂಪನಿಗಳ ವಿರುದ್ಧ ದಂಗೇಳುವ ಹೋರಾಟಕ್ಕೆ ಮುಂದಾಗಬೇಕÉ್ಧಂದು ರೈತರಿಗೆ ಕರೆ ನೀಡಿದರು. ಮೈಲಾರಪ್ಪನಂತ ಅಪ್ರತಿಮ ಹೋರಾಟಗಾರನನ್ನು ನಾಡಿಗೆ ಪರಿಚಯಿಸಿದ ಸಗರ ಗ್ರಾಮಕ್ಕೆ ಅನಂತ ಅನಂತ ವಂದನೆಗಳನ್ನು ಅರ್ಪಿಸಿದ ಕೋಡಿಹಳ್ಳಿ ತಮ್ಮ ಭಾಷಣಕ್ಕೆ ವಿದಾಯ ಹೇಳಿದರು.

ಹಳ್ಳಿಯಲ್ಲಿ ಅಲ್ಕಟ್ ರಾಜಕಾರಣಿಗಳ ಸಮಾಚಾರ ಮಾತಾಡೋದು ಬಿಡಿ-ಕೋಡಿಹಳ್ಳಿ
ಶಹಾಪುರಃ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ಈಗ ಬೊಮ್ಮಾಯಿ ಬಂದ ಆ ಮೇಲೆ ಸಿದ್ರಾಮಯ್ಯ ಹಿಂಗೆ ಕುಮಾರಸ್ವಾಮಿ ಅಂಗೆ ಇಂತಹ ಅಲ್ಕಟ್ ರಾಜಕಾರಣಿಗಳ ಸಮಾಚಾರ ಕುರಿತು ಹಳ್ಳಿಗಳಲ್ಲಿ ರೈತರು ಮಾತಾಡೋಸು ನಿಲ್ಲಿಸಬೇಕು. ಇದರಿಂದ ಯಾವುದೇ ಪ್ರಯೋಜನವಿಲ್ಲ. ರೈತರ ಬದುಕಿನ ಬಗ್ಗೆ ಕುರಿತು ಯೋಚಿಸಿ ಚಿಂತಿಸಿ ಹೆಜ್ಜೆ ಇಟ್ಟಲ್ಲಿ ರೈತರ ಬದುಕು ಹಸನು ಮಾಡಿಕೊಳ್ಳಬಹುದು ಎಂದು ಕೋಡಿಹಳ್ಳಿ ಚಂದ್ರಶೇಖರ ಖಾರವಾಗಿ ತಿಳಿಸಿದರು.

ತಾಲೂಕಿನ ಸಗರ ಗ್ರಾಮದಲ್ಲಿ ನಡೆದ ರೈತ ಹೋರಾಟಗಾರ ದಿ.ಮೈಲಾರಪ್ಪ ಸಗರ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈತರು ಇಂತಹ ರಾಜಕಾರಣಿಗಳ ಬಗ್ಗೆ ಕುರಿತು ಚರ್ಚಿಸೋದು ನಿಲ್ಲಿಸಿ, ನಿಮ್ಮ ಬದುಕಿನ ಬಗ್ಗೆ ಚಿಂತಿಸಿ ಚರ್ಚಿಸಿ, ಕೇಂದ್ರ ಸರ್ಕಾರ ಹೊಸ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ, ಇದರಿಂದ ರೈತರ ಬಾಳು ಹಾಳಾಗಿ ಹೋಗಲಿದೆ. ನಮ್ಮ ಜಮೀನುಗಳಲ್ಲಿ ಕಂಪನಿಗಳು ಕೃಷಿ ಮಾಡಲು ಆಗಮಿಸಲಿದ್ದಾರೆ. ನಾವೆಲ್ಲ ಕೃಷಿತನವನ್ನು ಆಯಾ ಕಂಪನಿಗಳಿಗೆ ಒಪ್ಪಿಸಬೇಕಾಗುತ್ತದೆ. ಹೀಗಾದಲ್ಲಿ ಮುಂದೆ ನಮ್ಮ ಗತಿ ಏನಾಗಲಿದೆ ಎಂಬುದನ್ನು ಯೋಚಿಸಿ, ಅದರ ವಿರುದ್ಧ ಸೆಟೆದು ನಿಲ್ಲಬೇಕಿದೆ. ನಮ್ಮತನ ಕೃಷಿತನ ಉಳಿಸಿಕೊಳ್ಳಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ ಬಿಎಸ್‍ಎಫ್ ಯೋಧ ದುರ್ಗಪ್ಪ ನಾಯಕ ಸಗರ ಮಾತನಾಡಿದರು. ಲಕ್ಷ್ಮೀಪುರ ಶ್ರೀಗಿರಿಮಠದ ಚನ್ನಮಲ್ಲಿಕಾರ್ಜುನ ಸ್ವಾಮೀನಿ ಸಾನ್ನಿಧ್ಯವಹಿಸಿದ್ದರು. ಮಹೇಶಗೌಡ ಸುಬೇದಾರ ಅಧ್ಯಕ್ಷತೆವಹಿಸಿದ್ದರು. ರಾಜ್ಯ ಸಂಚಾಲಕ ಶಾಂತರಡ್ಡಿ ಪಾಟೀಲ್, ಮುಖಂಡರಾದ ಅಶೋಕಗೌಡ ಸುಬೇದಾರ, ರಾಜ್ಯ ಪ್ರಧಾನಕಾರ್ಯದರ್ಶಿ ಕಾರ್ತಿಕ್ ಹೊಸಪೇಟೆ, ಭಕ್ತರಳ್ಳಿ ಭೈರೆಗೌಡಮ ಹನುಮಂತ ಹೊಳೆಯಾಚೆ, ಶ್ರೀನಿವಾಸ ನಾಯಕ, ಬಸನಗೌಡ ಬಿರೆದಾರ, ಗಗನ, ಮಲ್ಲನಗಭಡ ಹಗರಟಗಿ, ದೇವಿಂದ್ರಪ್ಪಗೌಡ ಪಾಟೀಲ್, ಬಸವರಾಜಪ್ಪಗೌಡ ಪಾಟೀಲ್, ದೇವರಾಜ, ಶಿವಕುಮಾರ ಮಲ್ಲೇದ್, ಶಂಕರ ಪಡಶೆಟ್ಟಿ, ರಾಯಪ್ಪ ನಾಯ್ಕೋಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. ಮುಂಚಿತವಾಗಿ ಎತ್ತಿನ ಬಂಡಿಯಲ್ಲಿ ಕೋಡಿಹಳ್ಳಿ ಸೇರಿದಂತೆ ರೈತ ನಾಯಕರನ್ನು ಗ್ರಾಮದ ಪ್ರಮುಖ ಬೀದಿಗಲ ಮೂಲಕ ಮೆರವಣಿಗೆ ಮಾಡಲಾಯಿತು.

Related Articles

Leave a Reply

Your email address will not be published. Required fields are marked *

Back to top button