ಆರೋಗ್ಯ ಸಹಾಯಕಿಯರ ಆರೋಗ್ಯ ವಿಚಾರಿಸಿ ಗೌರವಿಸಿದ ವಿದ್ಯಾರ್ಥಿನಿ
ಶಹಾಪುರ: ಕೊರೊನಾ ವೈರಸ್ ರಾಜ್ಯದಲ್ಲಿ ಹೆಚ್ಚು ಆವರಿಸದಂತೆ ತಡೆಗಟ್ಟಲು ಸರಕಾರ ಹಲವು ಕ್ರಮಕೈಗೊಂಡಿದ್ದು, ಅದರಲ್ಲಿ ಮುಖ್ಯವಾಗಿ ಬಡಾವಣೆಗಳಲ್ಲಿನ ಪ್ರತಿಯೊಂದು ಮೆನೆ-ಮನೆಗೆ ತೆರಳಿ ಕುಟುಂಬಸ್ಥರ ಆರೋಗ್ಯ ವಿಚಾರಿಸಿ ಮಾಹಿತಿ ಪಡೆಯುವ ಕೆಲಸ ಕಿರಿಯ ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ, ಹಿರಿಯ ಆರೋಗ್ಯ ಸಿಬ್ಬಂದಿಯವರ ಸಹಕಾರದೊಂದಿಗೆ ನಡೆದಿದ್ದು, ಬಡಾವಣೆಯ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಸಲಹೆ ಸೂಚನೆಗಳನ್ನು ಪಾಲಿಸಬೇಕು, ಎಂದು ಕಿರಿಯ ಆರೋಗ್ಯಸಹಾಯಕಿ ಸುಚಿತ್ರ ಗುತ್ತೇದಾರ ಮತ್ತು ಅಂಗನವಾಡಿ ಹಿರಿಯ ಕಾರ್ಯಕರ್ತೆ ಮಂದಾಕಿನಿ ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಹಳೆಪೇಟೆ ಮನೆಯೊಂದರಲ್ಲಿ ವಿದ್ಯಾರ್ಥಿನಿ ಸುಮಿತ್ರಾ ಸಗರ ಆರೋಗ್ಯ ಮಾಹಿತಿ ನೀಡಲು ಆಗಮಿಸಿದ್ದ ಸಿಬ್ಬಂದಿಗೆ ಸ್ವಾಗತಿಸಿ ಅವರ ಸೇವೆಗೆ ಅಭಿನಂದನೆ ಗೌರವ ಸಮರ್ಪಿಸಿದ್ದು ಸೇವಾಕಾರ್ಯಕ್ಕೆ ಸ್ಪೂರ್ತಿ ನೀಡಿತ್ತು.
ಮನೆಗೆ ಆಗಮಿಸಿದ ಆರೊಗ್ಯ ಸಹಾಯಕಿಯರ ಆರೋಗ್ಯ ವಿಚಾರಿಸಿ, ಕುಳ್ಳರಿಸಿ ಅವರಿಗೆ ಗೌರವ ಸಮರ್ಪಣೆ ಮಾಡಿದ ವಿದ್ಯಾರ್ಥಿನಿ. ಕೊರೊನಾ ವಾರಿಯರ್ಸ್ ನೀವು. ನಿಮ್ಮ ಸೇವೆ ಅನನ್ಯ. ನಾಗರಿಕರಿಗಾಗಿ ಜೀವದ ಹಂಗು ತೊರೆದು ಕರ್ತವ್ಯ ನಿಭಾಯಿಸುತ್ತಿದ್ದೀರಿ, ನೀವೆಲ್ಲಾ ಕೊರೊನಾ ನಾಶಪಡಿಸಲು ಹೋರಾಟ ನಡೆಸುತ್ತಿರುವ ಸೇನಾನಿಗಳು ನಿಮಗೆ ಶುಭವಾಗಲಿ ಜಯ ದೊರೆಯಲಿ ಎಂದು ಹರಸಿರುವದು ವಿಶೇಷವಾಗಿತ್ತು.