ಸದ್ಗುರು ನೇತೃತ್ವದಲ್ಲಿ ‘ನದಿಗಳನ್ನು ರಕ್ಷಿಸಿ’ ಚಳುವಳಿ ಶುರುವಾಗಿದ್ದು ಹೇಗೆ ಗೊತ್ತಾ?
‘ಮಜಾ ಟಾಕೀಸ್’ನಲ್ಲೊಂದು ಅಚ್ಚರಿ ಸಿರೀಸ್-4: ಸದ್ಗುರು ಜಗದೀಶ ವಾಸುದೇವ ಗುರೂಜಿ ಹೇಳಿದ್ದು…
RALLY FOR RIVERS ಚಳುವಳಿಗೆ ಕೈಜೋಡಿಸೋಣ, ಇದು ವಿನಯವಾಣಿ ಕಳಕಳಿ
ಪರ್ವತ, ಕಾಡು , ನದಿಗಳಿಗೂ ಮತ್ತು ನನಗೂ ಚಿಕ್ಕಂದಿನಿಂದಲೂ ಸಾಗಿಬಂದಿರುವ ತೀವ್ರ, ಗಾಢ ಸಂಭಂಧದ ಬಗ್ಗೆ ಅನೇಕ ಸಾರಿ ಹೇಳಿದ್ದೇನೆ. 12ರಿಂದ 17ನೇ ವರ್ಷದವರೆಗೂ ಹೆಚ್ಚು ಕಡಿಮೆ ಪ್ರತಿದಿನವೂ ನಾನು ಕಾವೇರಿ ನದಿಯಲ್ಲಿ ಈಜುತ್ತಿದ್ದೆ. ಆ ಕಾಲದಲ್ಲಿ ಈಜುತ್ತಿದ್ದ ಜಾಗದಲ್ಲಿ ಈವತ್ತು ನಡೆದುಕೊಂಡೇ ಹೋಗಬಹುದಾದ ಪರಿಸ್ಥಿತಿ ಬಂದಿದೆ. ಸುಮಾರು 17-18ನೇ ವಯಸ್ಸಿನಲ್ಲಿ ಭಾಗಮಂಡಲದಲ್ಲಿ ಮೈಸೂರಿನವರೆಗೆ ಸುಮಾರು 163 ಕಿ.ಮೀಗಳಿಗಷ್ಟು ದೂರ. ನಾಲ್ಕು ಲಾರಿ ಟ್ಯೂಬುಗಳಿಂದ ಮತ್ತು ಹತ್ತು ಬಿದಿರುದಬ್ಬೆಗಳಿಂದ ನಾನೇ ಮಾಡಿದ ತೆಪ್ಪದಲ್ಲಿ ಕೂತು, 13ದಿನ ಕಾವೇರಿ ನದಿಯಲ್ಲಿ ನಡೆಸಿದ್ದೆ. ದಂಡೆಗೆ ಬಂದು ಊಟ ಮಾಡುವುದು ಮತ್ತೆ ತೆಪ್ಪಕ್ಕೆ ವಾಪಸ್ ಬರುವುದು. ಹೀಗೆ ನನ್ನ ದೃಷ್ಟಿಯಲ್ಲಿ ನದಿಯೆಂದರೆ ನೀರು ಸಿಕ್ಕುವ ಜಾಗವಲ್ಲ. ಅದೊಂದು ಜೀವಂತ ವಸ್ತು. ಅನೇಕ ಜೀವರಾಶಿಗಳನ್ನು ಪೋಷಿಸುವ ತಾಯಿ.
ನಮ್ಮ ದೇಹವನ್ನೇ ತೆಗೆದುಕೊಳ್ಳಿ, ಅದರಲ್ಲಿ ನೂರಕ್ಕೆ 70ಭಾಗ ನೀರೇ ತಾನೆ ಇದೆ? ದೇಹದೊಳಗಿರುವ ನೀರನ್ನು ಪ್ರಾಣಕ್ಕೆ ಸಮವಾಗಿ ಭಾವಿಸುತ್ತೇವೆ. ಆದರೆ, ಹೊರಗೆ ಇರುವ ನೀರಿನ ಬಗ್ಗೆ ತಾತ್ಸಾರವಿದೆಯಲ್ಲ. ಅದು ಮನುಷ್ಯನ ಘೋರ ಅಗ್ನಾನ. ಕಳೆದ 25ವರ್ಷಗಳಿಂದಲೂ ನದಿಗಳು ಬತ್ತಿ ಹೋಗುತ್ತಿರುವುದನ್ನು ನೋಡಿ ಹಿಂಸೆ ಪಡುತ್ತಿದ್ದೇನೆ. ಕಾವೇರಿ ಒಂದೇ ಅಲ್ಲ. ಎಲ್ಲಾ ನದಿಗಳೂ ಅಷ್ಟೇ. ಕಾವೇರಿ ನದಿ ನೂರಕ್ಕೆ 40ಭಾಗಕ್ಕಿಂತಲೂ ಹೆಚ್ಚು ಬತ್ತಿ ಹೋಗಿದೆ. ನರ್ಮದಾ ನದಿ ನೂರಕ್ಕೆ 60ಭಾಗ, ಕೃಷ್ಣಾ ನದಿ ನೂರಕ್ಕೆ 60ಭಾಗಕ್ಕೂ ಹೆಚ್ಚು ಬತ್ತಿದೆ. ಮಾಹೆ ನದಿ 70 ಭಾಗದಷ್ಟು ಬತ್ತಿಹೋಗಿದೆ. ಇನ್ನೆಷ್ಟೋ ನದಿಗಳು ಪೂರ್ತಿ ನಾಮಾವಶೇಷವಾಗಿವೆ. ಒಂದೊಂದು ಮುಖ್ಯನದಿಗೂ ಇರುವ ಉಪನದಿಗಳ ಪೈಕಿ ಅದೆಷ್ಟೋ ಉಪನದಿಗಳು ಇತ್ತೋ ಇಲ್ಲವೋ ಎಂಬಂತೆ ಕಣ್ಮರೆಯಾಗಿವೆ.
ಅದರಲ್ಲೂ ಹಿಮಾಲಯ ಪ್ರದೇಶದ ಸ್ಥಿತಿ ಮತ್ತಷ್ಟು ಘೋರ. ಭಾಗೀರಥಿ ನದಿಗೆ ಸೇರುವ ಸುಮಾರು 800ಉಪನದಿಗಳ ಪೈಕಿ 470ಉಪನದಿಗಳು ವರ್ಷದಲ್ಲಿ ಯಾವಾಗಲೋ ಒಮ್ಮೆ ಮಾತ್ರ ಹರಿಯುತ್ತವೆ. ಒಂದು ಕಾಲದಲ್ಲಿ ಈ ಎಲ್ಲಾ ಉಪನದಿಗಳೂ ವರ್ಷವಿಡೀ ಹರಿಯುತ್ತಿದ್ದವು. ಭಾರತದ ರೈಲು ಮಾರ್ಗಗಳನ್ನು ನಿರ್ಮಿಸಲು ಹಿಮಾಲಯದ ಮರಗಳನ್ನು ಉಪಯೋಗಿಸಿದರು. ಚಿಕ್ಕವರಿಗೆ ತಿಳಿಯದೇ ಇರಬಹುದು. ಆದರೆ, ಒಂದು ಕಾಲದಲ್ಲಿ ಸುಂದರ್ ಲಾಲ್ ಬಹುಗುಣ ಎನ್ನುವ ಮಹಾನುಭಾವರು ಚಿಪ್ಕೋ ಚಳುವಳಿಯನ್ನು ಪ್ರಾರಂಭಿಸಿದರು. ಅವರು ಮರಗಳನ್ನು ಅಪ್ಪಿಕೊಳ್ಳಿ ಅಭಿಯಾನವನ್ನು ಮಾಡಿ ಹಿಮಾಲಯದ ಮರಗಳನ್ನು ಉಳಿಸಲು ಪ್ರಯತ್ನಿಸಿದರೂ ಸಹ ನಾವು ಬಿಡದೆ ಹಿಮಾಲುದ ಮರಳನ್ನು ಉರುಳಿಸಿ ರೈಲುಮಾರ್ಗಗಳನ್ನು ನಿರ್ಮಾಣ ಮಾಡಿದೆವು.
ಅದಾಗಿ ಎಷ್ಟೋ ವರ್ಷಗಳ ನಂತರ ಈಚೀಚೆಗೆ ಸಿಮೆಂಟು ಬಳಸಿ ರೈಲುಮಾರ್ಗದ ಸ್ಲೀಪರುಗಳನ್ನು ತಯಾರಿಸುತ್ತಿದ್ದೇವೆ. ಆಗಲೇ ಈ ಕೆಲಸ ಮಾಡಬಹುದಾಗಿತ್ತು. ಅದರಲ್ಲೂ ಹಿಮಾಲಯದ ನೆಲ ನಾಜೂಕು ನೆಲ. ಸ್ವಲ್ಪ ಕೆದಕಿದರೆ ಇಡೀ ಪರ್ವತವೇ ಸರಿದು ಕೆಳಕ್ಕೆ ಬೀಳುತ್ತದೆ. ಒಂದು ಮರವನ್ನು ಕಡಿದರೆ ಆ ಜಾಗದಲ್ಲಿ ಸ್ಥಿರತೆ ಕಡಿಮೆಯಾಗಿ ಮಣ್ಣಿನ ರಾಶಿ ಕೆಳಗೆ ಬಿದ್ದು ಬಿಡುತ್ತದೆ. ಆದ್ದರಿಂದಲೇ ಹಿಮಾಲಯದಲ್ಲಿ ಭೂಕುಸಿತ ಆಗಾಗ ಆಗುತ್ತಿರುತ್ತದೆ. ನಾನು 17ವರ್ಷದವನಾದಾಗಿನಿಂದಲೂ 27ವಯಸ್ಸಿನವರೆಗೂ ಪ್ರತಿವರ್ಷವೂ ಹಿಮಾಲಯದ ಪರ್ವತಗಳನ್ನು ಹತ್ತಲು ಹೋಗುತ್ತಿದ್ದೆ. ಹಾಗಾಗಿಯೇ ಹಿಮಾಲಯದ ಅವನತಿಯ ಪ್ರತಿಯೊಂದು ಹಂತದ ಬಗ್ಗೆಯೂ ನನಗೆ ಚನ್ನಾಗಿ ಗೊತ್ತು. ಸುಮಾರು 14ವರ್ಷಗಳ ಹಿಂದೆ ಹಿಮಾಲಯಕ್ಕೆ ಹೋಗುವ ಬದಲು ಟಿಬೇಟ್ ಪ್ರದೇಶಕ್ಕೆ ಹೋಗಲು ಶುರುಮಾಡಿದೆ. ಯಾಕೆಂದರೆ ಮೊದಲಿನಿಂದಲೂ ನಾನು ನೋಡಿದ ಹಿಮಭರಿತ ಪರ್ವತಗಳೆಲ್ಲವೂ ಹಿಮವನ್ನು ಕಳೆದುಕೊಂಡು ಈಗ ಕಪ್ಪನೆಯ ಪರ್ವತಗಳಾಗಿಬಿಟ್ಟಿವೆ. ಯಾವ ಪರ್ವತಗಳು ಲಕ್ಷಾಂತರ ವರ್ಷಗಳಿಂದಲೂ ಹಿಮಾಚ್ಛಾದಿತವಾಗಿಯೇ ಇದ್ದವೋ ಅವುಗಳಲ್ಲಿ ಈಗ ಹಿಮವೆಂಬ ವಸ್ತುವೇ ಇಲ್ಲ.
ಗೋಮುಖ ಜಾಗದ ಹೆಸರು ಕೇಳಿರಬಹುದು. ಭಾಗೀರಥಿ ಹುಟ್ಟುವುದೇ ಅಲ್ಲಿ. ನಾನು ಮೊದಲು ನೋಡಿದಾಗ ಸುಮಾರು ಅಲ್ಲಿ 20-25 ಅಡಿ ಅಗಲದ ಗುಹೆ ಇತ್ತು. ಆ ಗುಹೆಯಿಂದ ಅಘಾದವಾದ ನೀರು ಸುರಿದು ಅದು ಗೋವಿನ ಮುಖದ ಹಾಗೆ ಕಾಣುತ್ತಿತ್ತು. ಆದರೆ, ಅದೇ ಗುಹೆ 14ವರ್ಷಗಳ ಹಿಂದೆ ನಾನು ನೋಡಿದಾಗ ಹಿಮವೆಲ್ಲಾ ಕರಗಿಹೋಗಿ ಒಂದು ಮೈಲಿಯಷ್ಟು ಅಗಲ ಆಗಿಹೋಗಿತ್ತು. ಹೀಗಾಗಿ, ಬಹಳಷ್ಟು ಹಿಮಾಲಯದ ಅವನತಿ ಆಗಿಹೋಗಿದೆ. ಅದರಲ್ಲೂ ಕಳೆದ 7-8ವರ್ಷಗಳಲ್ಲಿ ತೀವ್ರವಾದ ವಿನಾಶ ಸಂಭವಿಸಿದೆ. ಹಾಗಾಗಿಯೇ ನಾನೂ ಕೂಡ ಸುಮಾರು 4ವರ್ಷಗಳಿಂದಲೂ ಏನು ಮಾಡಿದರೆ ಪ್ರಕೃತಿಯ ವಿನಾಶವನ್ನು ತಡೆಗಟ್ಟಬಹುದು ಅಂತ ಯೋಚನೆ ಮಾಡುತ್ತಾ ಬಂದೆ…
ಮುಂದುವರೆಯುವುದು…
– ಮಲ್ಲಿಕಾರ್ಜುನ ಮುದನೂರ್
Super