ಮಂಕಿಮ್ಯಾನ್ ಜ್ಯೋತಿರಾಜ್ ತಮಿಳುನಾಡಿನಿಂದ ಕೋಟೆನಾಡಿಗೆ ಬಂದ ರೋಚಕ ಕಥೆ
ವರನಟ ಡಾ.ರಾಜಕುಮಾರ್ ಅಪಹರಣದ ವೇಳೆಯೇ ತಮಿಳಿನ ಜ್ಯೋತಿರಾಜ್ ಕರ್ನಾಟಕ ಎಂಟ್ರಿ!
-ಬಸವರಾಜ ಮುದನೂರ್
ಬೆಳಗಾಗುವುದರಲ್ಲಿ ತಮಿಳುನಾಡಿನಿಂದ ನೇರವಾಗಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬೀಳಗಿ ಬಳಿಯ ಸುಣ್ಣಗ ಬಳಿಗೆ ಬಂದಿರುತ್ತಾನೆ ಪುಟ್ಟ ಬಾಲಕ ಜ್ಯೋತಿರಾಜ್. ಅಲ್ಲಿನ ಕುವೇಂದ್ರನ್ ಮಾಲೀಕತ್ವದ ಕುವೇಂದ್ರನ್ ಸ್ವೀಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಚಕ್ಲಿ, ಸ್ವೀಟ್ಸ್ ಹೀಗೆ ಅನೇಕ ತಿಂಡಿ ತಿನಿಸುಗಳ ತಯಾರಿಕೆಗೆ ಸಹಾಯಕನಾಗಿ ಕೆಲಸ ಶುರು ಮಾಡುತ್ತಾನೆ.
ಸಹಾಯಕನಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ರೂ ಸಹ ಮಾಲೀಕ ಮಾತ್ರ ಬಿಡಿಗಾಸು ನೀಡುವುದಿಲ್ಲ. ಬರೀ ಹೊಟ್ಟೆ, ಬಟ್ಟೆ ಮತ್ತು ವಸತಿ ಸೌಲಭ್ಯ ಮಾತ್ರ ನೀಡುತ್ತಾನೆ. ಸಂಬಳದ ಬಗ್ಗೆ ಕೇಳಿದಾಗ ಕಿರುಕುಳ ನೀಡಲು ಶುರುಮಾಡುತ್ತಾನೆ. ಕಂಪನಿಯಿಂದ ಹೊರ ಹೋಗದಂತೆ ನಿರ್ಭಂಧನೆ ಹೇರಿ ಜೀತದಾಳಿನಂತೆ ನಡೆಸಿಕೊಳ್ಳುತ್ತಾನೆ. ಹೀಗಾಗಿ, ಹಿಂಸೆ ತಾಳಲಾರದೆ ಅದೊಂದು ದಿನ ರಾತ್ರಿ ವೇಳೆ ಎಲ್ಲರೂ ಮಲಗಿದ ಸಮಯ ನೋಡಿ ವಾಸವಿದ್ದ ಬಿಲ್ಡಿಂಗ್ ಹತ್ತಿ ಕೆಳಗೆ ಹಾರುವ ಮೂಲಕ ಕಂಪನಿಯಿಂದ ತಪ್ಪಿಸಿಕೊಂಡು ಬಂದುಬಿಡುತ್ತಾನೆ. ಅದು ಜ್ಯೋತಿರಾಜನ ಮೊದಲ ಜಂಪ್!
ಆಗಲೂ ಅಷ್ಟೇ ಕೈಯಲ್ಲಿ ಬಿಡಿಗಾಸೂ ಇರುವುದಿಲ್ಲ. ಕಂಪನಿಯಿಂದ ಹೊರಗೇನೋ ಬಂದು ಬಿಡುತ್ತಾನೆ. ಹೊರ ಬಂದ ಬಳಿಕ ಈ ಸಲ ತಮಿಳುನಾಡು ಬಿಟ್ಟಾಗ ಇಲ್ಲದ ಭಯ ಶುರುವಾಗಿ ಬಿಡುತ್ತದೆ. ಬಾಯಿಬಿಟ್ಟರೆ ತಮಿಳು ಮಿಶ್ರಿತ ಕನ್ನಡ ಕೇಳಿ ಕನ್ನಡಿಗರು ಬಡಿದಾರು ಎಂಬ ಭೀತಿಯಿಂದ ಬಾಯಿಗೆ ಬೀಗ ಹಾಕಿಕೊಂಡು ಮುನ್ನಡೆಯುತ್ತಲೇ ಸಾಗುತ್ತಾನೆ. ಯಾಕಂದ್ರೆ, ಅದೇ ಸಮಯದಲ್ಲಿ ಕರ್ನಾಟಕದ ಮೇರು ನಟ ಡಾ.ರಾಜಕುಮಾರ್ ಅವ್ರನ್ನು ದಂತಚೋರ ವೀರಪ್ಪನ್ ಅಪಹರಿಸಿಟ್ಟುಕೊಂಡಿರುತ್ತಾನೆ. ಹೀಗಾಗಿ, ತಮಿಳಿಗ ಎಂಬುದು ಗೊತ್ತಾಗಿ ಕನ್ನಡಿಗರು ಬಡಿದರೇನು ಗತಿ ಎಂದು ಚಿಂತಿಸಿ ಅಡವಿ ದಾರಿ ಇಡಿಯುತ್ತಾನೆ ಜ್ಯೋತಿರಾಜ್.
ಅಡವಿಯಲ್ಲಿ ಸಿಕ್ಕ ಹಣ್ಣು-ಹಂಪಲುಗಳನ್ನು ತಿನ್ನುತ್ತಾನೆ. ಜಮೀನುಗಳಲ್ಲಿ ಬೆಳೆದ ಸೇಂಗಾ, ಕಬ್ಬು, ಟಮಾಟೋ, ಸೌತೆಕಾಯಿ, ಮೆಕ್ಕೆಕಾಯಿಗಳನ್ನು ತಿನ್ನುತ್ತ, ಹಳ್ಳ, ಕೆರೆ, ಕಾಲುವೆಗಳಲ್ಲಿ ನೀರು ಕುಡಿಯುತ್ತ ಒಂಬತ್ತು ದಿನಗಳ ಕಾಲ ಬಿಡುವಿಲ್ಲದೆ ನಡೆಯುತ್ತಾನೆ. ಹಾಗೇ ಬಾಗಲಕೋಟೆ ಬಿಟ್ಟು ಬಂದ ಜ್ಯೋತಿರಾಜ್ ಒಂಬತ್ತು ದಿನಗಳ ಬಳಿಕ ಸುಮಾರು ನಾಲ್ಕು ನೂರು ಕಿಲೋ ಮೀಟರ್ ನಷ್ಟು ನಡೆದು ಚಿತ್ರದುರ್ಗ ಸೇರುತ್ತಾನೆ.

ಆವತ್ತು ಕೂಡ ಶನಿವಾರವೇ ಆಗಿರುತ್ತದೆ. ಚಿತ್ರದುರ್ಗ ನಗರದ ಸಮೀಪದಲ್ಲೇ ಇರುವ ವಿಜಾಪುರ ಗೊಲ್ಲರಹಟ್ಟಿ ಬಳಿ ನಡೆದು ಹೊರಟವನಿಗೆ ನಾಗಪ್ಪ ಎಂಬ ವ್ಯಕ್ತಿ ಮಾತನಾಡಿಸುತ್ತಾನೆ. ನಡೆದು ನಡೆದು ದಣಿದು ಬಾಡಿದ ಮುಖ, ಹಸಿದ ಹೊಟ್ಟೆಯನ್ನು ಗಮನಿಸಿ ಊಟಕ್ಕೆ ಕರೆದು ಮುದ್ದೆ ನೀಡುತ್ತಾನೆ. ತಮಿಳುನಾಡಿನಲ್ಲಿ ಅನ್ನ-ಸಾರು, ಬಾಗಲಕೋಟೆಯಲ್ಲಿ ರೊಟ್ಟಿ -ಪಲ್ಯ ರುಚಿ ನೋಡಿದ್ದ ಜ್ಯೋತಿರಾಜ್ ಮೊದಲ ಬಾರಿಗೆ ದುರ್ಗದ ಮುದ್ದೆ-ಸಾರನ್ನು ಸವಿಯುತ್ತಾನೆ.
ಊಟ ಮಾಡುತ್ತಲೇ ಜ್ಯೋತಿರಾಜ್ ನ ಕಥೆ ಕೇಳಿದ ನಾಗಪ್ಪ ಜಮೀನು ಕೆಲಸ ಮಾಡಿಕೊಂಡಿರುವಂತೆ ತಿಳಿಸಿ ಒಂದು ತಿಂಗಳುಗಳ ಕಾಲ ಆಶ್ರಯ ನೀಡುತ್ತಾನೆ. ಬಳಿಕ ಮತ್ತೋರ್ವ ವ್ಯಕ್ತಿ ರಂಗಣ್ಣ ಒಂದು ವರ್ಷ ಕಾಲ ಜಮೀನು ಕೆಲ್ಸ ಮಾಡಿದ್ರೆ ಐದು ಸಾವಿರ ರೂಪಾಯಿ ನೀಡುವುದಾಗಿ ಹೇಳಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಾನೆ. ಆದರೆ, ಎಂಟು ತಿಂಗಳ ಬಳಿಕ ದುಡ್ಡು ಕೇಳಿದ್ರೆ ಕೇವಲ ಐದುನೂರು ರೂಪಾಯಿ ನೀಡಿ ಸಾಗಹಾಕುತ್ತಾನೆ.

ಆಗ ಸಿಕ್ಕವರೇ ಜ್ಯೋತಿರಾಜ್ ನ ತಂದೆ ಸ್ವರೂಪಿ ಮಹಾದೇವಪ್ಪ. ಗಾರೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಮಹಾದೇವಪ್ಪ-ತಿಮ್ಮಕ್ಕ ದಂಪತಿಗೆ ಎರಡು ಗಂಡು ಮಕ್ಕಳು ಮೂವರು ಹೆಣ್ಣು ಮಕ್ಕಳ ತುಂಬು ಕುಟುಂಬ. ಆದರೂ ಜ್ಯೋತಿರಾಜನಿಗೆ ಮನೆಯಲ್ಲೇ ಆಶ್ರಯ ನೀಡಿ ಸಲಹುತ್ತಾರೆ. ಗಾರೇ ಕೆಲಸವನ್ನು ಕಲಿಸುತ್ತಾರೆ. ಜ್ಯೋತಿರಾಜ್ ಗಾರೇ ಕೆಲಸದಲ್ಲಿ ದುಡಿದ ದುಡ್ಡನ್ನು ಮಕ್ಕಳಂತೆ ತಂದು ತಂದೆಯ ಕೈಗಿಡುತ್ತಾನೆ. ಪರಿಣಾಮ ಜ್ಯೋತಿರಾಜ್ ಮಹಾದೇವಪ್ಪನ ಆರನೇ ಮಗನಾಗಿಬಿಡುತ್ತಾನೆ.

ಅಷ್ಟೊಂದು ಗಟ್ಟಿಗೊಳ್ಳುತ್ತದೆ ಬಾಂಧವ್ಯ. ಯಾವ ಪರಿ ಎಂದರೆ ಮಹಾದೇವಪ್ಪನ ನ್ಯಾಯಬೆಲೆ ಅಂಗಡಿ ಕಾರ್ಡನಲ್ಲಿ ಆರನೇ ಮಗನ ಹೆಸರಾಗಿ ಸೇರುತ್ತದೆ ಜ್ಯೋತಿರಾಜನ ಹೆಸರು. ಮತದಾನ ಚೀಟಿಯಲ್ಲೂ ಜ್ಯೋತಿರಾಜ್ ತಂದೆ ಮಹಾದೇವಪ್ಪ ಅಂತಲೇ ನಮೂದಾಗಿದೆ. ಇನ್ನು ತಂದೆಯ ಹೆಸರು ಬದಲಿಸಿ
ಬರೆಸಿದ್ದು ಏನೂ ಅನ್ನಿಸಲಿಲ್ವಾ ಅಂತ ಕೇಳಿದ್ರೆ ತಮಿಳುನಾಡಿನಲ್ಲಿರುವ ನನ್ನ ತಂದೆಯ ಹೆಸರು ಈಶ್ವರನ್, ಕರ್ನಾಟಕದಲ್ಲಿರುವ ಅಪ್ಪನ ಹೆಸರು ಮಹಾದೇವಪ್ಪ. ಹೇಗಿದೆ ನೋಡಿ, ತಮಿಳಿನ ಈಶ್ವರನ್ ಎಂಬ ಹೆಸರನ್ನು ಕನ್ನಡಕ್ಕೆ ಅನುವಾದಿಸಿದಂತಿದೆ ಎನ್ನುತ್ತ ಭಾವುಕನಾಗುತ್ತಾನೆ ಜ್ಯೋತಿರಾಜ್.
ಮೊದಲ ಕಂತು ಓದಲು ಈ ಲಿಂಕ್ ಬಳಸಿ –
ಏಳುಸುತ್ತಿನ ಕೋಟೆಯ ಮಂಕಿಮ್ಯಾನ್ ಜ್ಯೋತಿರಾಜನ ಜೀವನ ಕಥನ : ಸರಣಿ ಶುರು https://vinayavani.com/siries/monkey-man-jyothiraj-life-story/
ಮುಂದುವರೆಯುವುದು…