ಹುಷಾರು! ಮೊಬೈಲ್ ಚಾರ್ಜರ್ ಮಕ್ಕಳ ಕೈಗೆಟುಕದಂತಿರಲಿ!
ಚಿಕ್ಕಮಗಳೂರು: ಚಾರ್ಜಿಗೆ ಇರಿಸಿದ್ದ ಮೊಬೈಲ್ ಚಾರ್ಜರ್ ವೈರ್ ಕಚ್ಚಿದ ಮಗು ವಿದ್ಯುತ್ ಶಾಕ್ ನಿಂದ ಸಾವಿಗೀಡಾದ ಘಟನೆ ಮೂಡಿಗೆರೆ ತಾಲೂಕಿನ ಆಲ್ದೂರಿ ಗ್ರಾಮದಲ್ಲಿ ನಡೆದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯಲ್ಲಿ ತನ್ನ ಪಾಡಿಗೆ ತಾನು ಆಟವಾಡುತ್ತಿದ್ದ ಮಗು ಮೊಬೈಲ್ ಚಾರ್ಜರ್ ವೈರ ಕಂಡು ಬಾಯಿ ಹಾಕಿದಾಗ ದುರ್ಘಟನೆ ನಡೆದಿದೆ. ಅನಿರೀಕ್ಷಿತ ಘಟನೆಯಿಂದಾಗಿ ಸಂಬಂಧಿಕರು, ಗ್ರಾಮಸ್ಥರು ತೀವ್ರ ದುಃಖ ತಪ್ತರಾಗಿದ್ದಾರೆ. ಮೊಬೈಲ್ ಚಾರ್ಜರ್ ಮಗುವಿನ ಜೀವ ಬಲಿ ಪಡೆದಿರುವ ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ.
ನಾಲ್ಕು ವರ್ಷದ ಅಭಿಷೇಕ ಎಂಬ ಬಾಲಕ ಮನೆಯಲ್ಲಿ ಚಾರ್ಜರ್ ವೈರ್ ಬಾಯಿಗಿಟ್ಟುಕೊಂಡು ಕಚ್ಚಿದ್ದಾನೆ. ಪರಿಣಾಮ ವಿದ್ಯುತ್ ಶಾಕ್ ನಿಂದ ತೀವ್ರ ಅಸ್ವಸ್ಥಗೊಂಡ ಮಗುವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಜಾರಿಯಾಗದೆ ಮಗು ಅಸುನೀಗಿದ ಘಟನೆ ನಡೆದಿದೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಹೀಗಾಗಿ, ಪೋಷಕರು ಮನೆಗಳಲ್ಲಿ ಮೊಬೈಲ್ ಚಾರ್ಜರ್ ಮಕ್ಕಳ ಕೈಗೆಟುಕದಂತೆ ಇರಿಸಿ ದುರ್ಘಟನೆಗಳು ಸಂಭವಿದಂತೆ ಮುಂಜಾಗೃತೆ ವಹಿಸಬೇಕಿದೆ. ಆ ಮೂಲಕ ಇಂಥ ಘಟನೆಗಳು ಮರು ಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ.