ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಲು ಆಗ್ರಹ
ಯಾದಗಿರಿ, ಶಹಾಪುರಃ ತೊಗರಿ ಖರೀದಿ ಕೇಂದ್ರಗಳನ್ನು ಸರ್ಕಾರ ಕೂಡಲೇ ಆರಂಭಿಸಬೇಕೆಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಇಲ್ಲಿನ ತಹಸೀಲ್ ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಯಲ್ಲಯ್ಯ ನಾಯಕ ವನದುರ್ಗ, ರೈತರು ಬೆಳೆದ ತೊಗರಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಅಲ್ಲದೆ ಕಳೆದ ಬಾರಿಯಂತೆ ವಿಳಂಬ ರೀತಿ ಅನುಸರಿಸದೆ ಕೂಡಲೇ ರೈತರ ಖಾತೆಗೆ ಹಣ ಜಮೆಯಾಗುವ ವ್ಯವಸ್ಥೆ ಕಲ್ಪಿಸಬೇಕು.
ಸರ್ಕಾರ ಎಲ್ಲಾ ರೈತರ ತೊಗರಿ ಖರೀದಿಸಬೇಕು. ಕಳೆದ ಎರಡು ವರ್ಷದಿಂದ ಖರೀದಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಸಾಮಾನ್ಯ ರೈತರನ್ನು ಕಡೆಗಣಿಸಲಾಗುತ್ತಿದೆ. ಬಲಾಢ್ಯ ಮತ್ತು ರಾಜಕೀಯ ಆಶೀರ್ವಾದ ಹೊಂದಿದ ರೈತರ ತೊಗರಿ ಮಾತ್ರ ಖರೀದಿಸಲಾಗುತ್ತಿದೆ.
ಬಡ ರೈತರ ತೊಗರಿ ಖರೀದಿಸುತ್ತಿಲ್ಲ. ಹೀಗಾಗಿ ಈ ಬಾರಿ ಸಮರ್ಪಕವಾಗಿ ರೈತರ ತೊಗರಿ ಖರೀದಿಸಬೇಕು. ಎಲ್ಲಾ ರೈತರ ತೊಗರಿ ಖರೀದಿಸುವ ವ್ಯವಸ್ಥೆ ಮಾಡಬೇಕೆಂದು ಅವರು ಮನವುಇ ಮಾಡಿದರು.
ಈಗಾಗಲೇ ತಾಲೂಕಿನಾದ್ಯಂತ ತೊಗರಿ ರಾಶಿ ಪ್ರಾರಂಭವಾಗಿದ್ದು, ತಕ್ಷಣದಿಂದಲೇ ತಾಲೂಕಿನ ವ್ಯವಸಾಯ ಸೇವಾ ಸಹಕಾರ ಕೇಂದ್ರಗಳಿಂದ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಆಗ್ರಹಿಸಿದರು.
ತೊಗರಿ ಖರೀದಿ ಕೇಂದ್ರ ಶೀಘ್ರದಲ್ಲಿ ಆರಂಭವಾಗಬೇಕು. ಪ್ರತಿ ಬಾರಿ ವರ್ಷಾಂತ್ಯದವರೆಗೆ ತೊಗರಿ ಖರೀದಿ ಕೇಂದ್ರ ಚಾಲನೆ ನೀಡಲಾಗುತ್ತಿದೆ. ಇದರಿಂದ ರೈತಾಪಿ ಜನರು ಬೆಳೆದ ಬೆಳಯನ್ನು ವರ್ಷದವರೆಗೂ ಕಾಯ್ದು ಹಣ ಪಡೆಯುವಂತಾಗಿದೆ. ಇದರಿಂದ ರೈತರಿಗೆ ನಷ್ಟವೇ ಆಗುತ್ತಿದೆ ಹೊರತು ಲಾಭವಿಲ್ಲ. ಕೂಡಲೇ ಕೇಂದ್ರ ಆರಂಭಿಸಿ ತೊಗರಿ ಖರೀದಿಗೆ ಮುಂದಾದಲ್ಲಿ ಒಂದಿಷ್ಟು ಹಣ ರೈತರ ಕೈ ಸೇರಲಿದೆ.
ಕಾರಣ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಣಮಂತರಾವ ಕುಲ್ಕರ್ಣಿ ಐಕೂರು, ಶಾಂತಕುಮಾರ ಹೋತಪೇಟ, ಸುಭಾಷ ತಳವಾರ, ಶಾಂತಗೌಡ ದಿಗ್ಗಿ, ಸೊಲಬಣ್ಣ ಆನೇಗುಂದಿ, ಬೈಲಪ್ಪ ದಿಗ್ಗಿ, ಸಂಗಣ್ಣ ಸಾದ್ಯಾಪುರ ಸೇರಿದಂತೆ ಇತರರಿದ್ದರು.