ಹುರಸಗುಂಡಗಿ- ಕೊರೊನಾ ಪಾಸಿಟಿವ್ LIST ಎಡವಟ್ಟು.!
ಹುರಸಗುಂಡಗಿ ಗ್ರಾಮದಲ್ಲಿ ಕೊರೊನಾತಂಕ
ಶಹಾಪುರಃ ಗ್ರಾಮದಲ್ಲಿ ವಾಸವಿರದ ಮತ್ತು ಯಾವುದೇ ಟೆಸ್ಟಿಂಗ್‍ಗೆ ಒಳಪಡದ ಇಬ್ಬರ ಹೆಸರನ್ನು ಕೊರೊನಾ ಪಾಸಿಟಿವ್ ಎಂದು ವರದಿಯಲ್ಲಿ ನಮೂದಾಗಿರುವದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದ ಘಟನೆ ಮಂಗಳವಾರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರ ಮತ್ತು ಇತರಡೆಯಿಂದ ಗ್ರಾಮಕ್ಕೆ ಆಗಮಿಸಿದ ಹಲವರಲ್ಲಿ 21 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಆದರೆ ಅಧಿಕಾರಿಗಳ ಎಡವಟ್ಟೋ ಅಥವಾ ಕೋವಿಡ್ ಟೆಸ್ಟಿಂಗ್ ರಿಪೋರ್ಟ ಮಿಸ್ಟೇಕೋ ಗೊತ್ತಿಲ್ಲ ಗ್ರಾಮದಲ್ಲಿ ವಾಸವಿರದ ಇಬ್ಬರ ಹೆಸರು ಸಮ್ಮಿಳಿತಗೊಂಡು ಒಟ್ಟು 23 ಮಂದಿಗೆ ಸೋಂಕು ದೃಢವಾದ ವರದಿ ನೀಡಿದ್ದಾರೆ.
ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು 23 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಎಲ್ಲರನ್ನು ಗುರುತಿಸಿದ್ದು, ಇನ್ನಿಬ್ಬರ ಹೆಸರಿನವರು ಎಲ್ಲಿದ್ದಾರೆ ಎಂದು ಗ್ರಾಮಸ್ಥರಲ್ಲಿ ವಿಚಾರಿಸಲಾಗಿ, ಆ ಹೆಸರಿನವರು ಗ್ರಾಮದಲ್ಲಿ ಇಲ್ಲ. ಅವರೂ ಗ್ರಾಮಕ್ಕೆ ಬಂದಿರುವದಿಲ್ಲ. ಅವರಲ್ಲಿ ಒಬ್ಬರು ಬೆಂಗಳೂರಿನಲ್ಲಿದ್ದು, ಇನ್ನೊಬ್ಬರು ಪುನಾದಲ್ಲಿದ್ದಾರೆ. ಅದ್ಹೇಗೆ ಪಾಸಿಟಿವ್ ಬಂದಿದೆ ಎಂದು ಹೆಸರು ಸೇರಿಸಲಾಗಿದೆ ಎಂದು ಗ್ರಾಮಸ್ಥರೇ ಮರು ಪ್ರಶ್ನೆ ಹಾಕಿದಾಗ ಅಧಿಕಾರಿಗಳು ದಂಗಾಗಿದ್ದಾರೆ.
ಮಂಗಳವಾರ 21 ಜನರನ್ನು ಭೀಮರಾಯನ ಗುಡಿಯಲ್ಲಿ ಸ್ಥಾಪಿಸಲಾದ ಐಸೋಲೇಷನ್ ವಾರ್ಡ್‍ಗೆ ಕರೆದೊಯ್ಯಲಾಗಿದೆ. ಇನ್ನಿಬ್ಬರ ಹೆಸರು ಪರಿಶೀಲಿಸಲಾಗಿ ಆ ಹೆಸರಿನವರು ಗ್ರಾಮದಲ್ಲಿ ವಾಸವಿರುವದಿಲ್ಲ. ಅವರು ಈ ಮೊದಲಿನಿಂದಲೂ ಬೇರಡೆ ವಾಸವಾಗಿದ್ದಾರೆ ಎಂದು ಗ್ರಾಮಸ್ಥರು ಸ್ಪಷ್ಟ ಪಡಿಸಿದ್ದಾರೆ.
ಕೊರೊನಾತಂಕಃ 21 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಖಲೆದ 15-20 ದಿನಗಳಿಂದ ಅವರೆಲ್ಲ ಗ್ರಾಮದಲ್ಲಿ ಓಡಾಟ ಮಾಡಿರುವ ಕಾರಣ ಇದೀಗ ಇಡಿ ಗ್ರಾಮ ಭೀತಿಗೊಳಗಾಗಿದೆ. ಗ್ರಾಮಸ್ಥರು ಆಯಾ ಬಡಾವಣೆಯಲ್ಲಿ ಯಾರೊಬ್ಬರು ಬಾರದಂತೆ ಎಚ್ಚರಿಕೆವಹಿಸಿದ್ದು, ಕಂಟೋನ್ಮೆಂಟ್ ಜೋನ್ ಮಾಡಿಕೊಂಡಿದ್ದಾರೆ. ಗ್ರಾಮದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಯಾರೊಬ್ಬರು ಹೊರಗಡೆ ತಿರುಗದಂತೆ ಎಚ್ಚರಿಕೆವಹಿಸಿದ್ದಾರೆ. ಮತ್ತು ಇಡಿ ಗ್ರಾಮ ಸ್ಯಾನಿಟೈಸ್ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪರೀಕ್ಷಾ ವರದಿ ನೀಡುವಲ್ಲಿ ಹೆಸರುಗಳು ತಪ್ಪು ನಮೂದಾಗಿರಬಹುದು. ಅಥವಾ ಇದರಲ್ಲಿಯೇ ಟೆಸ್ಟಿಂಗ್ ನಡೆಸುವಾಗ ಬೇರೆಯವರ ಹೆಸರನ್ನು ಬರೆಸಿದ್ದಾರೋ ಗೊತ್ತಿಲ್ಲ. ಯಾವುದಕ್ಕೂ ಪರಿಶೀಲಿಸಲಾಗುವದು. ಗ್ರಾಮದಲ್ಲಿ ಕೊರೊನಾ ಆತಂಕ ಬೇಡ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ. ಅನಗತ್ಯ ಓಡಾಟ ಬೇಡ.
-ಜಗನ್ನಾಥರಡ್ಡಿ. ತಹಶೀಲ್ದಾರ. ಶಹಾಪುರ.