ಪ್ರಮುಖ ಸುದ್ದಿ

‘ಮುಖ್ಯಮಂತ್ರಿಗಳು ನಿರಪರಾಧಿ ಎಂದು ಸಾಬೀತುಪಡಿಸಿ’- ಗೋವಿಂದ ಕಾರಜೋಳ ಸವಾಲ್‌

ಬೆಂಗಳೂರು : ಸಿದ್ದರಾಮಯ್ಯನವರು ತನಿಖೆ ಎದುರಿಸಿ ಆರೋಪಮುಕ್ತರಾಗಿ ಹೊರಬರಬೇಕು ಎಂದು ಸಂಸದ ಗೋವಿಂದ ಕಾರಜೋಳ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಮೇಲೆ ಆರೋಪ ಬಂದಾಗ ಅವರನ್ನು ಅಪರಾಧಿ ಎನ್ನುವುದಿಲ್ಲ. ನಿರಪರಾಧಿ ಎಂದು ಸಾಬೀತುಪಡಿಸುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ ಎಂದು ನುಡಿದರು.

ಅದಕ್ಕಾಗಿ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕಿತ್ತು ಎಂದರು. ಅದನ್ನು ಬಿಟ್ಟು ಸಾಂವಿಧಾನಿಕ ಹುದ್ದೆಯಲ್ಲಿರುವ, ರಾಷ್ಟ್ರಪತಿಗಳ ಪ್ರತಿನಿಧಿ ಎನಿಸಿದ ರಾಜ್ಯಪಾಲರನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಂಸ್ಕೃತಿ ಎಂಬುದು ಇದೆಯೇ ಎಂದು ಕೇಳಿದರು.

ಸಾಮಾಜಿಕ ನ್ಯಾಯದ ಗಂಧವೇ ತಿಳಿಯದವರು ಕಾಂಗ್ರೆಸ್ಸಿಗರು. ಚಪ್ಪಲಿಯಿಂದ ರಾಜ್ಯಪಾಲರ ಫೋಟೊಗೆ ಹೊಡೆದುದಲ್ಲದೆ ಅವರ ಭಾವಚಿತ್ರ ಸುಟ್ಟಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ದಲಿತ ವ್ಯಕ್ತಿ ರಾಜ್ಯಪಾಲರ ಹುದ್ದೆಯಲ್ಲಿ ಇರುವುದು ನಿಮ್ಮ ಗಮನದಲ್ಲಿಲ್ಲವೇ? ಡಾ. ಅಂಬೇಡ್ಕರರಿಗೆ ಅವಮಾನ ಮಾಡಿದ ಕಾಂಗ್ರೆಸ್ಸಿಗರಿಗೆ ಸಂಸ್ಕೃತಿ ಇರಲು ಸಾಧ್ಯವೇ ಎಂದು ಕೇಳಿದರು.

ರಾಮಕೃಷ್ಣ ಹೆಗಡೆಯವರ ಮೇಲೆ ಟೆಲಿಫೋನ್ ಕದ್ದಾಲಿಕೆ ಆರೋಪ ಬಂದಾಗ ರಾಜೀನಾಮೆ ಕೊಟ್ಟಿದ್ದರು. ಕಾಂಗ್ರೆಸ್ಸಿನವರೇ ಆದ ಲಾಲ್ ಬಹದ್ದೂರ್ ಶಾಸ್ತಿಯವರು ರೈಲ್ವೆ ಸಚಿವರಾಗಿದ್ದಾಗ ರೈಲು ಅವಘಡ ನಡೆದಿದ್ದು, ನಿಷ್ಪಕ್ಷಪಾತ ತನಿಖೆಗಾಗಿ ರಾಜೀನಾಮೆ ನೀಡಿದ್ದರು ಎಂದು ವಿವರಿಸಿದರು.

ಎಂಎಲ್‌ಸಿ ಸ್ಥಾನದಿಂದ ವಜಾ ಮಾಡಿ..

ಎಂಎಲ್‌ಸಿ ಐವಾನ್ ಡಿಸೋಜ ಅವರು ಬಾಂಗ್ಲಾದ ಪರಿಸ್ಥಿತಿ ಕರ್ನಾಟಕದಲ್ಲೂ ಬರಲಿದೆ; ರಾಜಭವನಕ್ಕೆ ನುಗ್ಗಿ ತೊಂದರೆ ಮಾಡುತ್ತೇವೆ ಎಂದಿದ್ದಾರೆ. ಐವಾನ್ ಡಿಸೋಜ ಅವರಿಗೆ ಪಾಕ್ ಉಗ್ರರ ನಂಟಿದೆಯೇ ಎಂಬ ಸಂಶಯ ನನಗೆ ಬರುತ್ತಿದೆ ಎಂದು ತಿಳಿಸಿದರು. ಅವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಂಡು ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಲು ಆಗ್ರಹಿಸಿದರು. ಎಂಎಲ್‌ಸಿ ಸ್ಥಾನದಿಂದ ವಜಾ ಮಾಡಲು ಗೋವಿಂದ ಕಾರಜೋಳ ಅವರು ಒತ್ತಾಯಿಸಿದರು.

 

Related Articles

Leave a Reply

Your email address will not be published. Required fields are marked *

Back to top button