ಅಂಕಣ

ರಂಭಾಪುರಿಶ್ರೀಗಳಿಗೆ ಶಿವಕುಮಾರ ಉಪ್ಪಿನ್ ಕೇಳಿದ 15 ಪ್ರಶ್ನೆ..? ಉತ್ತರಿಸಬೇಕೆಂದೇನು ಇಲ್ಲ..!

ಲಿಂಗಾಯತದ ಬಗ್ಗೆ ನಿಮ್ಮ 

ಹಕಿಕತ್ ಏನ್ ಹೇಳಿ

ರಂಭಾಪುರಿಶ್ರೀಗಳೇ..?

ಅಷ್ಟಕ್ಕೂ ತಿಳಿವಳಿಕೆ ಅಂದ್ರ ಏನ್ ಹೇಳಿ, ರಂಭಾಪುರಿಯವರೇ? ನೀವು ತಿಳಿವಳಿಕೆಯಿಂದ ಸಲುಹಿದ್ದರೆ ನಾವ್ಯಾಕೆ ಹಿಂಗ ಆಗುತ್ತಿದ್ದೆವು;
ಶರಣು, ಶ್ರೀ ಶ್ರೀ ಶ್ರೀ ಸಾವಿರದಾ ಎಂಟು-ವೀರ ಸಿಂಹಾಸನಾಧೀಶ್ವರ ರಂಭಾಪುರಿ ಪೀಠದ ಜಗಕೆಲ್ಲ ಗುರುಗಳೇ..
ಕ್ಷಮಿಸಿ ನಮಗಿಷ್ಟೇ ನೆನಪಿದೆ. ಇನ್ನೂ ಏನೇನೊ ವೀಶೇಷಣಗಳಿವೆ ನಿಮಗೆ. ಆದರ ನಮಗ ನೆನಪಾಗ್ತಿಲ್ಲ. ಯಾಕಂದ್ರ ನಮಗ ತಿಳಿವಳಿಕೆ ಕಮ್ಮಿ ಅದಾ. ಜರ ನಿಮಗ ಭೆಟ್ಟಿ ಆಗೋದದ ಲಿಂಗಾಯತ ಅಂದ್ರ ಏನು, ಮತ್ತ ವೀರಶೈವ ಅಂದ್ರ ಏನಂತ ಸಣ್ಣವರಾದ ನಮಗ ತಿಳಿಸಿ ಹೇಳುವಂತ್ರಿ. ನಿಮ್ಮಲ್ಲಿ ದಾಖಲೆಗಳಿವೆ. ಕೋರ್ಟಿನ ಪ್ಯಾಟುಣಿಗಿ (ಮೆಟ್ಟಲು) ಏರ್ತೀರಿ, ಸಚಿವ ಎಂ.ಬಿ.ಪಾಟೀಲರಿಗೆ ತಿಳಿವಳಿಕೆ ಇಲ್ಲ, ‘ಅವರು ಹೇಳಿದರ ಧರ್ಮ ಆಗ್ತದ ಏನ್’ ಅಂತ ನಮ್ಮ ಜಿಲ್ಲೆಗೆ ಬಂದು ನೀವು ಅಂದದ್ದು ಕೇಳಿ, ಟಿವ್ಯಾಗ ನೋಡಿ ಗಾಬರಿ ಆಯ್ತು. ಇರೋ ಹಕೀಕತ್ತರೇ ಏನದ ಅಂತ ಪೂಜ್ಯರಾದ ತಮ್ಮಲ್ಲಿ ಕೇಳಮು ಅನಸ್ತು. ಅದಕ ಮಾತಾಡ್ತಿದೀವಿ..
ನಮ್ಮ ಪ್ರಶ್ನೆ ಹೀಗಿವೆ; ಉತ್ತರಿಸಿ..

೧. ಪಾಟೀಲರಿಗಿಂತ ಮತ್ತು ‘ಲಿಂಗಾಯತ ಚಳವಳಿಯ’ ಹೋರಾಟಗಾರರಿಗಿಂತಲೂ ನಿಮ್ಮ ತಿಳಿವಳಿಕೆ ಎಷ್ಟು ಹೆಚ್ಚಿಗೆ ಇಟ್ಟುಕೊಂಡು ಬಸವಾದಿ ಶರಣರನ್ನು ಜಗತ್ತಿಗೆ ಪರಿಚಯಿಸಲು ಇಲ್ಲಿಯ ತನಕ ‘ಏನೇನು’ ಮಾಡಿದ್ದೀರಿ?

೨. ನಿಮ್ಮ ಪ್ರಕಾರವೇ ವೀರಶೈವದಿಂದ ಲಿಂಗಾಯತ ಮತ್ತು ಅದನ್ನು ಬಸವಣ್ಣನೇ ‘ಉದ್ಧಾರ’ ಮಾಡಿದರು ಅಂತಲೇ ಇಟ್ಟುಕೊಳ್ಳೋಣ. ಉದ್ಧಾರವಾದ ವೀರಶೈವ ಲಿಂಗಾಯತವನ್ನು ಒಪ್ಪಿಕೊಳ್ಳುವಿರೋ ಅಥವಾ ಮೊದಲಿನದೇ? ಯಾಕೆಂದರೆ, ಬಸವಣ್ಣ ಉದ್ಧರಿಸಿದ ಧರ್ಮದ ಯಾವ ಲಕ್ಷಣಗಳೂ ನಿಮ್ಮ ಆಚರಣೆಯಲ್ಲಿ ಇಲ್ಲ. ಹಾಗಾದರೆ ಕೋರ್ಟಿಗೆ ಏನಂತ ಹೇಳ್ತೀರಿ?

೩. ವೀರಶೈವ ಮೊದಲೇ ಇತ್ತು ಅಂತ ನಾವೂ ಒಪ್ಪಿಕೊಳ್ಳುತ್ತೇವೆ. ‘ಶ್ರೇಷ್ಠ’ ಶೈವ ಬ್ರಾಹ್ಮಣನಾಗಿದ್ದ ಬಸವಣ್ಣ ಅದು ಬೇಡವೆನಿಸಿ, ‘ಬರೀ ಶೈವ’ವಾದರೂ ಸರಿ ಇದೆ ಏನೊ ನೋಡೋಣ ಅಂತ ಆಕರ್ಷಿತರಾದದ್ದು, ನಂತರ ಇಲ್ಲೂ ‘ಅಂತರ’ಗಳ ಅಂತರ ಗಂಗೆ ಗಮನಿಸಿ ಬೇರೆ ದಾರಿ ನಡೆದದ್ದನ್ನೇ ನೀವು ವೀರಶೈವ ಧರ್ಮೋದ್ಧಾರ ಅಂತ ಅನ್ನುತ್ತೀರಾದರೆ ಒಪ್ಪೋಣ. ಆದರೆ, ಪುರಾಣದ ರೇಣುಕರ ಬಗ್ಗೆ ಏನು ದಾಖಲೆ ಒದಗಿಸುತ್ತೀರಿ..?

೪. ನೀವು ಭಕ್ತರ ಪರವೋ ಅಥಾವಾ ನಿಮಗನಿಸಿದ್ದೇ ಸರಿ ಎಂದು ವಾದಿಸುತ್ತ ಲಕ್ಷ ಲಕ್ಷ ಜನಗಳ ಭಾವನೆಗಳ ಜತೆಗೆ ಆಟ ಆಡುತ್ತ ಹಿಂಸಿಸುವುದೇ ಧರ್ಮ ಅಂತ ನಮಗೆ ಬೋಧಿಸುತ್ತಿದ್ದೀರೊ?

೫. ಭಕ್ತರಿಗೆ ಇಲ್ಲದ ತಿಳಿವಳಿಕೆ, ಅರಿವನ್ನು ನೀವು ಕೊಡಬೇಕೊ ಅಥವಾ ಅವರಿಗೆ ಅದಿಲ್ಲ ಅಂತ ಕುಹಕದ ಮಾತಾಡಿ ಹೀಯಾಳಿಸಬೇಕೊ?

೬. ಎಂ.ಬಿ.ಪಾಟೀಲರು ನಿಮ್ಮ ದೃಷ್ಡಿಯಲ್ಲಿ ಸರಿ ಇಲ್ಲ ಬಿಡಿ. ಯಾವ ರಾಜಕಾರಣಿಯೂ ಮಾತನಾಡದಷ್ಟು ಅವರು ಬಸವಣ್ಣ, ಶರಣರ ಬಗ್ಗೆ ದಿನಾ ನಿದ್ದೆಗೆಟ್ಟು ಓದಿ, ತಿಳಿದು ಎಲ್ಲೆಡೆ ಮಾತಾಡುತ್ತಿದ್ದಾರೆ. ಪಾಪ ಅವರಿಗೆ ತಿಳಿವಳಿಕೆ ಇಲ್ಲ. ನಮ್ಮ ಸಲುವಾಗಿಯಾದ್ರೂ ನೀವೊಂಜರ ಬದಲಾದ್ರಾ? ಲಿಂಗಾಯತರನ್ನು ಬರೀ ಓಟು, ದಕ್ಷಿಣಾ ನೀಡುವ ಭಕ್ತರು ಅಂತ ಇಷ್ಟು ದಿನ ತಿಳಿದವರ ಮಧ್ಯೆ ನೀವೂ ಇದ್ದೀರಿ. ಹಾಗಂತ ನಿಮಗೆ ಇಲ್ಲಿಯವರೆಗೆ ಅನ್ನಿಸಿಲ್ಲವೇ? ಅವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತಲು ನೀವೆಲ್ಲ ಯಾವ ಯಾವ ಕಾರ್ಯಕ್ರಮ ಹಾಕಿಕೊಂಡು ಸಾಕಾರಗೊಳಿಸಿದ್ದೀರಿ? ಸರಕಾರಕ್ಕೆ ಎಷ್ಟು ಪತ್ರ ಬರೆದಿದ್ದೀರಿ? ಅವರೊಂದಿಗೆ ಕೈ ಜೋಡಿಸಿ, ನಮ್ಮ ಹಳ್ಳಿಯ ಹೆಣ್ಣುಮಕ್ಕಳಿಗೆ ಪಾಯಖಾನೆಗಳನ್ನು ಕಟ್ಟಿಕೊಟ್ಟು ಅವರ ಹಿಂಸೆಯನ್ನು ತಪ್ಪಿಸಿದ್ದೀರಿ? ವಿವರಿಸಿ ಮತ್ತು ಕೋರ್ಟಿಗೂ ದಾಖಲೆ ಕೊಡಿ.

೭. ನಮಗೆ ಬದುಕು, ಮಕ್ಕಳ ಭವಿಷ್ಯ, ಅರಿವು, ತಿಳಿವಳಿಕೆ ಬೇಕು. ಕೊಡ್ತೀರಾ?

೮. ಈಗಾಗಲೇ ಎಷ್ಟು ಸಲ ವೀರಶೈವದ ಅರ್ಜಿ ತಿರಸ್ಕರಿಸಲಾಗಿದೆ. ಆದರೂ ಆ ಒಂದು ‘ಪದ’ವೇ ಯಾಕೆ ಬೇಕು ನಿಮಗೆ? ಬೇರೆಯವರು ಬೇರೆ ಹೋದರೂ ನೀವು ವೀರಶೈವ, ಲಿಂಗಾಯತ ಅಂತಲೇ ಇರಿ. ಯಾರು ಬೇಡ ಅಂದವರು?

೯. ವೀರಶೈವ-ಲಿಂಗಾಯತ ನಿನ್ನೆ ಉಳಿದ ವಗ್ಗರಣೆ ಸೇರಿಸಿದ ‘ಗಿರ್ಮಿಟ್’ ಆಗಿ ವಿಚಾರಗಳ ಅಪಚೀನ ಸೃಷ್ಟಿಸುತ್ತದೆಯೇ ಹೊರತು ಹೊಟ್ಟೆ ತುಂಬಿಸುವ, ಉಂಡ ಮೇಲೆ ಹಿತದ ಗಟ್ಟಿಯಾದ ‘ಬಿಸಿ ರೊಟ್ಟಿ’ಯಾಗಲ್ಲ. ಆದರೂ ಯಾಕೆ ಬೇಕು ನಿಮಗೆ ವೀರಶೈವ? ನಮ್ಮ ತಿಳಿವಳಿಕೆ ಕೆಡಿಸಲಾ?

೧೦. ನೀವಷ್ಟೇ ತಿಳಿದದ್ದು ಸತ್ಯ, ಭಕ್ತರಿಗೆ ಮೆದುಳೇ ಇಲ್ಲ ಅಂತ ನೀವು ತಿಳಿದು ಇಲ್ಲಿಯ ತನಕ ಅದನ್ನೇ ಬೋಧಿಸುತ್ತಿದ್ದೀರಿ ಅಂತ ನಮಗೆ ಅನ್ನಿಸಿದೆ. ಇದನ್ನು ಹ್ಯಾಗೆ ನಮ್ಮ ಮನಸ್ಸಿನಿಂದ ತೆಗೆದುಹಾಕುತ್ತೀರಿ ಪೂಜ್ಯರೇ? ಹೇಳಿ.

೧೧. ಈಗಲೂ, ಇಷ್ಟು ನಮಗೆ ಕಾಡಿದರೂ ನಿಮ್ಮನ್ನು ಪೂಜ್ಯರೇ, ಜಗದ್ಗುರುವೇ ಅಂತಲೇ ಅನ್ನುತ್ತಿದ್ದೇವೆ. ಈ ಗೌರವಕ್ಕೆ ತಕ್ಕುದಾಗಿ ನಮ್ಮನ್ನೂ ನೀವು ಎಂದಾದರೂ ಗೌರವಿಸಿದ್ದೀರಾ? ನಮ್ಮ ಹೆಗಲ ಮೇಲೆ ಪ್ರೀತಿಯಿಂದ ಕೈ ಸವರಿದ್ದೀರಾ?

೧೨. ಸರಿ ದಾರಿಯಲ್ಲಿ ನಡೆಸುವುದು ಗುರುವಿನ ಕರ್ತವ್ಯ. ಆದರೆ, ಸರಿ ದಾರಿಯಲ್ಲಿ ನಡೆಯುತ್ತೀವಿ ಎಂದರೂ ಐದೈದು ಮಂದಿ ಕೂಡಿ ಎಷ್ಟೋ ವರ್ಷಗಳಿಂದ ತೊಡರುಗಾಲು ಹಾಕುತ್ತಲೇ ಇದ್ದೀರಲ್ಲ? ಯಾಕೆ? ನಮ್ಮನ್ನು ಏನು ತಿಳಿದಿದ್ದೀರಿ?

೧೩. ಬದುಕು ಚಲನಶೀಲ ಶಕ್ತಿ. ನಿರಂತರ ಬದಲಾವಣೆಗೆ ನಮ್ಮನ್ನು, ನಮ್ಮ ಪೂರ್ವಜರನ್ನು, ಹಳ್ಳಿಯ ಮುಗ್ಧರನ್ನು ತೆರೆದುಕೊಳ್ಳಲು ಬಿಡದೇ ಹಿಂದೆ ಹಿಂದೆ ಮತ್ತೆ ಈಗಲೂ ಹಿಂದೆಯೇ ಜಗ್ಗುತ್ತಿದ್ದೀರಲ್ಲ ಗುರುಗಳೇ? ಇದು ನ್ಯಾಯವೇ? ನೀತಿಯೇ? ಒಬ್ಬರೇ ಕುಂತಾಗ ಯೋಚಿಸಿ. ನಿಮ್ಮ ಅಂತರಾತ್ಮ ಏನು ಹೇಳುತ್ತದೆ, ಅದೇ ನಮಗೆ ಹೇಳಿ!

೧೪. ನೀವು ಶ್ರೀಗಳಾದರೆ, ನಾವು ‘ಶ್ರೀ’ಸಾಮಾನ್ಯರು! ಇದು ಪ್ರಜಾಪ್ರಭುತ್ವ. ನಮ್ಮನ್ನೂ ಜರ ಮನುಷ್ಯರೆಂದು ಕಾಣುವಿರಾ?

೧೫. ಲಿಂಗಾಯತ ಅಂದರೆ ಬೇರೆನೂ ಅಲ್ಲ. ಅದು ‘ಮನುಷತ್ವ’. ಅದನ್ನೇ ನೀವು ವಿರೋಧಿಸುತ್ತಿದ್ದೀರಿ ಅಂತ ನಿಮಗೆ ಈವರೆಗೂ ಅನ್ನಿಸಲೇ ಇಲ್ಲವಾ ಸ್ವಾಮಿಗಳೇ?

ಬಿನ್ನಹ;
ಇವಕ್ಕೆಲ್ಲ ನೀವು ಉತ್ತರ ಕೊಡಲೇ ಬೇಕು ಅಂತಲೂ ಇಲ್ಲ. ನಡೆಯುತ್ತದೆ. ಆದರೆ, ನಮ್ಮ ತಿಳಿವಳಿಕೆಯನ್ನು ಕೆದಕಿದ್ದಕ್ಕೆ ಇಷ್ಟೆಲ್ಲ ತಲೆಯೊಳಗಿದ್ದ ಸಂಶಯಗಳನ್ನು ಹೊರಹಾಕಬೇಕಾಯಿತು.
ನೀವೂ ನಮ್ಮ ಹಾಗೇ ಮನುಷ್ಯರೇ (ಗುರುಗಳು ಬೇರೆ) ಆದ್ದರಿಂದ ನಿಮ್ಮ ಬಗ್ಗೆ ಅಪಾರ ಗೌರವ, ಪ್ರೀತಿ ಇದೆ. ಮಾನವತ್ವವನ್ನು ನಾವು ಬಯಸುವವರು. ಬಸವಣ್ಣನನ್ನು, ಬುದ್ಧನನ್ನು, ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ಬಯಸುವವರು. ನಮಗೆ ತಿಳಿವಳಿಕೆ ಕಡಿಮೆ ಇರಬಹುದು, ಆದರೆ ಸಕಲರಿಗೆ ಲೇಸನ್ನೇ ಬಯಸುವ ಮನಸ್ಸಿನವರು. ಕೊನೆಗೊಂದು ಹೇಳುವೆ;
ನಾನು ಎಂ.ಬಿ.ಪಾಟೀರನ್ನು ಸಮರ್ಥಿಸಿ ಇದೆಲ್ಲ ಬರೆಯುತ್ತಿಲ್ಲ. ಮಂತ್ರಿಗಳೂ ಸೇರಿದಂತೆ ನಾವೆಲ್ಲ ಶರಣರ ದಾರಿ ಬಯಸಿದವರು. ಸಣ್ಣವನಾದ ನನ್ನನ್ನು ಕ್ಷಮಿಸಿ. ನಮ್ಮನ್ನು ಇನ್ನಾದರೂ ಪ್ರೇಮದಿಂದ ಕಾಣಿ. ಒಮ್ಮೆ ನಿಮ್ಮನ್ನು ಭೇಟಿಯಾಗಿ ಗುಲಾಬಿ ಹೂವೊಂದನ್ನು ನೀಡಿ, ಸಕಲ ಜೀವಿಗಳ ದಾರಿಗೆ ಬನ್ನಿ ಎಂದು ನಿಮ್ಮನ್ನು ಕರೆವೆ. ಬರುತ್ತೀರಿ ಎಂದು ನಂಬಿಯೂ ಇದ್ದೇನೆ.

ಶಿವಕುಮಾರ ಉಪ್ಪಿನ್, ಬರಹಗಾರ-ಪತ್ರಕರ್ತ.

Related Articles

2 Comments

  1. ಪಂಚಾರ್ಯರೆ ತಮಗೆ ಕೆವಲ ವೀರಶೈವ ಎಂಬ ಶಬ್ದ ಸಾಕಲ್ಲವೆ, ಎಕೆಂದರೆ ತಾವು ವೀರಶೈವ ರಲ್ಲವೆ. ಮತ್ತೆ ಯಾಕೆ ವೀರಶೈವ ದ ಜೊಡಿ ಲಿಂಗಾಯತ ಎಂದು ಸೆರಿಸಿಕೊಳ್ಳುತ್ತಿರಿ ದಯಮಾಡಿ ತಿಳಿಸುವಿರಾ?.

  2. Swartha buddiya jagadgurugalu kevala thamma aisharami jivanakke maruhogiddare sharanare . Avarige lingayath darma adare samaja uddaravaguthade , janaru sharanara vachanagalannu thilidu namma acharanege dakke tharuthare antha baya anisuthe sharanare.

Leave a Reply

Your email address will not be published. Required fields are marked *

Back to top button