ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರಿಂದ ರಸ್ತೆ ತಡೆ
ಸಮರ್ಪಕ ತೊಗರಿ ಖರೀದಿಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ
ಯಾದಗಿರಿಃ ಸಮರ್ಪಕ ತೊಗರಿ ಖರೀದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗೂಡೂರ ಸಮೀಪದ ದೇವದುರ್ಗ ಕ್ರಾಸ್ ಬಳಿ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ದವತಿಯಿಂದ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರಗಳಿಗೆ ಪುನಾರಂಭ ನೀಡಬೇಕು. ಪ್ರತಿ ಪಹಣಿಗೆ 20 ಕ್ವಿಂಟಲ್ ತೊಗರಿ ಖರೀದಿಸಬೇಕು. ಕೇವಲ 10 ಕ್ವಿಂಟಲ್ ತೊಗರಿ ಖರೀದಿಸುವದರಿಂದ ರೈತರಿಗೆ ಯಾವುದೆ ಅನುಕೂಲವಾಗುತ್ತಿಲ್ಲ. ಅಲ್ಲದೆ ಈಗಾಗಲೇ ರೈತರು ನೋಂದಣಿ ಮಾಡಿಸಿದ ತೊಗರಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ ನಾಲ್ಕು ವರ್ಷದಿಂದ ಬರಗಾಲದಿಂದ ರೈತಾಪಿ ಜನರು ತತ್ತರಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ರೈತರು ಸಾಲ ಸೂಲ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಅಥಾಟ್ಟನೇ ತೊಗರಿ ಖರೀದಿ ಕೇಂದ್ರ ಸ್ಥಗಿತಗೊಳಿಸಿರುವುದು ಸರಿಯಲ್ಲ. ಮೊದಲೇ ನಷ್ಟದಲ್ಲಿ ಮುಳುಗಿದ್ದ ರೈತರು ಇನ್ನಷ್ಟು ಸಂಕಷ್ಟ ಎದುರಿಸುವಂತಾಗಿದೆ. ಮತ್ತು ಜಿಲ್ಲೆಯ ಕೊನೆಯ ಭಾಗದ ಜಮೀನಿಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು.
ಕೊಂಗಂಡಿ ಗ್ರಾಮದಿಂದ ಕೃಷ್ಣಾ ನದಿಗೆ ಹೊಂದಿಕೊಂಡಿರುವ ಡಿ-9 ಕಾಲುವೆ ದುರಸ್ತಿಗೊಳಿಸಬೇಕು. ಅಲ್ಲದೆ ಸೀಪೇಜ್ ನೀರನ್ನು ನದಿಗೆ ತಲುಪುವವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕೊಂಗಂಡಿ ಏತ ನೀರಾವರಿ ಸದರಿ ಕಾಲುವೆಗಳಿಗೆ ನೀರು ಹರಿಸಬೇಕು.
ಮತ್ತು ರಾಜ್ಯವನ್ನು ಮಧ್ಯಮುಕ್ತ ಕರ್ನಾಟಕ ರಾಜ್ಯವನ್ನಾಗಿ ಮಾಡಬೇಕು. ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು. ಮುಖ್ಯವಾಗಿ ಈ ಬಾರಿ ಏಪ್ರಿಲ್ 10 ರವೆಗೆ ಕಾಲವೆಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಡಾ ಮಾರ್ಟೀನ್ ಮಾತನಾಡಿ, ರೈತರ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಅಲ್ಲದೆ ಕೂಡಲೇ ಈಡೇರಿಸುವಂತೆ ತಿಳಿಸಲಾಗುವುದು ಎಂದು ಭರವಸೇ ನೀಡಿದರು.
ಸ್ಥಳದಲ್ಲಿದ್ದ ತಹಸೀಲ್ದಾರ ಸೋಮಶೇಖರ ಅರಳಗುಂಡಗಿ ರೈತರಿಂದ ಮನವಿ ಪತ್ರ ಸ್ವೀಕರಿಸಿ, ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ನಾಗರತ್ನ ಪಾಟೀಲ್ ಯಕ್ಷಿಂತಿ, ಮಹಾದೇವಿ ಬೇವಿನಾಳಮಠ, ಅಯ್ಯಣ್ಣ ಹಾಲಬಾವಿ, ವಿಶ್ವನಾಥ ಗೊಂದೆಡಿಗಿ, ಹಣಮಂತ ಕೊಂಗಂಡಿ, ದೇವಿಂದ್ರಪ್ಪಗೌಡ ಮಾಲಗತ್ತಿ, ಹಣಮಂತ್ರಾಯ ಮಡಿವಾಳರ, ಮಲ್ಕಣ್ಣ ಚಿಂತಿ, ಬುಚ್ಚಪ್ಪ ನಾಯಕ, ಬಸವರಾಜ ಕಮತಗಿ, ಶರಣು ಮಂದ್ರವಾಡ, ಬಸವರಾಜಪ್ಪಗೌಡ ಹೆಮ್ಮಡಗಿ, ಬಸವರಾಜ ಕೊಡಗನೂರ ಸೇರಿದಂತೆ ಇತರರು ಭಾಗವಹಿಸಿದ್ದರು.