ರಸ್ತೆ ಅಪಘಾತ ಬೈಕ್ ಸವಾರ ಸಾವು
ಮಗಳ ಮನೆಗೆ ಬಂದಿದ್ದ ತಂದೆ ಅಪಘಾತದಲ್ಲಿ ಸಾವು
ಯಾದಗಿರಿಃ ಮಗಳ ಮನೆಗೆ ಬಂದಿದ್ದ, ಮತ್ತು ಸಮೀಪದ ಜೇವರ್ಗಿಯಲ್ಲಿ ವಾಸವಿದ್ದ ಸಂಬಂಧಿಕರನ್ನು ಭೇಟಿಯಾಗಲು ಬೈಕ್ ಮೇಲೆ ಹೊರಟಿದ್ದ ಸವಾರನ್ನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಹಾಪುರ ನಗರದ ಹೊರವಲಯದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಬೋರಿಕಾ ತಂದೆ ಲಕ್ಷ್ಮಣ ಬೋವಿ(45) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಈತ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಇಲ್ಲಿನ ತನ್ನ ಮಗಳ ಮನೆಗೆ ಬಂದಿದ್ದ ಎನ್ನಲಾಗಿದೆ. ಈತ ಮಹಾರಾಷ್ಟ್ರದ ಸೋಲಾಪುರ ತಾಲೂಕಿನ ಮಿರಿಗಿ ಗ್ರಾಮ ನಿವಾಸಿಯಾಗಿದ್ದಾನೆ.
ಶಹಾಪುರದಲ್ಲಿರುವ ತಮ್ಮ ಮಗಳ ಮನೆಗೆ ಬಂದಿದ್ದ ಎನ್ನಲಾಗಿದೆ. ಅಲ್ಲದೆ ಸಮೀಪದ ಜೇವರ್ಗಿಯಲ್ಲಿರುವ ತಮ್ಮ ಸಂಬಂಧಿಕರನ್ನು ಕಾಣಲು ಬೈಕ್ ಮೇಲೆ ಹೊರಟಿದ್ದಾಗ ಭೀಮರಾಯನ ಗುಡಿ ಮಾರ್ಗದಲ್ಲಿ ಅಲ್ಲಮ ಪ್ರಭು ಪೆಟ್ರೋಲ್ ಬಂಕ್ ಹತ್ತಿರ ಹಿಂಬದಿಯಿಂದ ಬಂದ ಕಾರವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಆದರೆ ಡಿಕ್ಕಿ ಹೊಡೆದ ಚಾಲಕ ತನ್ನ ಕಾರ್ ಸಮೇತ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ.
ಅಪಘಾತ ಕುರಿತು ಅಲ್ಲಿನ ಬಂಕ್ ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ದೃಶ್ಯಾವಳಿ ಸೆರೆಯಾಗಿದ್ದು, ಪೊಲೀಸರು ಸಿಸಿ ಕ್ಯಾಮೆರಾ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.