ಗುತ್ತೇದಾರ ಬಿಜೆಪಿ ಹೈಕಮಾಂಡ್ ಗೆ ವಾರ್ನಿಂಗ್ ಮಾಡಲಿ – ಪ್ರಿಯಾಂಕ್ ಖರ್ಗೆ
ಕೊರೊನಾ ನಿಯಂತ್ರಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಪ್ರಿಯಾಂಕ್ ಆಗ್ರಹ
ಕಲಬುರಗಿಃ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಗರದ ಎರಡು ಟೆಸ್ಟಿಂಗ್ ಕೇಂದ್ರಗಳಿಂದ ಮಾದರಿ ಪರೀಕ್ಷೆ ವರದಿಗಳು ತಕ್ಷಣಕ್ಕೆ ಲಭ್ಯವಾಗುತ್ತಿಲ್ಲ.
ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಜನರು ಕೊರೋನಾ ಕಡಿಮೆಯಾಗಿದೆ ಎಂದೇ ಭಾವಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ 2.9 % ಇದೆ ಎಂದು ಹೇಳಲಾಗುತ್ತಿದೆ. ಹೋಂ ಕ್ವಾರೆಂಟೆನ್ ಬಗ್ಗೆ ಯಾವುದೇ ನಿಯಮಾವಳಿಗಳು ಇಲ್ಲ.ಯೂ ರೋಪ್ ರಾಷ್ಟ್ರಗಳಲ್ಲಿ ಎರಡನೆಯ ಹಂತದ ಕೊರೋನಾ ಬಂದಿದೆ. ದಿಲ್ಲಿಯಲ್ಲಿ ಕೂಡಾ ಮತ್ತೆ ಪ್ರಾರಂಭವಾಗಿದೆ.
ಇಷ್ಟೆಲ್ಲ ಉದಾಹರಣೆ ಇರುವಾಗ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಮುಂಜಾಗುರೂಕತೆ ತೆಗೆದೆಕೊಂಡಿಲ್ಲ ಎಂದು ದೂರಿದರು. ಸಚಿವರು ಸದನದಲ್ಲಿ ಕೊಡುವ ಉತ್ತರಕ್ಕೂ ವಾಸ್ತವಕ್ಕೂ ವ್ಯತ್ಯಾಸವಿದೆ. ಕೇಂದ್ರ ಸರಕಾರ ನೀಡಿರುವ ಕಟ್ಟುನಿಟ್ಟಿನ ಕ್ರಮಗಳನ್ನು ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಜಾರಿಗೆ ತರಲಾಗಿದೆ.?
ಕೇಂದ್ರ ಸರಕಾರ ನಿರ್ದೇಶನದ ಪ್ರಕಾರ ಟೆಸ್ಟಿಂಗ್ ಕೇಂದ್ರಗಳನ್ನು ಹೆಚ್ಚು ಮಾಡಬೇಕು. ಆದರೆ ಇಲ್ಲಿ ಎಷ್ಟು ಹೆಚ್ಚುವರಿ ಸ್ಥಾಪಿಸಲಾಗಿದೆ. ಕಲಬುರಗಿ ಯಲ್ಲಿ ಸಧ್ಯ ಇರುವ ಕೇಂದ್ರಗಳೇ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದರಿ ಸಂಗ್ರಹ ಮಾಡಿದ 24 ಗಂಟೆಯಲ್ಲೇ ವರದಿ ನೀಡಬೇಕು. ಆದರೆ, ಕಲಬುರಗಿ ಯಲ್ಲಿ ದಿನಗಳು ಕಳೆದರೂ ವರದಿ ಬರುತ್ತಿಲ್ಲ.
ಸಮುದಾಯ ತಿಳುವಳಿಕೆ ಕ್ರಮಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಇತ್ಯಾದಿ ಜಾರಿಗೆ ತರಲಾಗಿಲ್ಲ. ಸ್ಥಳೀಯ ಆಡಳಿತ ಈ ಕುರಿತು ಯಾವ ಕ್ರಮ ಕೈಗೊಂಡಿದೆ.? ಎಂದು ಪ್ರಶ್ನಿಸಿದರು.
ಕಳೆದ ಹತ್ತು ತಿಂಗಳಿಂದ ಕಾಲೇಜುಗಳು ಬಂದ್ ಆಗಿವೆ. ಈಗ ಸರಕಾರ ಪುನಾರಂಭಕ್ಕೆ ತಯಾರಿ ನಡೆಸಿದೆ. ಈ ಕುರಿತು ಒಂದು ಸ್ಪಷ್ಟ ನೀಲ ನಕ್ಷೆ ತಯಾರಾಗಿಲ್ಲ. ಸರಕಾರದ ವಿದ್ಯಾಗಮ ಕಾರ್ಯಕ್ರಮದಿಂದಾಗಿ ಶಿಕ್ಷಕರಿಗೆ ಮಕ್ಕಳಿಗೆ ಕೊರೋನಾ ಸೋಂಕು ತಗುಲಿದೆ. ಕೆಲ ಶಿಕ್ಷಕರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಎಷ್ಟು ಜನಕ್ಕೆ ಪರಿಹಾರ ನೀಡಲಾಗಿದೆ.? ಶಿಕ್ಷಕರನ್ನು ಅಪಾಯದ ಅಂಚಿಗೆ ದೂಡಿ ನೀವು ವಿಧಾನಸೌಧದ ಹವಾನಿಯಂತ್ರಿತ ಕೋಣೆಯಲ್ಲಿ ಇರುವುದು ಯಾವ ನ್ಯಾಯ? ಶಿಕ್ಷಕರನ್ನೇಕೆ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿಲ್ಲ.? ಎಂದು ಕಿಡಿಕಾರಿದರು.
ವಿದ್ಯಾರ್ಥಿಗಳು ಆರ್ ಟಿ ಪಿ ಸಿ ಆರ್ ನೆಗೆಟಿವ್ ವರದಿ ತರುವಂತೆ ಹೇಳಲಾಗುತ್ತದೆ. ವಿದ್ಯಾರ್ಥಿಗಳು ಎಷ್ಟು ಸಲ ತರಬೇಕು. ರಜೆಗೆಂದು ಬೇರೆ ಊರಿಗೆ ಹೋದವರು ಎಷ್ಟು ಸಲ ವರದಿ ತರಬೇಕು? ಹಾಸ್ಟೆಲ್ ನಲ್ಲಿ ವಾಸಿಸುವ ವಿದ್ಯಾರ್ಥಿಗಳ ಸ್ಥಿತಿ ಹೇಗೆ?
20 – 25 ಸಾವಿರ ವಿದ್ಯಾರ್ಥಿಗಳು ಹಾಗೂ 5 ಸಾವಿರ ಭೋದಕ ಹಾಗೂ ಇತರೆ ಸಿಬ್ಬಂದಿಗಳು ಮಾದರಿ ಪರೀಕ್ಚೆಗೆ ಎಲ್ಲಿ ಹೋಗಬೇಕು? ಕಲಬುರಗಿ ಜಿಲ್ಲೆಯಲ್ಲಿ ಇರುವ 16 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿಲ್ಲ.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇಲ್ಲೇ ಮಾದರಿ ಕೊಡಬೇಕಾಗಿದೆ. ಜಿಲ್ಲೆಯ ಎಲ್ಲ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಿಮ್ಸ್ ಗೆ ಹೋಗಬೇಕು. ಆದರೆ ಚಿಂಚೋಳಿ ಮಾತ್ರ ಇ ಎಸ್ ಐ ಸಿಗೆ ಹೋಗಬೇಕಂತೆ. ಆದೇಕೆ.? ಚಿಂಚೋಳಿ ತಾಲೂಕಿನವರು ಮಾತ್ರ ಅಲ್ಲಿಗೆ ಹೋಗಬೇಕು? ಯಾಕೆ ಈ ತಾರತಮ್ಯ?
ಅಲ್ಲದೆ ವಿದ್ಯಾರ್ಥಿಗಳ ಜೀವದ ಜೊತೆ ಚಲ್ಲಾಟವಾಡದೇ ಸರಕಾರ ಈ ಕುರಿತು ಕ್ರಮಗಳನ್ನು ಕೈಗೊಂಡು ನಿಯಮಾವಳಿಗಳನ್ನು ರೂಪಿಸಬೇಕು.
ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಕಾರಣ, ಸರಕಾರದ ಮಟ್ಟದಲ್ಲಿ ಜಿಲ್ಲೆಯ ಜವಾಬ್ದಾರಿ ಹೊರುವವರು ಯಾರು ಇಲ್ಲ. ಎಲ್ಲರೂ ವರ್ಗಾವಣೆ ದಂದೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಪಿಸಿಯಿಂದ ಡಿಸಿಯವರೆಗೆ ಎಲ್ಲರೂ ಫಿಕ್ಸ್ ಮಾಡಿಕೊಂಡಿದ್ದಾರೆ. ಇಲ್ಲಿ ಎಲ್ಲವೂ ವ್ಯವಹಾರವಾಗಿದೆ. ದುಡ್ಡುಕೊಟ್ಟು ಬರುವ ಅಧಿಕಾರಿಗಳು ಅಭಿವೃದ್ದಿ ಕೆಲಸ ಮಾಡದೇ ಭ್ರಷ್ಟಚಾರದಲ್ಲಿ ತೊಡಗಿದ್ದಾರೆ.
ನಮ್ಮ ಆಡಳಿತಾವಧಿಯನ್ನು ಗಮನಿಸಿದಾಗ ಬಿಜೆಪಿ ಸರಕಾರ ಆಡಳಿತ ಬಂದ ಮೇಲೆ ಕ್ರೈಮ್ ರೇಟ್ ದುಪ್ಪಟ್ಟಾಗಿದೆ. ಕೊಲೆ, ಕೊಲೆಯತ್ನ, ದರೋಡೆ, ಸರಗಳ್ಳತನ, ಮನೆಕಳ್ಳತನ, ಅತ್ಯಾಚಾರ, ಮಕ್ಕಳ ಮೇಲಿನ ಹಿಂಸೆ, ಜೂಜು ಮುಂತಾದ ಕ್ರೈಮ್ ಗಳು ಹಾಗೂ ಗಾಂಜಾ ಸಾಗಾಣಿಕೆಯಂತ ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ.
ಹೊರಜಿಲ್ಲೆ, ಹೊರರಾಜ್ಯದ ಪೊಲೀಸರು ಕಲಬುರಗಿ ಗೆ ಬಂದು ಅಕ್ರಮ ಚಟುವಟಿಕೆಗಳ ಮೇಲೆ ರೈಡ್ ಮಾಡುತ್ತಿದ್ದಾರೆ. ಹಾಗೆ ಮಾಡುವಾಗ ಸ್ಥಳೀಯ ಆಡಳಿತದ ಹಾಗೂ ಪೊಲೀಸರ ಗಮನಕ್ಕೆ ತರದೆ ಮಾಡುತ್ತಿರುವುದು ಗಮನಿಸಿದರೆ ಸ್ಥಳೀಯರೂ ಕೂಡಾ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಅಕ್ರಮ ಮರುಳುಗಾರಿಕೆ, ಅಕ್ಕಿ ಅಕ್ರಮ ಸಾಗಾಣಿಕೆ ನಿರಂತರವಾಗಿದೆ. ಆಂಧ್ರದಲ್ಲಿ ರಿಪಾಲಿಸಿಂಗ್ ಆಗುವ ಅಕ್ಕಿ ಮತ್ತೆ ರಾಜ್ಯಕ್ಕೆ ಬರುತ್ತಿದೆ.
ಐಪಿಲ್ ಬೆಟ್ಟಿಂಗ್ ನಡೆಯುತ್ತಿದೆ. ಸೋಲಾಪುರ ಪೊಲೀಸರು ಕಲಬುರಗಿ ಗೆ ಬಂದು ರೈಡ್ ಮಾಡಿದ್ದಾರೆ. ಕಲಬುರಗಿ ನಗರದಲ್ಲಿ ಲಾಡ್ಜ್ ಗಳಲ್ಲಿ ವಿಚಾರಣೆ ನಡೆಯುತ್ತಿದೆ. ಸೆಟಲ್‌ಮೆಂಟ್ ಲಾಡ್ಜ್ ಗಳಾಗಿ ಪರಿವರ್ತನೆಯಾಗಿವೆ.
ರಿಕ್ರಿಯೇಷನ್ ಕ್ಲಬ್ ಗಳು ನಡೆಯುತ್ತಿವೆ. ಪ್ರತಿ ವೈನ್ ಶಾಪ್ ಅಂಗಡಿಗಳಿಂದ, ಅಕ್ರಮ ಗುಟ್ಕಾ ಮಾರಾಟಗಾರರಿಂದ, ಅಕ್ರಮ ಜಿಲಿಟಿನ್ ಮಾರಾಟಗಾರರಿಂದ, ಅಕ್ರಮ ಮರುಳುಗಾರರಿಂದ, ಆಂಧ್ರದಿಂದ ಬಂದು ಜೂಜು ಆಡುವವರಿಂದ ಪ್ರತಿ ತಿಂಗಳಿಗೆ ರೂ 35-40 ಲಕ್ಷ ಹಫ್ತಾ ವಸೂಲಿಯಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಗೃಹಸಚಿವರು ಅಧಿಕಾರಿಗಳ ಸಭೆ ನಡೆಸಲಿ ನಾನು ಅಕ್ರಮದಲ್ಲಿ ಭಾಗಿಯಾಗುವ ಅಧಿಕಾರಿಗಳ ವಿವರ ಹೆಸರು ಸಹಿತ ಕಾಂಟ್ಯಾಕ್ಟ್ ನಂಬರ್ ಕೊಡಲು ಸಿದ್ದ. ಸರಕಾರ ಈ ಕುರಿತು ಸಮಗ್ರ ತನಿಖೆ ನಡೆಸಲಿ.
ಮಾಲೀಕಯ್ಯ ಗುತ್ತೇದಾರ ಅವರು ಮಹಾರಾಷ್ಟ್ರದಲ್ಲಿ ನನ್ನ ಪ್ರಭಾವ ಇದೆ ಎಂದರೆ ನನಗೆ ಖುಷಿ. ಅವರ ಬಗ್ಗೆ ನನಗೆ ಅಪಾರ ಗೌರವ ಇತ್ತು. ಈಗ ಅಲ್ಪ ಸ್ಬಲ್ಪ ಇದೆ. ಅದನ್ನೂ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು.
ಮಹಾರಾಷ್ಟ್ರ ಪೊಲೀಸರು ರೈಡ್ ಮಾಡಿದಾಗ ಕರ್ನಾಟಕ ನೋಂದಣಿ ಇರುವ ವಾಹನ ಸಿಕ್ಕಿದೆ. ಒಬ್ಬ ವ್ಯಕ್ತಿ ಪರಾರಿಯಾಗಿದ್ದಾರೆ. ಆ ವಾಹನ ಯಾರದು.? ಅವರು ಯಾರು.?
ಕಲಬುರಗಿ ಯುವಕರ ಭವಿಷ್ಯದ ಬಗ್ಗೆ ನನಗೆ ಕಾಳಜಿ ಇದೆ. ಐಪಿ ಎಲ್ ಬೆಟ್ಟಿಂಗ್ ದಂದೆಯಲ್ಲಿ ಯುವಕರ ಭವಿಷ್ಯದ ಹಾನಿಯಾಗಲು ನಾನು ಬಿಡುವುದಿಲ್ಲ. ಪ್ರಿಯಾಂಕ್ ಖರ್ಗೆ ಹೇಳಿರುವುದು ಸತ್ಯ ಎಂದು ಗುತ್ತೇದಾರ ಹೇಳಬೇಕಿತ್ತು.
ಆದರೆ, ಅದರ ಬದಲು ನನ್ನ ಮೇಲೆ ಆರೋಪ ಮಾಡಿದ್ದಾರೆ. ನೀವು ಗಮನಿಸಿ ಅವರ ಎಲ್ಲ ವ್ಯವಹಾರಗಳು ಯುವಕರ ಭವಿಷ್ಯ ಹಾಳು ಮಾಡುವಂತಿವೆ.
ಗುತ್ತೇದಾರ ಅವರು ಎಂ ಎಲ್ ಸಿ ಆಗುವ ಮಂತ್ರಿ ಆಗುವ ಯೋಚನೆಯಲ್ಲಿದ್ದರು ಅದು ಆಗಲಿಲ್ಲ. ಇತ್ತೀಚಿಗೆ ಪ್ರೆಸ್ ಮೀಟ್ ಮಾಡಿದ ಗುತ್ತೇದಾರ ಅವರು ಕಲಬುರಗಿ ಜಿಲ್ಲೆಗೆ ಮಂತ್ರಿ ಮಾಡಿ ಎಂದಿದ್ದಾರೆ. ಜಿಲ್ಲೆಯಲ್ಲಿ ಮೂರು ನಾಲ್ಕು ಮಂತ್ರಿ ಸ್ಥಾನ ಕೊಡದಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಯಾಕೆ ಹೇಳಲಿಲ್ಲ ? ಯಾಕೆ ಆ ಶಕ್ತಿ ಇಲ್ಲವೇ?
ಪ್ರಿಯಾಂಕ್ ಖರ್ಗೆಗೆ ಮಾಲೀಕಯ್ಯ ಗುತ್ತೇದಾರ ಅವರು ವಾರ್ನಿಂಗ್ ಮಾಡಿದ್ದಾರೆ ಎಂದು ಪತ್ರಿಕೆಯಲ್ಲಿ ಬಂದಿದೆ. ಇಂತಹ ವಾರ್ನಿಂಗ್ ಗಳನ್ನು ಬಿಜೆಪಿ ಹೈಕಮಾಂಡ್ ಗಳಿಗೆ ಕೊಡಲಿ. ಅಕ್ರಮ ದಂಧೆಗಳನ್ನು ಬಂದ್ ಮಾಡಲು, ಐಪಿಎಲ್ ಬೆಟ್ಟಿಂಗ್ ತಡೆಯಲು, ಜೂಜು ತಡೆಯಲು ಸರಕಾರಕ್ಕೆ ಬಿಜೆಪಿ ಹೈಕಮಾಂಡ್ ಗೆ ವಾರ್ನಿಂಗ್ ಮಾಡಲಿ ಎಂದರು.
ಮರಾಠ ಹಾಗೂ ವೀರಶೈವ- ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆ ಹಿನ್ನೆಲೆ:
ಅಭಿವೃದ್ದಿ ನಿಗಮಗಳು ಮಾಡುವುದು ಸರಕಾರ ವಿವೇಚನೆಗೆ ಬಿಟ್ಟಿದ್ದು. ಬಹುತೇಕ ಜನಾಂಗಗಳ ಅಭಿವೃದ್ದಿ ನಿಗಮ ಮಾಡಿದ್ದಾರೆ.
ಆದರೆ, ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಸರಕಾರ ಬಳಿ ದುಡ್ಡು ಎಲ್ಲಿದೆ.? ಬಿಸಿಊಟ, ಡಿ ಗ್ರುಪ್ ನೌಕರರಿಗೆ, ಎನ್‌ಇ ಕೆ ಆರ್ ಟಿ ಸಿ ನೌಕರರಿಗೆ ಸಂಬಳ ನೀಡಿಲ್ಲ. ನೌಕರರಿಗೆ ಸಂಬಳ ಇಲ್ಲದಿದ್ದರೆ ನಿಗಮಗಳಿಗೆ ಹೇಗೆ ಅನುದಾನ ಬಿಡುಗಡೆ ಮಾಡುತ್ತಾರೆ.?
ಜಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಚುನಾವಣೆ ನಂತರ ಅಧಿಕಾರಕ್ಕೆ ಬಂದಾಗ ಮರೆತು ಬಿಡುತ್ತದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರಿಸುವುದಾಗಿ ಹೇಳಿದ್ದರು ಈಗ ಆ ಮಾತು ಏನಾಯ್ತು? ಎಂದು ಪ್ರಶ್ನಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ್, ನೀಲಕಂಠ ಮುಲಗೆ ಇದ್ದರು.